ಪುಟ:ಪಾಲಿಗೆ ಬಂದ ಪಂಚಾಮೃತ.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

4

ಕನಸು

ಆದರೆ ಮನೆಯವರು ಬಟ್ಟೆ ಹಾಕುವುದನ್ನೇ ನಿಲ್ಲಿಸಿದ ಮೇಲೆ, ಬಾಕಿಯಾಗಿದ್ದ
ಹದಿನಾರು ರೂಪಾಯಿಯಷ್ಟರ ಹಣದ ಯೋಚನೆಯನ್ನು ಆತ ಮಾಡಲೇಬೇಕಾಯಿತು.
ಒಳಗೆ ಎಚ್ಚರಗೊಂಡ ಮಗು ತಾಯಿಯನ್ನು ಕಾಣದೆ ಗಟ್ಟಿಯಾಗಿ ಅತ್ತಿತು.
ಅಳುವ ಧ್ವನಿ ಕೇಳುತ್ತಲೆ ಸುನಂದಾ ಒಳಕ್ಕೆ ಧಾವಿಸಲು ಸಿದ್ದಳಾದಳು.
“ಇವತ್ತು ಖಂಡಿತ ಕೊಡೋ ಹಾಗೆ ಹೇಳೀನಪ್ಪ,”
ಮಗುವಿನ ರೋದನವನ್ನು ಕೇಳಿ ಅಗಸರವನು ಸುಮ್ಮನಾದ. ಮನೆಯೊಡತಿಯ
ಗೆಲುವಿನ ಮುಖವಾಡದ ಹಿಂದೆ ಸಪ್ಪೆ ಮೋರೆ ಇದ್ದುದನ್ನೂ ಅನುಭವಿಯಾದ ಆತ
ಗಮನಿಸಿದ.
“ಅಂಗೇ ಆಗ್ಲೇಳಿ”
-ಎಂದು ಉತ್ತರವಿತ್ತು ಅವನು ಹೊರಟು ಹೋದ.
ಸುನಂದಾ ಬಾಗಿಲು ಮುಚ್ಚಿ ಅಗಣಿ ಹಾಕಿ ಮಗುವಿನೆಡೆಗೆ ನಡೆದಳು.
“....ಜೋ ಜೋ ಕಂದಮ್ಮ ಜೋ ಜೋ ....”
ಕಿರೀ ಕಿರೀ ಎಂದು ತೊಟ್ಟಿಲಿನ ಕ್ರಮಬದ್ಧ ಹಿಮ್ಮೇಳ....ತಾಯಿಯ ಮುಖ
ನೋಡಿ ಮಗು ಸಮಾಧಾನಗೊಂಡು ಸುಮ್ಮನಾಯಿತು.
ಹೊರಗಿನವನಿಗೋಸ್ಕರ ತೋರ್ಪಡಿಸಿದ್ದ ಮುಖಭಾವ ಬದಲಿತು. ಸುಂದರಿ
ಯಾದ ಸುನಂದೆಯ ಕಣ್ಣುಗಳಿಂದ ಕಂಬನಿ ಹಣಿಕಿ ನೋಡಿತು.
****
ಹಾಗೆ ಬಾಗಲಿಗೆ ಬಂದವನು ಅಗಸರವ ಮೊದಲಿಗನಾಗಿರಲಿಲ್ಲ. ಹಿಂದಿನ ದಿನ
ಹಾಲಿನವನೂ ಬಂದು ಸ್ವಲ್ಪ ನಿಷ್ಟುರವಾಗಿಯೇ ಆಡಿದ್ದ.
ಕೆಲಸದವಳನ್ನೂ ಹೋಗೆಂದು ಹೇಳಬೇಕಾಗಿ ಬಂದ ಪ್ರಮೇಯ...... ಆಕೆಗೆ
ಕೊಡುತ್ತಿದ್ದುದು ತಿಂಗಳಿಗೆ ಮೂರು ರೂಪಾಯಿ ಮತ್ತು ಒಂದಿಷ್ಟು ಅನ್ನ ಸಾರು.
ಅಷ್ಟನ್ನು ಕೊಡುವುದೂ ಸಾಧ್ಯವಾಗದೆ ಹೋಯಿತು.
ಆಕೆ ಕೇಳಿದ್ದಳು:
“ಯಾಕಮ್ಮಣ್ಣೀ, ಬೇರೆ ಯಾರನಾರಾ ಗೊತ್ಮಾದ್ಕಂದಿದೀರಾ?”
“ಇಲ್ಲ ಕಣೇ. ನಿನ್ನ ಬಿಟ್ಟಿಟ್ಟು ಇನ್ನೊಬ್ಬಳ ಕರೀತೀನಾ?”
“ಮತ್ಯಾಕಮ್ಮಣ್ಣೀ?”
“ಸ್ವಲ್ಪ ದಿವಸ ನಾನೇ ನೋಡ್ಕೊಬೇಕಂತ ಮಾಡಿದೀನಿ.”
ಕ್ಷಣ ಕಾಲ ಮೌನವಾಗಿದ್ದು ಕೆಲಸದವಳು ತಗ್ಗಿದ ಸ್ವರದಲ್ಲಿ ಕೇಳಿದ್ದಳು:
“ಸ್ವಾಮಿಯೋರ ಕೆಲಸ ಹೋಯಿತೇಗ್ರಮ್ಮ?”
ಆ ಮಾತು ಕೇಳಿ ಸುನಂದೆಗೆ ಹಾವು ಮೆಟ್ಟಿದ ಹಾಗೆ ಅನುಭವವಾಗಿತ್ತು.
ಆದರೂ ನಕ್ಕು ಆಕೆಯೆಂದಿದ್ದಳು:
“ಇಲ್ಲವಪ್ಪ ಸದ್ಯ !! ಯಾಕೆ ಹಾಗಂತೀಯಾ?”