ಪುಟ:ಪಾಲಿಗೆ ಬಂದ ಪಂಚಾಮೃತ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

86

ಕನಸು

“ನಿಮ್ಮ ಮಗಳು-ಮೊಮ್ಮಗಳನ್ನು ನೋಡ್ಕೊಂಡು ಹೋಗೋಕೆ ಬಂದಿರಾ?”
ಆ ಪ್ರಶ್ನೆ ಕೇಳಿ ಸುನಂದೆಯ ತಂದೆಗೆ ದಂಗು ಬಡಿದ ಹಾಗಾಯಿತು. ಅವರು
ಬಿರುನೋಟದಿಂದ ಪುಟ್ಟಣ್ಣನನ್ನು ನೋಡುತ್ತ ಹೇಳಿದರು:
“ಹೂಂ. ಹಾಗೆಯೇ ಅಳಿಯನನ್ನೂ ನೋಡ್ಕೊಂಡು ಹೋಗೋಣಾಂತ
ಬಂದೆನಪ್ಪ. ಫಾಧ‌ರ್-ಇನ್-ಲಾ ನೋಡಿ. ಕಾನೂನು ಪ್ರಕಾರ ಮಾವನಿಗೊಂದು
ಅಧಿಕಾರವಿದೆಯಲ್ಲ ಅಳಿಯನ ಮೇಲೆ!”
ಅಷ್ಟು ಹೇಳಿ ಪರಿಸ್ಥಿತಿಯನ್ನು ಹಗುರಗೊಳಿಸೋಣವೆಂದು ಅವರು ನಕ್ಕರು.
ಆದರೆ ಪುಟ್ಟಣ್ಣ ನಗಲಿಲ್ಲ. ಮುದುಕ ವಿಚಾರಣೆಗೆ ಬಂದಿರುವನೆಂಬ ಆತನ
ಸಂದೇಹ ಮಾವನ ಮಾತು ಕೇಳಿದಾಗ ಬಲವಾಯಿತು.
ಬೂಟ್ಸಿನ ದಾರ ಬಿಗಿದು, ಎರಡು ಸಾರೆ ಡಬಡಬೆಂದು ನೆಲಕ್ಕೆ ಮೆಟ್ಟಿ ಪುಟ್ಟಣ್ಣ
ಹೇಳಿದ:
“ಧಾರಾಳವಾಗಿ ಚಲಾಯಿಸಿ ಅಧಿಕಾರಾನ!”
ಇಷ್ಟು ಹೇಳಿ ಆತ ಬಾಗಿಲಿನತ್ತ ನಡೆದ.
“ಇವತ್ತು ಊಟ ಕಳಿಸ್ಬೇಕಾದ್ದಿಲ್ಲ”
—ಎಂದು, ಪ್ರಾಜ್ಞಾಶೂನ್ಯಳಾಗಿ ಈ ದೃಶ್ಯವನ್ನು ನೋಡುತ್ತ ನಿಂತಿದ್ದ
ಹೆಂಡತಿಯತ್ತ ತಿರುಗಿ ಹೇಳಿ, ಹೊರಕ್ಕೆ ಹೊರಟೇ ಹೋದ.
ಸುನಂದಾ ಸಂಕಟ ದುಃಖ ತಡೆಯಲಾರದೆ ಅಡುಗೆ ಮನೆಗೆ ನಡೆದಳು. ತಮ್ಮ
ಕಣ್ಣುಗಳನ್ನು ತಾವೇ ನಂಬಲಾರದೆ ಹೋದ ಆಕೆಯ ತಂದೆ, ಮಗಳನ್ನು ಹಿಂಬಾಲಿಸಿ
ದರು. ಕಾಲುಗಳಲ್ಲಿದ್ದ ಚಪ್ಪಲಿ ಕಳಚುತ್ತ ಜತೆಯಲ್ಲೇ ತೊಟ್ಟಿಲಲ್ಲಿದ್ದ ಮಗುವನ್ನು
ನೋಡುತ್ತ, ತಾವೂ ಅಡುಗೆ ಮನೆಯನ್ನು ಹೊಕ್ಕರು.
“ಸುನಂದಾ! ಸುನಂದಾ!”
ಸುನಂದೆ, ಗೋಳೋ ಎಂದು, ತಾಯಿ ತಂದೆಗೋಸ್ಕರ ಕೂಡಿಟ್ಟಿದ್ದ ಕಂಬನಿ
ಯನ್ನೆಲ್ಲ ಹರಿಯಗೊಟ್ಟಳು.
ತಂದೆ ಮಗಳ ಬಳಿಸಾರಿ ತಲೆ ನೇವರಿಸಿದರು.
“ಸುಂದಾ, ಸುಂದಾ...”
ಅದು, ಹಿರಿಯ ಮಗಳು ಎಂಬ ಪ್ರೀತಿಯಿಂದ ತಂದೆಯೇ ಇಟ್ಟಿದ್ದ ಹೆಸರು.
ಗಂಡನಿಗೆ ಅದರ ಉಪಯೋಗವೇ ಬಿದ್ದಿರಲಿಲ್ಲ. ಈಗ ಮಮತೆಯ ಮಧುರ ನೆನಪು
ಗಳು ಮರುಕಳಿಸುವಂತೆ ಮಾಡುವ ಆ ಪದ ಆಕೆಯ ಕರ್ಣರಂಧ್ರಗಳೆದುರು ಕುಣಿ
ಯಿತು. ಪರಿಣಾಮವಾಗಿ ಹೃದಯದ ಸಂಕಟ ಇಮ್ಮಡಿಯಾಯಿತು. ಕಣ್ಣೀರಿನ
ಪಾತ್ರೆಯಲ್ಲಿ ಇನ್ನೂ ಉಳಿದಿದ್ದುದನ್ನು ಹೊರಕ್ಕೆ ಚೆಲ್ಲಲೆಂದು ಸುನಂದಾ, ಮತ್ತೂ
ಗಟ್ಟಿಯಾಗಿ ಅತ್ತಳು.
ಆ ಮಹಾಪೂರ ಇಳಿಯಲು ಹೆಚ್ಚು ಹೊತ್ತು ಹಿಡಿಯಲಿಲ್ಲ.