ಪುಟ:ಪಾಲಿಗೆ ಬಂದ ಪಂಚಾಮೃತ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

68

ಕನಸು

ತಗೊಂಡು ಹೋಗು.”
ಅವನ ಸ್ವರದ ಕಠೋರತೆಯನ್ನು ಕೇಳಿ ಬೆಚ್ಚಿಬಿದ್ದು, ಬುಟ್ಟಿಯಲ್ಲಿದ್ದ ಪಾತ್ರೆ
ಗಳಲ್ಲಿ ಅದೇನೋ ಅದಲುಬದಲು ಮಾಡಿ, ಹಾಲು ತುಂಬಿದ್ದ ಒಂದನ್ನು ತೆಗೆದಿರಿಸಿ,
ಆ ಹೆಂಗಸು ಹೊರಟು ಹೋದಳು. ಪುಟ್ಟಣ್ಣ ಧಡಾರನೆ ಸದ್ದು ಮಾಡುತ್ತ ಬಾಗಿಲು
ಮುಚ್ಚಿದ-ಆ ಸದ್ದಿನಿಂದಾದರೂ ಸುನಂದಾ ಎಚ್ಚರಗೊಳ್ಳಲಿ, ಎಂದು.
ಮಲಗಿದ್ದ ಸುನಂದೆಗೆ ಇದೆಲ್ಲವೂ ಕೇಳಿಸುತ್ತಿದ್ದರೂ ಆಕೆ ಏಳಲಿಲ್ಲ.
ಮತ್ತೆ ಮಲಗಿ ಪ್ರಯೋಜನವಿಲ್ಲವೆಂದು ಪುಟ್ಟಣ್ಣ ಬಚ್ಚಲು ಮನೆಗೆ ಹೋದ.
'ಪ್ರಾತರ್ವಿಧಿ'ಗಳನ್ನು ತೀರಿಸಿದ. ಆದರೂ ಮರದ ಕೊರಡಿನ ಹಾಗೆ ಮಲಗಿಯೇ
ಇದ್ದಳು ಸುನಂದಾ, ಅತ್ತಿತ್ತ ಮಿಸುಕದೆ.
ಅಷ್ಟರಲ್ಲೆ ಮಗು ಎಚ್ಚರಗೊಂಡು ತೊಟ್ಟಿಲಲ್ಲಿ ಎದ್ದು ಕುಳಿತು ಅಳತೊಡಗಿತು.
ಈಗಲಾದರೂ ಆಕೆ ಏಳಬಹುದು ಎಂದುಕೊಂಡ ಪುಟ್ಟಣ್ಣ. ಆದರೆ ಆಗಲೂ ಆಕೆ
ಏಳಲಿಲ್ಲ. ತಾಯಿ ಮಲಗಿಯೇ ಇದ್ದುದನ್ನು ಕಂಡು ಮಗು ಮತ್ತೂ ಗಟ್ಟಿಯಾಗಿ
ಅತ್ತಿತು.
ಹಜಾರವನ್ನು ಹಾದು ಕೊಠಡಿಗೆ ಬರುತ್ತ ಪುಟ್ಟಣ್ಣ ಮಗುವನ್ನೊಮ್ಮೆ ದುರ
ದುರನೆ ನೋಡಿದ. ಆ ನೋಟಕ್ಕೆ ಬೆದರಿ ಮಗು ಒಂದು ಕ್ಷಣ ಅಳು ನಿಲ್ಲಿಸಿತು. ಆದರೆ
ತಂದೆಯ ಬಳಿ ಬರುವೆನೆಂದು ಕೈ ಚಾಚಲಿಲ್ಲ. ಆತ ಪರಕೀಯನೇನೋ ಎನ್ನುವ
ಹಾಗೆ ಬಿರುಗಣ್ಣು ಬಿಟ್ಟು ನೋಡಿತು. ಮಗುವಿನ ಆ ನೋಟವನ್ನು ಕಂಡಾಗ, ಎವೆ
ತೆರೆದು ಮುಚ್ಚುವುದರೊಳಗೆ ಯಾರೋ ತನ್ನನ್ನು ತಿವಿದ ಹಾಗಾಯಿತು ಪುಟ್ಟಣ್ಣನಿಗೆ.
'ಇದೇನು, ಅಳುತ್ತಿರೋ ಮಗೂನ ನೋಡಿ ಕರಗ್ತಿದೀನಲ್ಲ?' ಎಂದು ಮನಸ್ಸಿನಲ್ಲೇ
ಅಂದುಕೊಂಡು, ಭುಜ ಕುಪ್ಪಳಿಸಿ, ಮಗುವಿನಿಂದ ಮರೆಯಾಗಿ ಆತ ಬಟ್ಟೆ ಹಾಕಿ
ಕೊಂಡ.
ಉಸಿರು ಕಟ್ಟಿಸುವ ಹಾಗೆ ಭಾಸವಾಗುತ್ತಿದ್ದ ಆ ಮನೆಯನ್ನು ಬಿಟ್ಟು ಪುಟ್ಟಣ್ಣ
ಬೀದಿಗಿಳಿದ. ಪಕ್ಕದ ಮನೆಯವರೂ ಅದರಾಚೆಗಿನವರೂ ಎಲ್ಲರೂ ತನ್ನನ್ನೇ ನೋಡು
ತಿದ್ದಂತೆ ಆತನಿಗೆ ಅನಿಸಿತು.

****

ಗಂಡ ಬಾಗಿಲೆಳೆದು ಮೆಟ್ಟಿಲು ಇಳಿದ ಸದ್ದು ಸುನಂದೆಗೂ ಕೇಳಿಸಿತು. ತನಗೂ
ಮನೆಗೂ ಯಾವ ಸಂಬಂಧವೂ ಇಲ್ಲ ಎನ್ನುವಂತೆ ಆ ಗಂಡಸು ಹೊರಟೇ ಹೋಗಿದ್ದ!
ಮುಖದ ಮೇಲಿನ ಹೊದಿಕೆ ಸರಿಸಿ ಸುನಂದಾ, ಅಳುತ್ತಿದ್ದ ಮಗುವನ್ನು ನೋಡಿ
ದಳು. ತಾಯಿಯ ಮುಖದರ್ಶನವಾಯಿತೆಂದು ಮಗು ಮತ್ತೂ ಗಟ್ಟಿಯಾಗಿ ಅತ್ತಿತು.
ಸುನಂದಾ ಪ್ರಯಾಸದಿಂದ ಮಗ್ಗುಲು ಹೊರಳಿ, ಮಗುವನ್ನು ತೊಟ್ಟಿಲಿನಿಂದೆತ್ತಿ
ತನ್ನೆದೆಗೆ ಎಳೆದುಕೊಂಡಳು. ಅಲ್ಲಿ ಮತ್ತೊಮ್ಮೆ ಅದು ನಿದ್ದೆ ಹೋಯಿತು.
ಮಗುವಿಗಡ್ಡವಾಗಿ ಬಲಗೈಯನ್ನು ಇಳಿಬಿಟ್ಟು ಸುನಂದಾ ಯೋಚಿಸಿದಳು: