ಪುಟ:ಪಾಲಿಗೆ ಬಂದ ಪಂಚಾಮೃತ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

6

ಕನಸು

ಒಂಭತ್ತು ಕಾಸಿಗೆ ಪಡೆಯಲು ಆಕೆ ಘಂಟೆಗಟ್ಟಲೆ ವಾದಿಸುತ್ತಿದ್ದರು. ಆದರೆ ಮಗ
ಎರಡು ಮೂರು ರೂಪಾಯಿ ಕೇಳಿದರೆ ಐದು ರೂಪಾಯಿಯ ನೋಟನ್ನೇ ತೆಗೆದು
ಕೊಡುತ್ತಿದ್ದರು. ದೂರದ ಊರಲ್ಲಿದ್ದ ಹಿರಿಯಮಗನ ಬದಲು ಮುದ್ದಿನ ಕಿರಿಯವ
ನೊಡನೆ ಕೊನೆಯವರೆಗೂ ಉಳಿದ ಆ ಅತ್ತೆಗೆ ಮುತ್ತೈದೆಸಾವು ದೊರೆಯದೇ ಇದ್ದರೂ
ಪುತ್ರವಾತ್ಸಲ್ಯ ಲಭಿಸಿತ್ತು. ಅವರಿಗೆ ಹೇಳಿಕೊಳ್ಳುವಂತಹ ಯಾವ ಕೊರತೆಯೂ
ಇರಲಿಲ್ಲ. ಆದರೂ ಆಕೆ ಸದಾಕಾಲವೂ ಅತೃಪ್ತಿಯಿಂದ ಬುಸುಗುಟ್ಟುತ್ತ ಗೊಣಗು
ತ್ತಿದ್ದರು. ಅವರು ಸೊಸೆಯನ್ನು ದಂಡಿಸುವ ಚಂಡಿಯಾಗಿರಲಿಲ್ಲ. ಮೊಸರಲ್ಲಿ ಕಲ್ಲು
ಕಾಣುತ್ತಿರಲಿಲ್ಲ. ಆದರೆ ಗೃಹಲಕ್ಷ್ಮಿಯನ್ನು ಮಗಳಂತೆ ದೇವಿಯಂತೆ ಪ್ರೀತಿಸಿ
ಆರಾಧಿಸುವ ಅತ್ತೆಯೂ ಅವರಾಗಿರಲಿಲ್ಲ...
****
ನೆನಪಿನ ಕುದುರೆಯನ್ನು ತಡೆದು ನಿಲ್ಲಿಸಿ ಸುನಂದಾ, ಕುಳಿತಲ್ಲಿಂದ ಎದ್ದಳು.
ಮಗು ನಿದ್ರಿಸಿತ್ತು. ಆ ನಡು ಹಜಾರದ ಹಿಂಭಾಗದಲ್ಲಿದ್ದುದೇ ಅಡುಗೆ ಮನೆ.ಗಂಡನಿ
ಗಾಗಿ ಟಿಫಿನ್ ಕ್ಯಾರಿಯರ್ನಲ್ಲಿ ಕೊಟ್ಟು ಕಳುಹಿದ ಮೇಲೆ ಉಳಿದಿದ್ದ ಅನ್ನ ಅರೆ
ಮುಚ್ಚಿದ್ದ ತಪ್ಪಲೆಯೊಳಗಿಂದ ಇಣಿಕಿ ನೋಡುತ್ತಿತ್ತು. ಅದರ ಬಳಿಯಲ್ಲೆ ಹುಳಿ.
'ಊಟದ ಶಾಸ್ತ್ರ ಮುಗಿಸಬೇಕು' ಎಂದುಕೊಂಡಳು ಸುನಂದಾ.ಆದರೆ ಮನಸ್ಸಾಗಲಿಲ್ಲ.
ಬೆಳಗ್ಗೆ ಕುಡಿದಿದ್ದುದು ಬರಿಯ ಒಂದು ಲೋಟ ಕಾಫಿ ಮಾತ್ರ. ಗಂಡ ಕೆಲಸಕ್ಕೆ
ಹೋಗುತ್ತ ಹಾದಿಯಲ್ಲಿ ಮಾವಳ್ಳಿ ಟಿಫಿನ್ ರೂಮ್ಸಿಗೆ ಭೇಟಿಕೊಡುವುದು ರೂಢಿ
ಯಾದ ಮೇಲೆ, ಮನೆಯಲ್ಲಿ ತಿಂಡಿಮಾಡುವ ಅಗತ್ಯ ಮರೆಯಾಗಿತ್ತು. ಮಾಡಿದರೆ,
ತನಗೊಬ್ಬಳಿಗೋಸ್ಕರ. ಹೀಗಾಗಿ, ಮಾಡದೇ ಇರುವ ದಿನಗಳೇ ಹೆಚ್ಚು....
ಎಷ್ಟು ಹೊತ್ತಾಯಿತೊ?
ಮನೆಯಲ್ಲಿ ಗಡಿಯಾರವಿರಲಿಲ್ಲ. ತಾನು ಕಾಲೇಜಿಗೆ ಹೋಗುತಿದ್ದಾಗ ಸುನಂದಾ
ಪುಟ್ಟದೊಂದು ಕೈ ಗಡಿಯಾರವನ್ನು ಕಟ್ಟಿಕೊಳ್ಳುತ್ತಿದ್ದಳು.ಆ ಅಧ್ಯಯನವಿದ್ದುದು
ಇಂಟರ್ ತನಕ. ವಿವಾಹದ ಮಾರುಕಟ್ಟೆಯಲ್ಲಿ ಅನುಕೂಲವಾಗಲೆಂದು ತಾಯಿತಂದೆ
ಅಷ್ಟು ಓದಿಸಿದ್ದರು. ಅನಂತರ ಆಕೆಯ ಒಡಹುಟ್ಟಿದವಳ ಸರದಿ. 'ಈ ಕಾಲೇಜು
ಕೈ ಗಡಿಯಾರ ಇನ್ನು ನಿನಗಿರಲಮ್ಮ' ಎಂದು ಸುನಂದಾ ತನ್ನದನ್ನು ಬಿಚ್ಚಿ ತಂಗಿಯ
ಕೈಗೆ ಆಗ ಕಟ್ಟಿದ್ದಳು.
ದಾಂಪತ್ಯ ಜೀವನದ ಹೊಸತಿನಲ್ಲಿ ಸುನಂದಾ, ಮನೆಯಲ್ಲೊಂದು ಟೈಂಪೀಸು
ಇದ್ದರೆ ಮೇಲಲ್ಲವೆ?__ಎಂದು ಸೂಚಿಸಿದ್ದಳು. ಆದರೆ ಅತ್ತೆಗೆ ಆ ಸೂಚನೆ ಮಾನ್ಯ
ವಾಗಿರಲಿಲ್ಲ. ಅವರು ಮನೆಯ ಮುಂದೆ ನೆರಳು ನೋಡಿಯೇ ಹೊತ್ತು ಗೊತ್ತು
ಮಾಡುತ್ತಿದ್ದರು.
ಆ ಅತ್ತೆಯ ಅನಂತರವೂ ಮನೆಗೆ ಗಡಿಯಾರ ಬರಲಿಲ್ಲ.
....ಸುನಂದಾ ಬಾಗಿಲ ಬಳಿ ನಿಂತು ಬೀದಿಯ ಕಡೆ ನೋಡಿದಳು.