ಪುಟ:ಪಾಲಿಗೆ ಬಂದ ಪಂಚಾಮೃತ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

59

... ಅದಾದ ಮೇಲೆ ಒಂದೊಂದಾಗಿ ದಿನಗಳು ಕಳೆದಿದ್ದುವು. ಕಾಹಿಲೆ ಬಿದ್ದಿದ್ದ
ಮಗುವೇನೋ ಚೇತರಿಸಿಕೊಂಡಿತು. ಆದರೆ ಸುನಂದೆಯ ಪಾಲಿಗೆ ಇದ್ದುದು, ಸಾವೂ
ಅಲ್ಲ ಬದುಕೂ ಅಲ್ಲ ಎನ್ನುವಂತಹ ಜೀವನ. ಮತ್ತೆ ಗಂಡ ಆಕೆಯ ಮೇಲೆ ಕೈ
ಮಾಡಲು ಬಂದಿರಲಿಲ್ಲ. ಸುನಂದೆಯೂ ಅಪ್ಪಿ ತಪ್ಪಿ ಆ ನೆನಪನ್ನು ಹುಟ್ಟಿಸುವ
ಒಂದು ಮಾತನ್ನೂ ಆಡಿರಲಿಲ್ಲ. ಗಂಡ ಬಂದು ವಿಷಾದ ಸೂಚಿಸಬಹುದೆಂಬ ಭ್ರಮೆ
ಇತ್ತು ಸುನಂದೆಗೆ. ಆ ಕ್ಷಮಾಯಾಚನೆಯ ಚಿತ್ರದ ಕಲ್ಪನೆ ಸುಂದರವಾಗಿತ್ತು. ಆಗ
ತಾನು ಗಂಭೀರವಾಗಿ ಕಾರುಣ್ಯಮೂರ್ತಿಯಾಗಿ ಹೇಗೆ ವರ್ತಿಸಬೇಕೆಂಬುದನ್ನೂ ಅವಳು
ನಿರ್ಧರಿಸಿದ್ದಳು. ಆದರೆ ಅಂತಹ ಅವಕಾಶ ಆಕೆಗೆ ದೊರಕಲಿಲ್ಲ. ಬಳಿಗೆ ಸುಳಿಯಲೇ
ಇಲ್ಲ ಆತ. ಸುನಂದೆಯಲ್ಲಿ ಉಳಿದಿದ್ದ ಕಟ್ಟಕಡೆಯ ಆ ಭ್ರಮೆಯೂ ಕರಗಿ
ಹೋಯಿತು.
ಮಗುವಿನೊಡನೆ ತವರು ಮನೆಗೆ ತಾನು ಹೊರಟು ಹೋಗಲೇ? ಎಂದೂ
ಸುನಂದಾ ಯೋಚಿಸಿದಳು. “ಹೋಗ್ಲೇನ್ರಿ?” ಎಂದು ರಾಧಮ್ಮನನ್ನೂ ಕೇಳಿದಳು.
ಅವರು ಒಪ್ಪಲಿಲ್ಲ. “ದುಡುಕ್ಬಾರದು” ಎಂದು ಸಲಹೆ ಮಾಡಿದರು.
ಸುನಂದಾ ದುಡುಕಲಿಲ್ಲ. ಅಲ್ಲದೆ, ತವರುಮನೆಯವರು ಏನೆನ್ನಬಹುದು? ಅಲ್ಲಿ
ಅವಿವಾಹಿತೆಯಾದ ತಂಗಿಯಿದ್ದಳು. ತಾನು ಅಲ್ಲಿಗೆ ಹೋದರೆ ಆಕೆ, 'ಗಂಡನಮನೆ
ಬಿಟ್ಟು ಬಂದವಳ ತಂಗಿ'ಯಾಗುವಳು. ಅಂತಹ ಪರಿಸ್ಥಿತಿಯಲ್ಲಿ, ತಾಯಿ ತಂದೆ ತನ್ನ
ಮಾತಿಗೆ ಗೌರವವಿತ್ತು, ತನಗೂ ಮಗುವಿಗೂ ಆಶ್ರಯ ಕೊಡುವರೆಂಬ ಭರವಸೆ ಏನು?
ಅವರು ತನ್ನನ್ನು ಹೊರಹಾಕಲಾರರು ನಿಜ. ಆದರೆ ತನ್ನಿಂದಾಗಿ ಅವರಿಗಾಗುವ
ಮನೋವ್ಯಥೆಯೆಷ್ಟು?
ಹೀಗೆ ಯೋಚಿಸಿ ಯೋಚಿಸಿ ಸುನಂದಾ ಮೆದುಳು ಬಿಸಿ ಮಾಡಿಕೊಂಡಳು.
ಅಷ್ಟೆ. ಅವಸರದಲ್ಲಿ ಕಾರ್ಯಪ್ರವೃತ್ತಳಾಗಲಿಲ್ಲ.
ಆದರೆ ತಂದೆಗೆ, ಆಕೆಯೊಂದು ದೀರ್ಘ ಕಾಗದ ಬರೆದಳು. 'ಜೀವನ ಎಂಬುದು
ನಾನು ಭಾವಿಸಿದಷ್ಟು ಸುಲಭವಲ್ಲ ಅಪ್ಪಾ' ಎಂದು ಬರೆದಳೇ ಹೊರತು, ಗಂಡ ತನಗೆ
ಹೊಡೆದನೆಂದು ತಿಳಿಸಲಿಲ್ಲ. ಮಗುವಿಗೆ ಪ್ರಾಣಾಂತಿಕ ಕಾಹಿಲೆಯಾಗಿದ್ದಿತು, ಎಂದು
ಬರೆದಳಲ್ಲದೆ, ಅದು ಸತ್ತಿದ್ದರೆ ಆ ಸಾವಿಗೆ ತನ್ನ ಗಂಡ ಕಾರಣನಾಗುತ್ತಿದ್ದನೆಂದು
ಹೇಳಲಿಲ್ಲ.

****

ಈ ಸಂಜೆ ಒಳಗೆ ಬಂದು ಮಗುವನ್ನು ಕುಣಿಸುತ್ತ ಆಡಿಸುತ್ತ ರಾಧಮ್ಮ ಹೇಳಿ
ದರು: “ನಿಮ್ಮ ಗಂಡ ದಿನಾ ಸಾಯಂಕಾಲ ಎಲ್ಲಿಗೆ ಹೋಗ್ತಾರೆ ಅನ್ನೋದನ್ನ ನಾನು
ಪತ್ತೆ ಹಚ್ತೀನಿ ಸುನಂದಾ.”
ಕಾತರ ಕುತೂಹಲಗಳು ಒಂದರೊಡನೊಂದು ಬೆರೆತು ಮಾತು ಹೊರಡಿಸಿದುವು
“ಹ್ಯಾಗೆ ಪತ್ತೆ ಹಚ್ತೀರಾ?”