ಪುಟ:ಪಾಲಿಗೆ ಬಂದ ಪಂಚಾಮೃತ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

66

ಕನಸು

ಬಾಯಿ ಮುಚ್ಚಿಹೋಯಿತು. ಏಟುಗಳು ಒಂದರ ಮೇಲೊಂದಾಗಿ ಬಂದುವು.
ಬೈಗಳು ಕೂಡ. “ನನ್ನ ಮೇಲೆ ಸಿ.ಐ.ಡಿ. ಗಳನ್ನ ಕಳಿಸ್ತಾಳೆ ಬಜಾರಿ!”
—“ಈ ಮನೆ ಅನ್ನ ತಿಂದು ಕೊಬ್ಬಿ ಹೋಗಿದೀ, ಅಲ್ಲ?”
—“ಇವತ್ತು ಇಳಿಸ್ತೀನಿ ನಿನ್ನ ಸೊಕ್ಕು.”
ರಪ್_ರಪ್_ರಪ್.
ಸುನಂದಾ ಬೆಲ್ಟನ್ನು ಕಸಿದುಕೊಳ್ಳಲು ಯತ್ನಿಸಿದಳು, ಪ್ರತಿಭಟಿಸಿದಳು. ಪರಿ
ಣಾಮವಾಗಿ ಮತ್ತಷ್ಟು ಏಟು ತಿಂದಳು.
ಪುಟ್ಟಣ್ಣ ಆವೇಶಗೊಂಡು ಸುನಂದೆಯನ್ನು ಎಳೆದು ಉರುಳಿಸಿದ. ಒಂದು
ಕಾಲದಲ್ಲಿ, ತಾನು ಪ್ರೀತಿಯಿಂದ ಮುಟ್ಟುತ್ತಿದ್ದ ಮುದ್ದಿಸುತ್ತಿದ್ದ ಆ ದೇಹದ ತುಂಬಾ
ಚುಚ್ಚಿ ಕಚ್ಚಿ ಪರಚಿ ಗಾಯಮಾಡಿದ.
ಒಳಗೆ ಮಗು ಎದ್ದು ಗಟ್ಟಿಯಾಗಿ ಅಳತೊಡಗಿತು.
ಸುನಂದಾ ನೋವು ತಡೆಯಲಾರದೆ, “ಅಮ್ಮಾ, ಅಮ್ಮಾ” ಎಂದಳು.

೧೧

ಮಾರನೆಯ ಬೆಳಗ್ಗೆ ಸುನಂದಾ ಏಳಲಿಲ್ಲ. ಮೈ ಕೆಂಡವಾಗಿತ್ತು. ಎಚ್ಚರವಾಗಿ
ದ್ದರೂ ಮಲಗಿದಲ್ಲಿ ಆಕೆ ಯೋಚಿಸಿದಳು:
ಯಾಕಾದರೂ ಬೆಳಗಾಯಿತೊ? ಎಷ್ಟೊಂದು ಮೇಲಾಗುತಿತ್ತು ಹೀಗೆಯೇ
ಸಾವು ಬಂದಿದ್ದರೆ! ಯಾವ ಪುಣ್ಯ ಸಂಚಯಕ್ಕೋಸ್ಕರ ತಾನು ಬದುಕಬೇಕು? ಮಗುವಿ
ಗೋಸ್ಕರವೆ? ಮಗು ತನ್ನದು ಎಷ್ಟೋ, ಹಾಗೆಯೇ ಆತನದೂ ಅಲ್ಲವೆ? ಆತನಿಗೆ
ಕೂಸಿನ ಯೋಚನೆಯೇ ಇಲ್ಲವೆಂದಾದ ಮೇಲೆ, ತಾನು ಯಾತಕ್ಕೆ ಗೋಳಾಡ
ಬೇಕು?...
....ಇತ್ತ ಪುಟ್ಟಣ್ಣ ಎದ್ದ. ತಲೆ ಸಿಡಿಯುತ್ತಿತ್ತು. ಹೆಂಡತಿಯನ್ನು ದಂಡಿಸಿದ್ದ
ಅವನ ಕೈ-ತೋಳುಗಳು ನೋಯುತ್ತಿದ್ದುವು.
ಎಚ್ಚರಗೊಂಡ ಅವನ ಕಿವಿಗಳು ಸದ್ದಿಗಾಗಿ ನಿಮಿರಿ ನಿಂತುವು. ಬಚ್ಚಲು
ಮನೆಯ ಕೊಳಾಯಿಯಿಂದ ನೀರು ಸುರಿಯುವ ಸದ್ದಾಗಬೇಕು. ಅಡುಗೆ ಮನೆಯ
ಬಾಗಿಲು ತೆರೆಯುವ ಸಪ್ಪಳ,-ಒಂದೂ ಇರಲಿಲ್ಲ ಇವತ್ತು.
ಇವಳೇನು—ರಾತ್ರೆಯೇ ಮಗುವನ್ನೆತ್ತಿಕೊಂಡು ಎಲ್ಲಿಗಾದರೂ ಓಡಿ
ಹೋದಳೊ? ಎಂಬ ಸಂಶಯವೂ ಆತನ ತಲೆಯನ್ನು ಹೊಕ್ಕಿತು. ಆ ಯೋಚನೆ
ಯಿಂದ ಒಮ್ಮೆ ಎದೆ ಬಡಿತ ತೀವ್ರವಾದರೂ 'ಹಾಗೇನಾದರೂ ಆದರೆ ಸ್ವಾರಸ್ಯವಾಗಿ
ರುತ್ತೆ' ಎಂಬ ವಿಚಾರ ತಲೆದೋರಿ, ಕೊಂಕು ನಗೆ ತುಟಿಗಳ ಮೇಲೆ ಸುಳಿಯಿತು.