ಪುಟ:ಪಾಲಿಗೆ ಬಂದ ಪಂಚಾಮೃತ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

73

ಹೇರಳವಾಗಿ.
ರಾಧಮ್ಮನ ಮನೆಯಲ್ಲಿ ಅವರ ಆಗ್ರಹಕ್ಕೆ ಕಟ್ಟು ಬಿದ್ದು ಸುನಂದಾ ಮೈಗೆ ಎಣ್ಣೆ
ಸವರಿಕೊಂಡಳು. ಅವರ ಸ್ನಾನದ ಮನೆಯಲ್ಲಿ ಒಲೆಯ ಉರಿ ಸರಿಮಾಡುತ್ತಾ ಕುಳಿ
ತಾಗ ಸುನಂದೆಗೆ ದುಃಖ ಉಮ್ಮಳಿಸಿ ಬಂತು. ಹಿಂದೆ, ಗಂಡನ ಶರೀರ ಸೌಷ್ಠವಕ್ಕಾಗಿ
ತಾನು ಹೆಮ್ಮೆ ಪಟ್ಟಿದ್ದಳು. ಆ ಬಾಹುಗಳು, ಎದೆ...ಆತನ ತೋಳ ತೆಕ್ಕೆಯಲ್ಲಿ
ಮೃದುವಾಗಿ ಕರಗುತ್ತ 'ಎಂತಹ ಸುಖ!' ಎಂದುಕೊಂಡಿದ್ದಳು. ಈಗಲೊ? ಶಕ್ತಿ
ಸಾಮರ್ಥ್ಯವಿದ್ದ ಆ ಗಂಡು ಶರೀರವೆ ತನ್ನನ್ನು ದಂಡಿಸಿತ್ತು. ಆಕೆ ಪ್ರತಿಭಟಿಸಿದ್ದಳು.
ಆದರೆ ಆತನಿಗೆ ಸರಿ ಸಾಟಿಯಾಗದೆ, ಆಕೆಗೆ ಸೋಲಾಗಿತ್ತು. ಪ್ರತಿಭಟಿಸಿದ ತಪ್ಪಿಗಾಗಿ
ಉಗ್ರತರವಾಗಿತ್ತು ದಂಡನೆ. ಹಿಂದೆ ಮೃದುವಾಗಿ ಮುಟ್ಟುತ್ತಿದ್ದ ಆತನ ಬೆರಳುಗಳು
ಈಗ ಮುಷ್ಟಿ ಕಟ್ಟಿ ಕೊರಕಲು ಬೆಣಚು ಕಲ್ಲಾಗಿದ್ದುವು; ಅಥವಾ ನೀಳವಾಗಿ ವೇಗವಾಗಿ
ಬೀಸಿ ಕತ್ತಿಯ ಅಲಗಾಗಿದ್ದುವು...
ಸ್ನಾನವಾದ ಮೇಲೆ ಆಕೆಗೆ ಸ್ವಲ್ಪ ಹಾಯೆನಿಸಿತು. ರಾಧಮ್ಮನ ಗಂಡ ಕೆಲಸಕ್ಕೂ
ಹಿರಿಯ ಮಗ ಶಾಲೆಗೂ ಹೋಗಿದ್ದುದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಶ್ಯಾಮ
ನಿಗೆ ಅಂಟಿಕೊಂಡು ಮಗು ತಾಯಿಯನ್ನೂ ಮರೆಯಿತು. ಸುನಂದಾ ಒಂದು ತುತ್ತು
ಉಂಡಳು. ಊಟವಾದ ಮೇಲೆ, ರಾಧಮ್ಮನ ಮನೆಯ ಮಂಚದ ಮೇಲೆ
ಒರಗಿದಳು. ಜೊಂಪು ಹತ್ತಿತು.
ನಿದ್ದೆ ಬಂದವಳಿಗೆ ಕಟ್ಟ ಕನಸು ಬಿದ್ದಂತಾಗಿ ಆಕೆ ಗಡಬಡಿಸಿ ಎದ್ದಳು.
"ರಾಧಮ್ಮ, ಮಗು ಎಲ್ಲಿ?"
ರಾಧಮ್ಮ ಮುಗುಳು ನಕ್ಕರು:
"ಯಾಕೆ, ಏನಾಯ್ತು?"
"ಏನೋ ಕನಸು ಬಿತ್ತು ರಾಧಮ್ಮ....ಮಗು ಅತ್ತ ಹಾಗೆ ಕೇಳಿಸ್ತು. ಅದಕ್ಕೆ
ಹಸಿವಾಗಿದೆಯೋ ಏನೋ."
"ಅಷ್ಟೇ ತಾನೆ? ಸ್ವಲ್ಪ ಆಗ ಮಗು ಅತ್ತದ್ದು ನಿಜ. ಶ್ಯಾಮ ಹಸುವಿನ ಹಾಲು
ಕುಡಿಸ್ದ. ಸುಮ್ಮಗಾಯಿತು. ಆಗ ಅತ್ತದು ಕನಸಿನಲ್ಲಿ ಈಗ ಕೇಳಿಸ್ತೇನೊ?"
ರಾಧಮ್ಮನ ಪರಿಹಾಸ್ಯದ ಧ್ವನಿ ಸುನಂದೆಯಲ್ಲಿ ಲವಲವಿಕೆಯನ್ನುಂಟುಮಾಡಿತು.
ಆಕೆಯೂ ಮುಗುಳುನಕ್ಕಳು.
“ಮಗೂಗೆ ಹಸುವಿನ ಹಾಲು ಅಭ್ಯಾಸ ಮಾಡಿಸ್ಬೇಕು ಸುನಂದಾ. ಎಷ್ಟು
ದಿವಸ ಅಂತ ನೀವೇ ಕೊಡ್ತೀರಾ? ಅಲ್ಲದೆ ಈ ಸ್ಥಿತೀಲಿ ನಿಮಗೆ ಎದೆ ಹಾಲಿರೋದೂ
ಅಷ್ಟರಲ್ಲೇ ಇದೆ”
ಅನುಭವದ ಮಾತುಗಳು. ರಾಧಮ್ಮನೆದುರಲ್ಲಿ ತಾನಿನ್ನೂ ಚಿಕ್ಕ ಹುಡುಗಿ ಎನಿ
ಸಿತು ಸುನಂದೆಗೆ.

10