ಪುಟ:ಪಾಲಿಗೆ ಬಂದ ಪಂಚಾಮೃತ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

64

ಕನಸು

ತನ್ನನ್ನು ಹಿಡಿತದೊಳಗಿಟ್ಟು ಕೊಂಡೇ ಪುಟ್ಟಣ್ಣ ಮನಸ್ಸಿನೊಳಗೇ ಅಂದ:
'ನಾನು ಎಂಥವನು ಅನ್ನೋದನ್ನ ಇವತ್ತು ತೋರಿಸಿಕೊಡ್ತೀನಿ.'

****

ತಾಯಿಯ ಅಪೇಕ್ಷೆಯಂತೆ ಅತ್ಯಂತ ದಕ್ಷತೆಯಿಂದ ಪುಟ್ಟಣ್ಣನನ್ನು ಸಂಜೆ
ಹಿಂಬಾಲಿಸುತ್ತಿದ್ದ ಶ್ಯಾಮ, ಪ್ರತಿ ದಿನವೂ ಮನೆಯಲ್ಲಿ ವರದಿಯೊಪ್ಪಿಸುತ್ತಿದ್ದ-
ಇದ್ದುದು ಇದ್ದಂತೆ.
ಆ ಸುದ್ದಿಯನ್ನೆಲ್ಲ ರಾಧಮ್ಮ ಸುನಂದೆಗೆ ತಿಳಿಸುತ್ತಿದ್ದರು.
ಬಳಿಕ, ಸುನಂದಾ ಶ್ಯಾಮನೊಬ್ಬನನ್ನೇ ಕರೆದು, ಆತನ ಬಾಯಿಯಿಂದಲೇ
ಮತ್ತೊಮ್ಮೆ ಅದನ್ನೆಲ್ಲ ಕೇಳುತ್ತಿದ್ದಳು.
-ಅದು ವೇಶ್ಯೆಯರ ಮನೆಯಾಗಿರಲಿಲ್ಲ. ಪುಟ್ಟಣ್ಣನ ಸ್ನೇಹಿತರೊಬ್ಬರ,
ಸಂಭಾವಿತರ, ಮನೆಯೇ. ಅಲ್ಲಿ ದೊಡ್ಡ ದೊಡ್ಡವರೇ ನಾಲ್ಕಾರು ಜನ ಕಲೆತು,
ಇಸ್ಪೀಟು ಎಲೆಗಳ ಆಟವಾಡುತ್ತಿದ್ದರು-ದುಡ್ಡಿಟ್ಟು ಆಡುತ್ತಿದ್ದರು. ಆ ಆಟದ ಜತೆ
ಯಲ್ಲೇ ಕುಡಿತ. ಅಷ್ಟೆ.
ಗಂಡ, ಹೆಣ್ಣಿನ ಮೋಹಕ್ಕೆ ಬಲಿ ಬಿದ್ದಿಲ್ಲವೆಂದು ತಿಳಿದು ಸುನಂದಾ ಸ್ವಲ್ಪ
ಸಮಾಧಾನಗೊಂಡಳು.
ಆದರೆ ರಾಧಮ್ಮನೆಂದರು:
“ಇದು ಇಂಥಲ್ಲೇ ನಿಲ್ಲುತ್ತೆ ಅಂತ ಹೇಳೋಕಾಗಲ್ಲ ಸುನಂದಾ. ಇದು ಜಾರು
ಗುಂಡಿ. ಒಮ್ಮೆ ಜಾರಿದರೆ ಜಾರ್ತಾನೇ ಇರೋದೇ."
ಆ ಮಾತು ಕೇಳಿ ಸುನಂದೆಯ ಮುಖ ಕಪ್ಪಿಟ್ಟಿತು. ಆಕೆಯ ಮನಸ್ಸು ನೋಯಿ
ಸಿದೆನೆಂದು ವ್ಯಸನಪಡುತ್ತ ರಾಧಮ್ಮ ಅಂದರು:
“ಹೆದರಬೇಡಿ ಸುನಂದಾ. ನಿಮ್ಮ ಗಂಡನನ್ನ ಉಳಿಸ್ಕೊಳ್ಳೋದು ಸಾಧ್ಯ.”
ಆದರೆ, ಆ ಧೈರ್ಯದ ಮಾತಿನ ಹಿಂದೆಯೇ ಆಕೆಗರಿಯದಂತೆಯೇ ಬೇರೆ
ಮಾತು ಹೊರಟಿತು.
“ಆದರೂ ನಿಮ್ಮ ಗಂಡ ವಿಚಿತ್ರ ಮನುಷ್ಯ ಕಣ್ರೀ. ಗಂಡಸು ಜಾತಿ ಹೀಗೂ
ಬದಲಾಗೋದನ್ನ ನಾನು ಈವರೆಗೂ ಕಂಡಿಲ್ಲವಮ್ಮ.”
....ಆ ಸಂಜೆ, ಸುನಂದಾ-ರಾಧಮ್ಮ ಮಾತನಾಡುತ್ತಾ ಕುಳಿತಿದ್ದಾಗಲೇ ಶ್ಯಾಮ
ಓಡುತ್ತಾ ಬಂದ.
“ಅಮ್ಮಾ, ಅಮ್ಮಾ, ಅವರು ನನ್ನ ಕರೆದು ಮಾತನಾಡಿಸಿದರು ಇವತ್ತು.”
ಸುನಂದಾ ಕಾತರಗೊಂಡು ಕೇಳಿದಳು:
“ಏನಂದರು ಶ್ಯಾಮು?”
“ತಡವಾಗಿ ಬರ್ತೀನೀಂತ ಮನೇಲಿ ಹೇಳು ಅಂದ್ರು. ಪೆಪ್ಪರ್‌ಮಿಂಟ್ ಕೊಡಿ
ಸೋಕೆ ಬಂದ್ರು. ಬೇಡ ಅಂದ್ಬಿಟ್ಟೆ.”