ಪುಟ:ಪಾಲಿಗೆ ಬಂದ ಪಂಚಾಮೃತ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

60

ಕನಸು

“ಹೇಳ್ಲೇಬೇಕೇನು? ನಮ್ಮ ಶ್ಯಾಮ ಆ ಕೆಲಸ ಮಾಡ್ತಾನೆ. ನೀವು ಸ್ವಲ್ಪ
ಸುಧಾರಿಸ್ಕೊಂಡ್ಮೇಲೆ ಮಾಡೋಣಾಂತ ಸುಮ್ಮನಿದ್ದೆ.”
“ಶ್ಯಾಮನೆ?”
“ಹೂಂ. ನಿಮ್ಮ ಯಜಮಾನರ ಹಿಂದೆ ಆತನನ್ನ ಛೂ ಬಿಡ್ತೀನಿ.”
ಇದರಿಂದ ಒದಗಬಹುದಾದ ಅಪಾಯಗಳನ್ನು ಯೋಚಿಸುತ್ತ ಸುನಂದೆಯ
ಮುಖ ಸಪ್ಪಗಾಯಿತು.
“ಬೇಡಿ ರಾಧಮ್ನೋರೆ. ಶ್ಯಾಮ ಸಿಕ್ಕಿಬಿದ್ದರೆ ಅವರೇನಾದರೂ ಮಾಡ್ಬಹುದು.”
ರಾಧಮ್ಮ ನಕ್ಕರು:
“ನಮ್ಮ ಶ್ಯಾಮನೇ ಸಿಕ್ಕಿ ಬೀಳೋದು? ಸರಿ ಹೇಳಿದಿರಿ!”
ಗಾಢವಾಗಿದ್ದ ಆ ಸ್ವವಿಷಯ ಅಷ್ಟಕ್ಕೆ ನಿಂತು, ಆಗಲೆ ಬಂದು ಹೋಗಿದ್ದ
ಬಡವರ ಕಡೆಗೆ ಮಾತು ತಿರುಗಿತು.
“ಅವರನ್ನೆಲ್ಲ ನೋಡಿದಾಗ ನಾವೇ ಎಷ್ಟೋ ಪುಣ್ಯವಂತರೂಂತ ಅನಿಸುತ್ತೆ
ರಾಧಮ್ಮ."
“ಕಷ್ಟವಮ್ಮಾ ಕಷ್ಟ. ಬದುಕೋದೇ ಕಷ್ಟ. ಸ್ಟೇಷನ್ನು, ಮಾರ್ಕೆಟು, ಅಂಗಡಿ
ಬೀದಿ-ಎಷ್ಟೊಂದು ಜನ ಇಂಥವರು ಇದಾರೇಂತ. ಇನ್ನು ಭಿಕ್ಷುಕರೋ-ಅರ್ಧಕ್ಕರ್ಧ
ಇವರೇ, ಆಚೆ ಕಡೇ ಜನ....”
ಮಾತು ಆಚೆಗೆ ಹೊರಳಿತು, ಆ ನಾಡಿಗೆ-ಇನ್ನೊಂದಕ್ಕೆ. ಮತ್ತೆ ಹುಟ್ಟೂರಿಗೆ.
ಅವರ ತಾಯಿ ತಂದೆ, ಇವರ ತಾಯಿ ತಂದೆ........ಅವರ ಸಂಬಂಧಿಕರು... ....ಇವರ
ಸಂಬಂಧಿಕರು...
ಅದೆಷ್ಟು ಹೊತ್ತು ಹಾಗೆ ಮಾತನಾಡುತ್ತ ಕುಳಿತಿದ್ದರೊ.

****

ಗೆಳೆಯನೊಬ್ಬನನ್ನು ಕರೆದು ಮನೆಯಂಗಳದಲ್ಲಿ ಗೋಲಿಯಾಡುತಿದ್ದ ಶಾಮ್ಯ,
ಒಳಕ್ಕೆ ಓಡಿ ಬಂದು, ಅವರ ಮಾತುಕತೆಗೆ ಭಂಗತಂದ.
“ಅಮ್ಮಾ, ಅವರೆಲ್ಲಾ ಬಂದ್ಬಿಟ್ರು. ಇಲ್ಲೇ ಮನೆ ಕಟ್ಕೋತಾರಂತೆ.
ಹೌದಾ?”
ರಾಧಮ್ಮ ಎದ್ದು ನಿಲ್ಲುತ್ತ ಅಂದರು:
“ಇರಲಿ ಬಿಡೋ. ಬಡವರು. ಇನ್ನೇನ್ಮಾಡ್ತಾರೆ ಪಾಪ?”
ಆದರೆ ಶ್ಯಾಮನ ಆಕ್ಷೇಪಕ್ಕಿದ್ದ ಕಾರಣವೇ ಬೇರೆ.
“ಅಲ್ಲಿ ಕ್ರಿಕೆಟ್ ಆಟಕ್ಕೆ ಗ್ರೌಂಡ್ ಸರಿಮಾಡ್ಬೇಕೂಂತ ಇದ್ವಿ.”
ಸುನಂದಾ ಸಾಂತ್ವನದ ನುಡಿಯನ್ನಾಡಿದಳು:
“ಆಚೆಗಿರೋ ಮೈದಾನದಲ್ಲಿ ಆಡಿದರಾಯ್ತು.”
“ಊ... ಅಲ್ಲಿ ದೊಡ್ಡ ಹುಡುಗರು ಆಡ್ತಾರೆ.”