ಪುಟ:ಪಾಲಿಗೆ ಬಂದ ಪಂಚಾಮೃತ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

84

ಕನಸು

ಆದರೆ ಅದು ಔಚಿತ್ಯವಲ್ಲವೆಂದು ಸುಮ್ಮನಾದಳು.
“ಆಗಲಿ ಯಾವಾಗಲಾದರೂ ಬರ್ತೀನಿ.”
“ಅವರನ್ನೂ-ರಾಧಮ್ಮನವರನ್ನೂ-ಕರಕೊಂಡು ಬನ್ನಿ.”
“ಆಗಲಿ ಆಗಲಿ.”
“ಮಗೂನ ಮನೇಲೆ ಬಿಟ್ಟು ಬರಿ ಕೈಯಲ್ಲೆ ಬರಬೇಡಿ, ಹಾಂ!”
ಸುನಂದೆಗೆ ನಗುಬಂತು. ಕುಸುಮಳೂ ಕುಲುಕುಲು ನಕ್ಕಳು.
ಮತ್ತೆ ಯೋಚನೆ ಆ ಸಂಸಾರದತ್ತ ಸುಳಿದು, ಸುನಂದಾ ಕೇಳಿದಳು:
“ಇವತ್ತೇನು ಎಲ್ಲಿಗೂ ಹೋಗಲ್ವೆ?”
ತಾನು ಗಂಡನ ಜತೆ ಹೊರಡುವುದನ್ನೆಲ್ಲ ಇವರು ನೋಡುತ್ತಿರುತ್ತಾರೆ
—ಎಂಬುದು ಕುಸುಮಳಿಗೆ ಸ್ಪಷ್ಟವಾಯಿತು. ಅದರಿಂದ ಸಂತೋಷವೆನಿಸಿತು.
“ಇಲ್ಲರೀ. ಅವರು ಇವತ್ತು ಬರುವಾಗ ತುಂಬಾ ತಡವಾಗ್ತದೇಂತ ಹೇಳಿ
ಹೋಗಿದ್ದಾರೆ.”
ಮುಂದೆ ತನ್ನ ಗಂಡನ ವಿಷಯ ಕೇಳದೆ, ಅಷ್ಟರಲ್ಲಿ ಮೌನತಳೆದ ಸುನಂದೆ
ಯನ್ನು ಕಂಡು, ಆಕೆಗೆ ಆಶ್ಚರ್ಯವೆನಿಸಿತು. ಆಕೆಯೇ ಮುಂದುವರಿಸಿದಳು:
“ನಿಮ್ಮ ಮನೆಯವರು ಬರುವಾಗ ಯಾವಾಗಲೂ ತಡವಾಗ್ತದೆ, ಅಲ್ಲ?”
ಸುನಂದಾ ಮಾತು ಮುಗಿಸಲು ಆತುರ ತೋರಿದಳು.
“ಹೌದು ಕಣ್ರೀ. ಅವರಿಗೆ ಬಹಳ ಕೆಲಸ...ಕತ್ತಲಾಗ್ತಾ ಬಂತು. ಬರ್ತೀನಿ...”
ಹೀಗೆ ಹೇಳಿ ಸುನಂದಾ ಆಕೆಗೆ ನಮಿಸಿ ಹೊರಟೇ ಬಿಟ್ಟಳು.
ಆ ಅವಸರ ಅರ್ಥವಾಗದೇ ಇದ್ದರೂ 'ಇಷ್ಟಾದರೂ ಮಾತನಾಡಿದಳಲ್ಲ, ಒಳ್ಳೆ
ಯವಳು' ಎನ್ನುತ್ತಾ ಕುಸುಮ ತನ್ನ ಮನೆಯತ್ತ ನಡೆದಳು.

****

ಸುನಂದಾ ಅಡುಗೆ ಮನೆಗೆ ಹೋಗಿ ದೀಪ ಹಚ್ಚಿದಳು. ಕಿಟಿಕಿ ಮುಚ್ಚೋಣ
ವೆಂದು ಹೊರಟಾಗ, ಅದರಾಚೆ ಆ ಭಾಗದಲ್ಲಿ ಖಾಲಿ ಜಾಗದಲ್ಲಿ ಕೊಯಮತ್ತೂರು
ಕಡೆಯವರು ಕಟ್ಟಿಕೊಂಡಿದ್ದ ಹಟ್ಟಿಯಿಂದ ಆ ಹೆಂಗಸಿನ ರೋದನ ಕೇಳಿಸಿತು:
“ಅಯ್ಯಯ್ಯೋ! ಅಯ್ಯಯ್ಯೋ” ಕರುಳು ಕತ್ತರಿಸುವ ಹಾಗೆ, ಕಿವಿಯೊಡೆಯುವ ಹಾಗೆ.
“ಸಾಯಿ! ಸಾಯಿ!” ಎನ್ನುತ ಆಕೆಯ ಗಂಡ ಸೌದೆಯ ತುಂಡೊಂದನ್ನೆತ್ತಿಕೊಂಡು
ಆಕೆಗೆ ಹೊಡೆಯುತಿದ್ದ. “ಕುಡಿದು ಬಂದು ನನಗೆ ಹೊಡೀತೀಯಾ ಬೋಳೀ ಮಗನೆ!”
ಎಂದು ಆಕೆ ಬಯ್ದಳು. ಆ ಬಯ್ಗಳಿಗೆ ದೊರೆತ ಪ್ರತಿಫಲಕ್ಕೆ ಪ್ರತಿಕ್ರಿಯೆಯಾಗಿ,
“ಕೊಂದ್ಹಾಕ್ತಾನಲ್ಲಪ್ಪಾ-ಯಾರಾದರೂ ಬಂದು ಬಿಡಿಸೀಪ್ಪಾ ಪರಮಾತ್ಮಾ!” ಎಂಬ
ಆರ್ತನಾದ.
ಸುನಂದಾ ಅಸಹಾಯಳಾಗಿ ಉಸಿರುಬಿಗಿಹಿಡಿದು ಕಿಟಿಕಿಯ ಎಡೆಯಿಂದ ನೋಡಿ
ದಳು. ಆಕೆಯ ರಕ್ಷಣೆಗೆ ಪರಮಾತ್ಮನೂ ಬರಲಿಲ್ಲ; ಪರಮಾತ್ಮನ ಸಂತಾನಗಳಾದ