ಪುಟ:ಪಾಲಿಗೆ ಬಂದ ಪಂಚಾಮೃತ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

62

ಕನಸು

'ಆ ಮಗೂಗೆಲ್ಲಾ ಇದೇನು ಅರ್ಥವಾಗುತ್ತೆ? ಸುಮ್ಮನೆ ಇಲ್ಲದ ಯೋಚನೆ
ಯನ್ನೆಲ್ಲ ತಲೆಗೆ ತುಂಬಿಕೊಂಡು ಬೇಸ್ತು ಬಿದ್ದೆ'
—ಎಂದು ತನ್ನೊಳಗೇ ನಕ್ಕ.
'ಅಲ್ಲದೆ, ಒಂದು ವೇಳೆ ಆ ಹುಡುಗ ಮನೇನ ಗುರುತಿಟ್ಟುಕೊಂಡ ಅಂದರೂ
ಅದರಿಂದಾಗೋ ನಷ್ಟವೇನು? ಸ್ನೇಹಿತರ ಮನೆಗೆ ತಾನು ಹೋಗ್ತಿರೋದು ಅಂತ
ಸುನಂದೆಗೆ ಗೊತ್ತಿಲ್ಲವೇ? ಆ ರಾಧಮ್ಮನಿಗೆ ಗೊತ್ತಿಲ್ಲವೆ?'
—ಎಂಬ ಪ್ರಶ್ನೆಗಳು ಒಳಗಿನಿಂದ ಕೇಳಿಸಿದುವು.
'ಇದೊಳ್ಳೇ ತಮಾಷೆ. ಪುನಃ ಮಹಾಪರಾಧಿಯ ಮನೋವೃತ್ತಿ ಬಂತೆ!
ಇಷ್ಟೂ ಪುಕ್ಕಲೆ ನಾನು?'
—ಎಂದು ಈ ಸಲ ಸ್ವಲ್ಪ ಗಟ್ಟಿಯಾಗಿಯೇ ಪುಟ್ಟಣ್ಣ ನಕ್ಕ.
...ಆ ದಿನ ಸಂಜೆ ಮನೆಗೆ ಹೋಗದೆ ನೇರವಾಗಿಯೇ ಆತ ಸ್ನೇಹಿತರಲ್ಲಿಗೆ
ನಡೆದ.
'ಶ್ಯಾಮ ಹಿಂಬಾಲಿಸಬಹುದೂಂತ ಹೆದರಿಕೊಂಡು ಹೀಗೆ ಮಾಡಿಲ್ಲ ತಾನೆ?'
—ಎಂದು ಒಳದನಿ ಕುಹಕದ ಪ್ರಶ್ನೆ ಕೇಳಿತು. ಪುಟ್ಟಣ್ಣ ಹುಬ್ಬು ಗಂಟಿಕ್ಕಿ
ಸುಮ್ಮನಾದ. ಮನಸ್ಸಿಗೆ ಉತ್ತರ ಕೊಡುವ ಗೊಡವೆಗೆ ಹೋಗಲಿಲ್ಲ.
ಅಲ್ಲೆಲ್ಲೂ ಶ್ಯಾಮ ಕಾಣಿಸಲಿಲ್ಲ. ಹಾಗೆ ಆದುದು ಮೊದಲ ದೃಷ್ಟಿಗೆ ಆದರೆ
ಮತ್ತೊಮ್ಮೆ ನೋಡಿದಾಗ-
ಅಲ್ಲಿ ಸ್ವಲ್ಪ ದೂರದಲ್ಲೆ ಗೆಳೆಯರೊಡನೆ ಬೆರೆತು ಗೋಲಿಯಾಡುತ್ತಿದ್ದ
ಶ್ಯಾಮ. ಆತ ತನ್ನನ್ನು ಗುರುತಿಸಿದಂತೆಯೂ ಕಂಡಿತು.
ಆತನ ಮನಸ್ಸು ರೋಸಿ ಹೋಯಿತು. ತನ್ನನ್ನು ಹಿಂಬಾಲಿಸಲು ಸುನಂದಾ
ಆ ಹುಡುಗನನ್ನು ಕಳುಹಿರಬಹುದೆ? ಇದೆಲ್ಲ ಆ ರಾಧಮ್ಮನ ಫಿತೂರಿಯಾಗಿದ್ದೀತೇ?
ಅಷ್ಟೂ ಧೈರ್ಯ ಬಂತೆ ಆ ಹೆಂಗಸರಿಗೆ?
—ಅಥವಾ ತನ್ನ ಈ ಯೋಚನೆಯೆಲ್ಲ ಬರಿಯ ಭ್ರಮೆಯೆ? ಬೀದಿ ಬೀದಿ
ಅಲೆಯುವ ಬಾಲ ಬುದ್ಧಿಯ ಶ್ಯಾಮ ಇಲ್ಲಿರುವುದು ಸ್ವಾಭಾವಿಕವಲ್ಲವೆ?
ಮತ್ತೆ ಆ ಯೋಚನೆಗಳನ್ನೆಲ್ಲ ಮರೆಯಲೆತ್ನಿಸುತ್ತ, “ಇವರ ಮನೆ ಸುಟ್ಟಿತು”
ಎಂದು ಗೊಣಗಿ, ಪುಟ್ಟಣ್ಣ ಆ ಮನೆಯೊಳಕ್ಕೆ ಹೋದ.
ಕತ್ತಲಾದ ಮೇಲೊಮ್ಮೆ ಹೊರಕ್ಕೆ ಬಂದು, ಇನ್ನೂ ಶ್ಯಾಮ ಅಲ್ಲೇ ನಿಂತಿರ
ಬಹುದೇನೋ ಎಂದು ಇಣಿಕಿ ನೋಡಿದ. ಆ ಕತ್ತಲಲ್ಲಿ ಅಲ್ಲಲ್ಲಿ ಬೆಳಕಿರುತ್ತಿತ್ತು—
ಅಲ್ಲಲ್ಲಿ ನೆರಳು. ಜನರು ಓಡಾಡುತ್ತಿದ್ದರು-ಚಿಕ್ಕವರು ಮತ್ತು ದೊಡ್ಡವರು. ಆದರೆ,
ಇಂಥದು ಇಂಥದೇ ಮನುಷ್ಯಾಕೃತಿ ಎಂದು ಗುರುತು ಹಿಡಿಯುವುದು ಸಾಧ್ಯವಿರಲಿಲ್ಲ.
....ಅದರ ಮಾರನೇ ದಿನ ಶ್ಯಾಮ ಅಲ್ಲಿರಲಿಲ್ಲ. ಅದರಿಂದ ಪುಟ್ಟಣ್ಣನಿಗೆ ಸಮಾ
ಧಾನವೆನಿಸಿತು.