ಪುಟ:ಪಾಲಿಗೆ ಬಂದ ಪಂಚಾಮೃತ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

5

“ಕೋಪಿಸ್ಕೋಬೇಡಮ್ಮಣ್ಣಿ. ಹಿಂದೆ ಒಂದ್ಬಲಿ ಮೂರನೇ ಬೀದಿಯೋರ
ಮನೇಲಿ ಹಾಗಾಯಿತ್ರವ್ಯಾ...”
ಆ ಕಹಿ ಮಾತುಗಳನ್ನೆಲ್ಲ ಕೊನೆಗಾಣಿಸುವುದೇ ಮೇಲೆಂದು ಸುನಂದಾ
ಅಂದಿದ್ದಳು:
“ನೀನೀಗ ಹೋಗು. ಹದಿನೈದನೇ ತಾರೀಕು ಬಾ, ದುಡ್ಕೊಡ್ತೀನಿ.”
ಉತ್ತರ ಸಂದೇಹದ ಪಡಿನೆಳಲಿನಲ್ಲಿ ದೊರೆತಿತ್ತು:
“ಯಾಕ್ರಮ್ಮಣ್ಣಿ? ಸ್ವಾಮಿಯೋರೆ ಸಂಬಳ ಅನ್ನೇ ತಾರೀಕಿಗೇ ಅಲ್ವಾ
ಬರೋದು ?”.
ಸುನಂದೆಗೆ ರೇಗಿತ್ತು
“ನಿನಗ್ಯಾತಕ್ಕಮ್ಮಾ ಅದೆಲ್ಲಾ? ಹೋಗು ಅಂದರೆ ಸುಮ್ಮೆ ಹೋಗೋಕು.”
ಕೆಲಸದವಳು ದುಗುಡ ತುಂಬಿದ ಮುಖದಿಂದ ಹೊರಟು ಹೋಗಿದ್ದಳು__
ಹದಿನೈದನೇ ತಾರೀಕಿಗೇ ಬರುವೆನೆಂದು ಎಚ್ಚರಿಕೆಯನ್ನಿತ್ತು.
ಎಂತಹ ಮಾತನ್ನಾಡಿದ್ದಳು ಆಕೆ! ಸ್ವಾಮಿಯವರ ಕೆಲಸ ಹೋಯಿತೆ? - ಎಂದು
ಕೇಳಿದ್ದಳು.
....ಕೆಲಸ ಹೋಗಿರಲಿಲ್ಲ. ಎಂಜಿನಿಯರ್ ಗಂಡ ದುಡಿಯುತ್ತಿದ್ದ ಸಂಸ್ಥೆ
ಸುಭದ್ರವಾಗಿತ್ತು. ತಿಂಗಳ ಸಂಪಾದನೆ ನೂರ ಎಪ್ಪತ್ತೈದು ರೂಪಾಯಿ. ಆ ಪುಟ್ಟ
ಸಂಸಾರಕ್ಕೆ ಅಷ್ಟು ಸಾಲದೆ? ತನ್ನ ಅತ್ತೆ ಬದುಕಿದ್ದಾಗ ಆತನಿಗೆ ಬರುತ್ತಿದ್ದುದು ನೂರ
ಇಪ್ಪತ್ತೈದು ಮಾತ್ರ. ಆಗ ಅಷ್ಟೇ ಸಾಕಾಗುತ್ತಿತ್ತು. ಸೊಸೆ ಮನೆಗೆ ಬಂದ ಮೊದಲ
ವರ್ಷವೇ ಅತ್ತೆ ತೀರಿಕೊಂಡಿದ್ದರು. ಮೊಮ್ಮಗನ ಮುಖ ಕಾಣುವ ಹಂಬಲ ಈಡೇರದೆ
ಅವರು, “ನೀನು ಬಂಜೆ ಅಂತ ಕಾಣುತ್ತೆ” ಎಂದು ಕೊಂಕು ನುಡಿಯನ್ನು ಮಾತ್ರ
ಆಡದೆ ಹೋಗಿರಲಿಲ್ಲ.
ಸುನಂದಾ ಬಸಿರು ತಳೆದುದು ಆಮೇಲೆ, ತವರುಮನೆಯಲ್ಲಿ ಹೆರಿಗೆಯಾಯಿತು.
ಹುಟ್ಟಿದುದು ಹೆಣ್ಣು ಮಗು, ಅಲ್ಲಿರಲಾರದೆ ಒಂದು ತಿಂಗಳಲ್ಲೇ ಆಕೆ ಗಂಡನ ಮನೆಗೆ
ಬಂದು ಬಿಟ್ಟಿದ್ದಳು. ಸರಸ್ವತಿ ಬಸಿರಲ್ಲಿದ್ದಾಗಲೇ ಆತನಿಗೆ ಸಂಬಳ ಹೆಚ್ಚಿತ್ತು. ಇನ್ನು
ಜೀವನ ಕಷ್ಟದಾಯಕವಾಗಲಾರದೆಂಬ ಆಸೆಯಿಂದಲೇ ಸುನಂದಾ ತಾಯಿ ಮನೆಯಿಂದ
ಹೊರಟು ಬಂದಿದ್ದಳು.
ಆದರೆ ವೈಯಕ್ತಿಕ ಆಸೆಗೂ ವಸ್ತು ಸ್ಥಿತಿಗೂ ಇದ್ದ ಅಂತರ ಎಷ್ಟೊಂದು!
ಯಾಕೆ ಹಾಗಾಯಿತು? ಯಾಕೆ?
ಕೈ ಹಿಡಿದವನ ಒಲವು ಎಂಬುದೊಂದು ಅನಂತ ಜಲರಾಶಿ ಎಂದು ಸುನಂದಾ
ಭಾವಿಸಿದ್ದಳು.ಆದರೆ ಉಸುಬುಕಾಡಿನ ಉರಿಯುವ ಗಾಳಿ ಆಕೆಗೆ ಉಸಿರು ಕಟ್ಟಿಸಿತು.
ಅತ್ತೆ ಬದುಕಿದ್ದಷ್ಟು ಕಾಲವೂ ಅವರೇ ಹಣದ ಲೆಕ್ಕವಿಡುತ್ತಿದ್ದರು. ಒಂದು
ರೀತಿಯಲ್ಲಿ ಜಿಪುಣೆ-ಒಂದು ರೀತಿಯಲ್ಲಿ ಧಾರಾಳಿ. ಒಂದಾಣೆಯ ಪೊರಕೆಯನ್ನು