ಪುಟ:ಪಾಲಿಗೆ ಬಂದ ಪಂಚಾಮೃತ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

76

ಕನಸು

ಆ ಮಾತಿಗೆ ಅರ್ಧವಿರಾಮವಾಗಿತ್ತು ನೋವಿನ ನಗೆ.
“ಬದುಕಿನಲ್ಲಿ ಹೀಗೆಲ್ಲಾ ಆಗ್ತಾ ಇದ್ರೆ, ಯಾರಿಗೂ ಬೇಗನೆ ವಯಸ್ಸಾಗ್ತದೆ
ಸುನಂದಾ.”
ಸುನಂದೆ ನಿಟ್ಟುಸಿರು ಬಿಟ್ಟು ಬೀದಿಯತ್ತ ನೋಡಿದಳು.
“ನಿಮ್ಮ ಯಜಮಾನರು ಬರೋಹೊತ್ತಾಯ್ತು ಅಲ್ವೆ ರಾಧಮ್ನೋರೆ?”
“ಹೂಂ ಇನ್ನು ಮನೆಗೆ ಹೊರಟ್ಬಿಡೋಣಾಂತ ಯೋಚಿಸ್ತಿದೀರೋ?”
“ಹೌದು ಕಣ್ರೀ. ನನಗೂ ಒಂದು ಮನೆ ಇದೆಯಲ್ಲ, ಹೋಗ್ತೀನಿ.”
ಸುನಂದಾ ಎದ್ದು ನಿಂತಾಗ ರಾಧಮ್ಮನೆಂದರು:
“ಇವತ್ತು ನೀವು ಅಡುಗೆ ಮಾಡ್ಬೇಡಿ ಸುನಂದಾ. ಸುಮ್ನೆ ಮಲಕೊಂಡ್ಬಿಡಿ.
ಆತ ಬರ್ತಾರೋ ಇಲ್ವೋ. ಬಂದರೆ ಆತನಿಗೂ ಇಲ್ಲೇ ಬಡಿಸಿದರಾಯ್ತು.
ಎಂಟೊಂಭತ್ತು ಘಂಟೆ ಹೊತ್ತಿಗೆ ಬಂದು ನಿಮ್ಮನ್ನ ಊಟಕ್ಕೆಬ್ಬಿಸ್ತೀನಿ.”
“ಬೇಡಿ ರಾಧಮ್ಮ. ಇವತ್ತೇನೂ ಬೇಡಿ ಇನ್ನು. ನನ್ನಿಂದಾಗಿ ಎಷ್ಟೊಂದು
ಕಷ್ಟ ನಿಮಗೆ.”
“ಇನ್ನೊಮ್ಮೆ ಆ ಮಾತಾಡ್ಬೇಡಿ. ಇವತ್ತು ನೀವು ನನ್ನ ಮಾತು ಮೀರ
ಕೂಡ್ದು.”
ಸುನಂದಾ ನಕ್ಕು, ಹೊರಕ್ಕಿಳಿದಳು.
ಹೋಗುತಿದ್ದ ಆಕೆಗೆ ರಾಧಮ್ಮನೆಂದರು:
“ಹಾಲಿಗೆ ಇಲ್ಲೇ ಹೆಪ್ಪುಹಾಕಲಾ ಸುನಂದಾ?”
ಕ್ಷೀಣವಾಗಿ ದೀರ್ಘವಾಗಿ ಉತ್ತರ ಬಂತು:
“ಹೂಂ.”

****

ಸುನಂದಾ ಮನೆಯ ಬೀಗ ತೆಗೆದು ಒಳಗೆ ಬಂದಳು. ಬಿಕೋ ಎನ್ನುತಿದ್ದ
ಮನೆಯನ್ನು ಕಂಡು, 'ನನ್ನ ಹಾಗೆಯೇ ಇದೆ ಈ ಮನೆಯೂ' ಎಂದುಕೊಂಡಳು.
ಮಗುವನ್ನು ಇಳಿಬಿಟ್ಟು, ಹಾಸಿಗೆಯನ್ನು ಸುರುಳಿ ಸುತ್ತಿ, ಕಸ ಗುಡಿಸಿದಳು. ಮತ್ತೆ
ಹಾಸಿಗೆ ಹಾಸಿದಳು. ಮಗುವಿನ ತೊಟ್ಟಿಲು ಸರಿಪಡಿಸಿದಳು.
ಕತ್ತಲಾಯಿತೆಂದು ದೀಪ ಹಾಕಿದಳು.
ಅಡುಗೆ ಮನೆ ಆಕೆಯನ್ನು ಕರೆಯುತ್ತಿತ್ತು.
ತನಗೇನೋ ಹಸಿವೆ ಇಲ್ಲ. ಆದರೆ ಆತನಿಗೋಸ್ಕರ ಏನನ್ನಾದರೂ-? ರಾಧಮ್ಮ
ನೇನೋ ಅಂದಿದ್ದರು. ಆತನೂ ಅಲ್ಲಿಗೇ ಊಟಕ್ಕೆ ಬರಲೆಂದು. ಅದು ದುಸ್ಸಾಧ್ಯ
ಎಂದು ಅವರಿಗೆ ಗೊತ್ತಿರಲಿಲ್ಲವೆ? ಗೊತ್ತಿತ್ತು. ನಿಷ್ಕರುಣಿಯಾದ ಆ ಗಂಡ ಒಂದು
ರಾತ್ರಿ ಉಪವಾಸವಿದ್ದರೆ ತಪ್ಪೇನೂ ಇಲ್ಲ- ಎಂದು ಸ್ಪಷ್ಟವಾಗಿ ಹೇಳಲಾರದೆ, 'ಆತ
ನಿಗೂ ಇಲ್ಲೇ ಬಡಿಸಿದರಾಯಿತು' ಎಂದಿದ್ದರು.