ಪುಟ:ಪಾಲಿಗೆ ಬಂದ ಪಂಚಾಮೃತ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

67

ಮತ್ತೂ ಕೆಲವು ನಿಮಿಷಗಳ ಕಾಲ ಪುಟ್ಟಣ್ಣ ಮೌನವಾಗಿಯೇ ಇದ್ದ. ಬಲು
ದೀರ್ಘವೆಂದು ತೋರಿದ ಆ ಕಾಲಾವಧಿಯ ಕೊನೆಯಲ್ಲಿ, ಗೋಡೆಯ ಆಚೆಯಿಂದ
ಸುನಂದೆ ನರಳಿದ ಸದ್ದಾಯಿತು.
ಮಲಗಿದ್ದಲ್ಲೆ ಪುಟ್ಟಣ್ಣ ಹುಬ್ಬು ಗಂಟಿಕ್ಕಿದ. ತನ್ನನ್ನು ಪರೀಕ್ಷಿಸಲು ನಟನೆ
ಮಾಡುತ್ತಿರುವಳೇನೊ ಎಂದುಕೊಂಡ. ನೋಡಿಯೇ ಬಿಡೋಣ ಇದೂ ಒಂದು
ನಾಟಕ— ಎಂದು ಮನಸ್ಸು ಗಟ್ಟಿ ಮಾಡಿದ.
ಅಷ್ಟರಲ್ಲೆ ಬಾಗಿಲು ಬಡಿದ ಸಪ್ಪಳವಾಯಿತು. ಒಂದು ಸಾರೆ, ಎರಡು ಸಾರೆ.
ಹಾಲಿನವಳು ಬಂದಿದ್ದಳು. ಈಗಲಾದರೂ ಏಳಬಹುದು—ಎಂದು ಪುಟ್ಟಣ್ಣ
ಸುಮ್ಮನಿದ್ದ.
ಆದರೆ ಸುನಂದಾ ಏಳುವ ಲಕ್ಷಣವೇ ಕಾಣಿಸಲಿಲ್ಲ. ಬಾಗಿಲು ಬಡೆಯುವ ಸದ್ದು
ಮಾತ್ರ ಹೆಚ್ಚಾಯಿತು. ಹಾಲಿನವಳ ಕೂಗು ಕಿಟಿಕಿಯ ಎಡೆಯಿಂದ ನುಸುಳಿ ಕೊಠಡಿ
ಗಿಳಿಯಿತು.
“ಯವ್ವಾ, ಆಲು ಆಕಿಸ್ಕೊಳ್ರೆವ್ವಾ...”
ಹಾಲಿನವಳು ಹೊರಟಾದರೂ ಹೋಗಬಾರದೆ?-ಎಂದು ಪುಟ್ಟಣ್ಣ ಗೊಣಗಿದ.
ಅವಳು ಹಾಲು ಕೊಡದೆ ಹೋಗುವುದುಂಟೆ?
ಕೊನೆಗೆ, ಬಾಗಿಲು ತಟ್ಟುವ ಸದ್ದಾದರೂ ನಿಲ್ಲಲೆಂದು, ಪುಟ್ಟಣ್ಣ ಎದ್ದು ಬಂದು
ಕದ ತೆರೆದ. ಎದುರಿಗಿದ್ದ ಹಾಲಿನವಳಿಗಿಂತಲೂ ಎದುರು ಮನೆಯ ಬಾಗಿಲಲ್ಲಿದ್ದ
ರಾಧಮ್ಮ ಆತನ ಕಣ್ಣಿಗೆ ಮೊದಲು ಬಿದ್ದರು. ಹಾಲಿನವಳ ಸದ್ದು ಕೇಳಿ ಆಕೆ ಹೊರ
ಬಂದಿದ್ದರೆಂಬುದು ಸ್ಪಷ್ಟವಾಗಿತ್ತು. ಆಕೆಯನ್ನು ನುಂಗಿ ಬಿಡುವವನಂತೆ ನೆಟ್ಟ ದೃಷ್ಟಿ
ಯಿಂದ ಪುಟ್ಟಣ್ಣ ನೋಡಿದ.
ಹಜಾರದಿಂದಲಂತೂ ಸುನಂದೆಯ ಸುಳಿವಿರಲಿಲ್ಲ.
“ಇವತ್ತು ಹಾಲು ಬೇಡ ಹೋಗವ್ವ"
—ಎಂದು ಪುಟ್ಟಣ್ಣ ಹಾಲಿನವಳಿಗೆ ಹೇಳಿದ.
“ಆಲು ಬೇಡ ಅಂದರೆ ನಾನೇನು ಮಾಡ್ಲಿ ಸಾಮಿ? ಆಕಿಸ್ಕೊಳ್ಳಿ. ಆಗೆಲ್ಲ
ವರ್ತನೆ ಆಲ್ನ ಬೇಡ ಅನ್ನೋಕಾಗ್ತದಾ?”
ಸಂಸಾರಕ್ಕೆ ಸಂಬಂಧಿಸಿದ, ಹಾಲು ಹಾಕಿಸಿಕೊಳ್ಳುವ, ಈ ಪುಟ್ಟ ವಿಷಯದಲ್ಲಿ
ಏನು ಮಾಡಬೇಕೆಂದು ತಿಳಿಯದೆ ಪುಟ್ಟಣ್ಣ ತಬ್ಬಿಬ್ಬಾದ.
ಆತನ ಆವಸ್ಥೆಯನ್ನು ಗಮನಿಸಿ ಹಾಲವ್ವನೇ ಕೇಳಿದಳು:
“ಯಾಕ್ಸಾಮಿ, ಅಮ್ಮಾವ್ರು ಊರಿಗೆ ಒಂಟೋದ್ರಾ?”
ಹೊರಟು ಹೋಗಿದ್ದರಾದರೂ ಚೆನ್ನಾಗಿತ್ತು. 'ಒಂಟೋದ್ರಾ?' ಅಂತೆ.
ಎಂಥ ಅಧಿಕ ಪ್ರಸಂಗತನ!
“ಆ ಪಾತ್ರೆಲಿರೋ ಹಾಲ್ನ ಹಾಗೇ ಇಟ್ಬಿಡು. ನಾಳೆ ಬಂದಾಗ ಪಾತ್ರೆ