ಪುಟ:ಪಾಲಿಗೆ ಬಂದ ಪಂಚಾಮೃತ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

81

ಅವರನ್ನು ಹಾಗೆ ಕಂಡಾಗಲೆಲ್ಲಾ ಚೇಳು ಕುಟುಕಿದ ಹಾಗಾಗುತ್ತಿದ್ದರೂ
ಸುನಂದೆಯ ಒಳಧ್ವನಿ ಪ್ರಾರ್ಥಿಸುತ್ತಿತ್ತು:
'ದೇವರೇ! ಅವರಿಬ್ಬರನ್ನು ಸದಾ ಕಾಲವೂ ಹಾಗೆಯೇ ಸುಖವಾಗಿಡಪ್ಪ!”

****

ಒಂದು ಸಂಜೆ ರಾಮಯ್ಯನವರು ರಾಧಮ್ಮನನ್ನೂ ಮಕ್ಕಳನ್ನೂ ಕರೆದುಕೊಂಡು
'ನಳ-ದಮಯಂತಿ' ಚಲಚ್ಚಿತ್ರ ನೋಡಲು ನಿರ್ಧಾರ ಮಾಡಿದರು. ಸುನಂದೆಯನ್ನೂ
ಕರೆದುದಾಯಿತು.
“ನಿಮ್ಮವರು ಬರೋದರೊಳಗೇ ಮನೆಗೆ ವಾಪಸು ಬಂದುಬಿಡಬಹುದು
ಸುನಂದಾ"
—ಎಂದು ರಾಧಮ್ಮ ಆಗ್ರಹಪೂರ್ವಕವಾಗಿ ಹೇಳಿದರು.
ಗಂಡ ರೇಗಿದರೂ ಸರಿಯೆ, ಹೋಗಬೇಕು-ಎಂದು ಸುನಂದೆಗೆ ಒಮ್ಮೆ
ತೋರಿತು. ಆದರೆ ಚಲಚ್ಚಿತ್ರ ನೋಡಲು ಆಕೆಗೆ ಏನೇನೂ ಮನಸ್ಸಿರಲಿಲ್ಲ. ಯಾವ
ಮನೋರಂಜನೆಗೂ ಆಕೆ ಸಿದ್ಧವಿರಲಿಲ್ಲ.
ಹೊರಹೋಗಿ ಬಂದರೆ ಸುನಂದೆಯ ಹೃದಯ ಹಗುರವಾಗಬಹುದೆಂಬುದು
ರಾಧಮ್ಮನ ಎಣಿಕೆಯಾಗಿತ್ತು. ಆದರೆ ಸುನಂದಾ ಹೊರಡಲೇ ಇಲ್ಲ.
ಕಳೆದ ಕೆಲ ಮಾಸಗಳ ಘಟನೆಗಳ ಕಾರಣದಿಂದ ಸುನಂದೆಗೆ ಹೆಚ್ಚು ಆತ್ಮೀಯ
ನಾಗಿದ್ದ ಶ್ಯಾಮನೂ ಕರೆದ:
“ಬನ್ರೀ...ಬನ್ರೀ...!”
ಆಗಲೂ ಸುನಂದಾ ಬರಲು ಒಪ್ಪಲಿಲ್ಲ. ಕೊನೆಗೆ, ರಾಧಮ್ಮನ ಮನೆಯವರು
ಮಾತ್ರ ಹೋದರು.
ಅವರೆಲ್ಲ ಹೋದೊಡನೆ ಸುನಂದೆಗೆ ತುಂಬಾ ಬೇಸರವಾಯಿತು. ಅಳು ಬರುವ
ಹಾಗಾಯಿತು. ತಾನೂ ಹೊರಟು ಬಿಡಬೇಕಾಗಿತ್ತು-ಎಂದುಕೊಂಡಳು...
ಆಕೆ ಮಗುವನ್ನೆತ್ತಿಕೊಂಡು ಬೀದಿ ನೋಡುತ್ತ ಬಾಗಿಲ ಬಳಿ ನಿಂತಳು. ಆ
ಬೀದಿಯನ್ನು ದಾಟಿದ ನಾಯಿಯನ್ನೋ ಅತ್ತ ಓಡಿದ ಮೋಟಾರನ್ನೋ ನಡೆದು
ಹೋದ ಮನುಷ್ಯನನ್ನೋ ನೋಡಿದಾಗಲೆಲ್ಲ, ಪುಟ್ಟ ಮಗು ಸರಸ್ವತಿ 'ಏಯ್
ಆಯ್' ಎಂದು ಸದ್ದು ಮಾಡುತ್ತಿದ್ದಳು. ನಗುತ್ತಿದ್ದಳು. ಕೇಕೆ ಹಾಕುತ್ತಿದ್ದಳು.
ತಾಯಿಯ ಎದೆಯನ್ನು ತುಳಿಯುತ್ತಿದ್ದಳು. ಕೆಳಕ್ಕಿಳಿದು ಲೋಕ ಸಂಚಾರ ಮಾಡ
ಬೇಕೆನ್ನುವ ಆತುರ ತೋರುತ್ತಿದ್ದಳು.
ಸ್ವಲ್ಪ ಹೊತ್ತು ಮೌನವಾಗಿದ್ದಳು ಸರಸ್ವತಿ. ಒಮ್ಮೆಲೆ ಆಕೆ ತಾಯಿಯನ್ನು
ನೋಡಿ ನಕ್ಕಳು. ಮತ್ತೆತ್ತಲೋ ದೃಷ್ಟಿ ಬೀರಿದಳು. ಪುನಃ ತಾಯಿಯ ಎದೆಯಲ್ಲಿ
ಮುಖ ಮರೆಸಿದಳು. ಮತ್ತೆ ಕಳ್ಳ ನೋಟ ಮಗಳನ್ನು ಆಕರ್ಷಿಸಿದುದು ಯಾರೆಂದು

11