ಪುಟ:ಪಾಲಿಗೆ ಬಂದ ಪಂಚಾಮೃತ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

79

“ಹಾಗೆ ಹಾದಿಗ್ಬನ್ನಿ. ಓದಿರೋದು ಲೋಯರ್ ಸೆಕೆಂಡರಿ ಆದರೂನೂ
ಇಂಥಾದ್ದರಲ್ಲೆಲ್ಲ ನಾನೇ ಹೆಚ್ಚು ಬುದ್ಧಿವಂತೆ. ನೆನಪಿರ್ಲೀಮ್ಮಾ!”
“ಆಕೆ ಎಷ್ಟು ಓದಿದಾಳೋ?”
“ತಿಳಿಯೋದು ಕಷ್ಟವೇ. ಕಾಲೇಜು ಗೀಲೇಜು ಎಲ್ಲಾ ಆಗಿರುತ್ತೆ, ಅಲ್ವೇನ್ರೀ?”
“ಆಗದೆ ಏನಮ್ಮಾ, ಶ್ರೀಮಂತರಿಗೆ?”
“ಮನೇಮಾತು ಯಾವುದೋ ತಿಳೀದು. ಕನ್ನಡವಲ್ದೆ ಹೋದರೆ ಅವರ ಜತೇಲಿ
ಮಾತಾಡೋ ಪುಣ್ಯ ಇರೋದು ನಿಮಗೊಬ್ಬರಿಗೇನೇ!”
ಸುನಂದೆ ಹೆಚ್ಚು ಹಸನ್ಮುಖಿಯಾಗಲೆಂದೇ, ಈ ನಡುವೆ ರಾಧಮ್ಮ ಹೆಚ್ಚಾಗಿ
ತಮಾಷೆಯ ಮಾತುಗಳನ್ನಾಡುತ್ತಿದ್ದರು.
ಆದರೆ ಸುನಂದೆಯ ಹೃದಯದೊಳಗಿನ ಗಾಯ, ಎಂದಿಗೂ ಮಾಯಲಾರ
ದೇನೋ ಎನ್ನುವಷ್ಟು ಹಸುರಾಗಿತ್ತು. ಆ ಕಾರಣದಿಂದಲೇ, ರಾಧಮ್ಮನ ಲಘು
ಹಾಸ್ಯಕ್ಕೆ ಪ್ರತಿಯಾಗಿ ಆಕೆಯಲ್ಲಿ ಮೂಡುತ್ತಿದ್ದುದು ಒಣನಗೆ ಮಾತ್ರ.
ಸುನಂದೆಯ ಮನಸ್ಸಿನ ಮೇಲೆ ಅಷ್ಟೊತ್ತಿದ್ದುದು, ಹೊಸದಾಗಿ ಬಂದ ಆ
ಹೆಣ್ಣುಜೀವ ಸುಖಿ ಎಂಬ ಅಂಶ. ಆ ತಿಳಿವಳಿಕೆಯಿಂದ ಆಕೆಯ ಹೃದಯ, ನೋವಿನ
ದಾರಗಳಲ್ಲಿ ಬಿಗಿದಿದ್ದ ಸಂತೋಷದ ಅರಳೆಯಾಯಿತು. ಆಕೆ ಗರ್ಭಿಣಿ ಎಂದು ರಾಧಮ್ಮ
ನೆಂದಿದ್ದರು. 'ಇರಲಾರದು' ಎಂದು ತಾನು ಹೇಳಿದಾಗ, ಆ ಉತ್ತರದ ಹಿಂದೆ ಇದ್ದ
ಯೋಚನೆ ಯಾವುದು? ಆಕೆ ಗರ್ಭಿಣಿಯಾದರೆ, ತಾಯಿಯಾದರೆ, ತನ್ನ ಹಾಗೆಯೇ
ಆಕೆಯ ಸುಖವೂ ಮಣ್ಣುಗೂಡಬಹುದೆಂಬ ಭಯವೆ? ಮಣ್ಣುಗೂಡಬಾರದೆಂಬ
ಆಶೆಯೆ? ಸುನಂದೆಗೆ ಗೊತ್ತಿತ್ತು-ಅದೊಂದು ಅರ್ಥವಿಲ್ಲದ ಹೆದರಿಕೆ, ಎಂದು.
ಸಾಮಾನ್ಯವಾಗಿ ಮಕ್ಕಳಿಲ್ಲದಿದ್ದಾಗಲೇ ಕೊರಗು. ಮಕ್ಕಳಾದಾಗ ಸಂಸಾರ ಸುಖ ಹೆಚ್ಚು
ಮಧುರವಾಗುತ್ತಿತ್ತು... ತನ್ನ ಪಾಲಿಗೆ ಮಾತ್ರ ಹಾಗಾಗಿರಲಿಲ್ಲ, ಅಷ್ಟೆ...
ರಾಧಮ್ಮ ಇನ್ನೊಂದು ಸುದ್ದಿ ತಂದರು:
“ಇವರು ಬಂದಿರೋದು ಬಾಡಿಗೆಗಲ್ಲ ಸುನಂದಾ. ಅದೆಷ್ಟೋ ಸಾವಿರ ಕೊಟ್ಟು
ಈ ಮನೇನ ಕೊಂಡುಕೊಂಡೇ ಬಿಟ್ಟಿದಾರಂತೆ.”
“ಹಾಗೇನು?”
“ಆತ ದಂಡಿನಲ್ಲೆಲ್ಲೋ ದೊಡ್ಡ ಔಷಧಿ ಅಂಗಡಿ ಇಟ್ಟಿದಾನಂತೆ-ಕೆಮಿಸ್ಟ್
ಅಂತಾರಲ್ಲಾ? ಇಲ್ಲಿಗೆ ಬರೋದಕ್ಮುಂಚೆ ಮಲ್ಲೇಶ್ವರದಲ್ಲಿದ್ದರಂತೆ."
“ಇದೆಲ್ಲಾ ಹ್ಯಾಗ್ರೀ ತಿಳೀತು ನಿಮಗೆ?”
“ಆ ಕೊಯಮತ್ತೂರು ಕಡೆಯೋಳು ಅವರ ಮನೆ ಕೆಲಸದವಳ ಜತೇಲಿ
ಮಾತಾಡಿ ಇಷ್ಟು ತಿಳಕೊಂಡು ಬಂದಿದಾಳೆ.”
“ಪರವಾಗಿಲ್ಲ ಆಕೆ!”
“ಇನ್ನೊಂದು ಬೇಸರದ ಸುದ್ದಿ ಸುನಂದಾ. ಅವರ ಮನೆಮಾತು ಕನ್ನಡ