ಪುಟ:ಪಾಲಿಗೆ ಬಂದ ಪಂಚಾಮೃತ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

71

“ಸುನಂದಾ, ಎದ್ದು ಹೋಗಿ ಮುಖ ತೊಳ್ಕೊಳ್ಳೋಕೆ ಆಗುತ್ತಾ?"
ಮೆಲ್ಲಮೆಲ್ಲನೆ ಒಸರುತ್ತಿದ್ದ ಕಂಬನಿಯನ್ನು ಹಿಂದಕ್ಕೆ ತಡೆಹಿಡಿಯುತ್ತ ಸುನಂದಾ
ಅಂದಳು:
“ಹೂಂ.”
“ಸರಿ. ನೀವು ಒಲೆ ಹಚ್ಬೇಡಿ ಇವತ್ತು. ಹಾಲೂ ನಮ್ಮಲ್ಲೇ ಬಿಸಿ ಮಾಡ್ತೀನಿ.
ಸ್ನಾನ ಬೇಕಾದರೆ ಆಮೇಲೆ ಮಾಡುವಿರಂತೆ. ಇದು ಜ್ವರವೋ ಏನೂಂತ ನೋಡ್ಬೇಕು.
ಊಟ ನಮ್ಮಲ್ಲೇ ಮಾಡಿ...ಸರಿ ತಾನೆ?”
ಉತ್ತರಕ್ಕೆ ಮೊದಲು ಅಶ್ರು ತುಂಬಿದ ಕಣ್ಣುಗಳು ರಾಧಮ್ಮನನ್ನು ನೋಡಿ
ದುವು.
“ನಾನೇನು ಹೇಳಲಿ ರಾಧಮ್ಮ? ಹೇಗೆ ಬೇಕೋ ಹಾಗೆ ಮಾಡಿ."
ರಾಧಮ್ಮ, ಬಾಗಿಲ ಬಳಿಯಲ್ಲೆ ಇದ್ದ ಹಾಲನ್ನೆತ್ತಿಕೊಂಡರು.
“ಮುಖ ತೊಳಕೊಳ್ಳಿ ಸುನಂದಾ, ಕಾಫಿ ತರ್ತೀನಿ.”
ಹಾಗೆ ಹೇಳಿ ಅವರು ತಮ್ಮ ಮನೆಗೆ ಹೋದರು....
....ಸುನಂದಾ ಪ್ರಯತ್ನ ಪಟ್ಟು ಗೋಡೆಗೊರಗಿಕೊಂಡು ಎದ್ದು ನಿಂತಳು.
ಬವಳಿ ಬಂದಂತಾಯಿತು. ಆದರೆ ಕ್ರಮೇಣ ದೇಹಕ್ಕೆ ಶಕ್ತಿ ಹಿಂತಿರುಗಿ ಬಂತು. ಮೆಲ್ಲನೆ
ಆಕೆ ಬಚ್ಚಲು ಮನೆಗೆ ನಡೆದಳು.
ಮೈಗೆ ಎಣ್ಣೆ ಸವರಬೇಕೆಂದು ಹೇಳಿದ್ದರು ರಾಧಮ್ಮ. ಮೈಗೆ ಎಂದರೆ,
ಮೈಮೇಲಿನ ಗಾಯಗಳಿಗೆ. ಆ ಗಾಯಗಳಿಗೆಲ್ಲ ಅಂತಹ ಲೇಪನ ಸಾಧ್ಯವಿತ್ತು. ಆದರೆ
ಹೃದಯಕ್ಕೆ ಆಗಿದ್ದ ಹಿರಿಯ ಗಾಯಕ್ಕೆ ಎಣ್ಣೆ ಸವರುವ ಹಾಗಿತ್ತೆ?
ಆಂ-ಊಂ-ಎಂದು ಸುನಂದಾ ನರಳಿದಳು. ದೇಹದ ಮತ್ತು ಹೃದಯದ
ಎರಡೂ ನೋವಿನಿಂದ ಆ ನರಳಾಟ ಹೊರಟಿತ್ತು.
....ಆಕೆ ಹಜಾರಕ್ಕೆ ಹಿಂತಿರುಗಿ ಬಂದಾಗ, ಎಚ್ಚರಗೊಂಡು ತಾಯಿಯನ್ನು ಕಾಣದೆ
ಅಳತೊಡಗಿತ್ತು ಮಗು. ಅದನ್ನು ಸುನಂದಾ ಎತ್ತಿಕೊಂಡಳು. ಮಗು ಎದೆಯತ್ತ
ಮುಖಮಾಡಿತು. ಆಕೆ ಹಾಸಿಗೆಯ ಮೇಲೆಯೇ ಮೆಲ್ಲನೆ ಕುಳಿತು ಹಾಲುಣಿಸಲು
ಯತ್ನಿಸಿದಳು. ಚೀಪಲೆಂದು ಮಗು ಬಾಯಿ ಇರಿಸಿದಾಗ ನೋವಾಯಿತು. ಎದೆಯ
ಮೇಲೆಯೂ ಆತ ಬರೆಗಳನ್ನೆಳೆದಿದ್ದ. ಉಗುರುಗಳಿಂದ ಮಾಂಸವನ್ನು ಕಿತ್ತು ತೆಗೆಯಲು
ಬಯಸಿದ್ದ...
ರಾಧಮ್ಮ ಲೋಟ ತುಂಬಾ ಕಾಫಿ ತೆಗೆದುಕೊಂಡು ಬಂದರು.
“ಕುಡೀರಿ ಸುನಂದಾ.”
ರಾಧಮ್ಮನ ಹಿಂದೆಯೇ ಕೆಲಸದಾಕೆ ಬಂದಳು. ಖಾಲಿ ನಿವೇಶನದಲ್ಲಿ ಹಟ್ಟಿ
ಕಟ್ಟಿಕೊಂಡಿದ್ದ ಕೂಲಿಸಂಸಾರದ ಒಡತಿ-ತಮಿಳುನಾಡಿನವಳು. ಗುಡಿಸಲೆಂದು ಆಕೆ
ಪೊರಕೆ ಎತ್ತಿಕೊಂಡಾಗ, ಈ ದಿನ ಅದೊಂದೂ ಬೇಕಾಗಿಲ್ಲ ಎನ್ನುವಂತೆ ಸುನಂದಾ