ಪುಟ:ಪಾಲಿಗೆ ಬಂದ ಪಂಚಾಮೃತ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

61

ಮಗನನ್ನು ನೋಡುತ್ತ ರಾಧಮ್ಮ ಅಂದರು:
“ಇವರೇನೂ ಬಹಳ ದಿವಸ ಇಲ್ಲಿ ಇರೋಲ್ಲ ಶ್ಯಾಮೂ. ಬೇಗ್ನೆ ಹೊರ
ಟ್ಹೋಗ್ತಾರೆ.”

೧೦

ಆ ವಾರವೆ ಒಂದು ಸಂಜೆ ಪುಟ್ಟಣ್ಣ ಹೊಟ್ಟೆ ಸರಿಯಾಗಿರಲಿಲ್ಲವೆಂದು ಮನೆಗೆ
ಬರಬೇಕಾಯಿತು. ನೈಸರ್ಗಿಕ ಕ್ರಿಯೆಯನ್ನು ಮುಗಿಸಿಯೇ ಸ್ನೇಹಿತರ ಮನೆಗೆ ಹೊರ
ಡೋಣವೆಂದು ಆತ ಯೋಚಿಸಿದ.
ಆತ ಬಂದುದನ್ನು ಕಂಡೊಡನೆಯೇ ರಾಧಮ್ಮ ಕಾರ್ಯೋನ್ಮುಖರಾದರು.
ಬಂದು ಸ್ವಲ್ಪ ಹೊತ್ತಾದ ಬಳಿಕ ಪುಟ್ಟಣ್ಣ ಮನೆಯಿಂದ ಹೊರಬಿದ್ದ. ಯೋಚ
ನೆಯ ಪಿಶಾಚಿಗಳ ಸಹವಾಸ ಸುಖದಲ್ಲಿ ತನ್ಮಯನಾಗಿದ್ದ ಆತನಿಗೆ ರಾಧಮ್ಮನ ಮಗ
ಶ್ಯಾಮ ತನ್ನನ್ನು ಹಿಂಬಾಲಿಸುತ್ತಿದ್ದುದು ಕಾಣಿಸಲೇ ಇಲ್ಲ. ಆದರೆ ಒಂದು ಫರ್ಲಾಂಗಿ
ನಾಚೆ ಸ್ನೇಹಿತರ ಮನೆಗೆ ತಿರುಗಿಕೊಂಡಾಗ ಪುಟ್ಟಣ್ಣ, ದೂರದಲ್ಲಿ ಬರುತ್ತಿದ್ದ, ಶ್ಯಾಮ
ನನ್ನು ಗುರುತಿಸಿದ.
'ಹುಡುಗ ನನ್ನನ್ನು ನೋಡಲಿಲ್ಲವಲ್ಲ ಸದ್ಯಃ'
—ಎಂದು ಆತ, ಕ್ಷೋಭೆಗೊಂಡ ಮನಸ್ಸಿಗೆ ಸಮಾಧಾನ ಹೇಳಿದ.
'ನೋಡಿದರೂ ಏನೀಗ? ಹೋಗಿ ಹೇಳ್ತಾನೆ, ಅಷ್ಟೆ ತಾನೆ? ನಾನು ಮಾಡ್ತಿ
ರೋದು ಎಲ್ಲರಿಗೂ ಗೊತ್ತಾಗೋದೇ ಮೇಲು. ಮುಚ್ಚಿಟ್ಟು ಆಗಬೇಕಾದ್ದೇನು?'
—ಎಂದು ಜತೆಯಲ್ಲೇ ಬಂದ ತರ್ಕಸರಣಿ ಆತನ ಮನಸ್ಸಿಗೆ ನೆಮ್ಮದಿ ನೀಡಿತು.
ನಡುವೆ ತೂರಿಬಂದ ಆ ಯೋಚನೆಯನ್ನು ಬಲು ಸುಲಭವಾಗಿ ಪುಟ್ಟಣ್ಣ ಬದಿಗೆ
ತಳ್ಳಿದ.
... ರಾತ್ರಿ ಮನೆಗೆ ಹಿಂತಿರುಗಿದ ಮೇಲೆಯಷ್ಟೇ ಮತ್ತೆ ಆತನಿಗೆ ಅದರ ನೆನ
ಪಾದುದು. ಉದ್ದೇಶಪೂರ್ವಕವಾಗಿಯೇ ಶ್ಯಾಮ ತನ್ನನ್ನು ಹಿಂಬಾಲಿಸಿದ್ದರೆ, ಮನೆಗೆ
ಬಂದು ವರದಿ ಕೊಡುತ್ತಿದ್ದ. ವರದಿ ಕೊಟ್ಟಿದ್ದರೆ, ಅದರ ಪ್ರತಿಕ್ರಿಯೆಗಳನ್ನು
ಸುನಂದೆಯ ಮುಖದ ಮೇಲೆ ಕಾಣುವುದು ಸಾಧ್ಯವಿತ್ತು. ಆದರೆ ಅಲ್ಲೇನೂ
ಇರಲಿಲ್ಲ.
...ಮಾರನೆಯ ದಿನ ಬೆಳಗ್ಗೆ ಕೆಲಸಕ್ಕೆ ಹೊರಡುತ್ತಿದ್ದಂತೆ, ಪುಟ್ಟಣ್ಣನ ದೃಷ್ಟಿ
ನೆರೆಮನೆಯತ್ತ ಸರಿಯಿತು. ಆತನೆದುರಿನಲ್ಲೇ ಶ್ಯಾಮ, ಬೌಲ್ ಮಾಡುವವನಂತೆ
ತೋಳು ಬೀಸುತ್ತ ಹೊರಟು ಹೋದ.