ಪುಟ:ಪಾಲಿಗೆ ಬಂದ ಪಂಚಾಮೃತ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದೆ ಪಂಚಾಮೃತ

87

ತಂದೆ ಶೋಕಪೂರ್ಣ ಧ್ವನಿಯಲ್ಲಿ ಕೇಳಿದರು:
“ನಾವೇನು ಸತ್ತು ಹೋಗಿದೀವಾ ಸುಂದಾ? ವಿಷಯ ಬರೀಬಾರದಾಗಿತ್ತಾ?
ಏನಾಯ್ತಮ್ಮ?”
ಏನು-ಎಂದು ಹೇಳಬೇಕು ಆಕೆ? ಹೇಳುವುದಾದರೂ ಯಾವುದನ್ನು? ಬೆನ್ನು
ಎದೆ ತೊಡೆಗಳಲ್ಲಿ ಗಾಯದ ಕಲೆಗಳು ಇನ್ನೂ ಇದ್ದುವು. ಅವುಗಳನ್ನು ಆತನಿಗೆ
ತೋರಿಸಬೇಕೆ? ಬೆನ್ನನ್ನಷ್ಟು ತೋರಿಸಿದರಾಯಿತು; ಹೆತ್ತವನಲ್ಲವೆ?-ಎಂದಿತು
ಮನಸ್ಸು. ಹೇಡಿಯಾಗಿ ಅಬಲೆಯಾಗಿ ಏಟು ತಿಂದ ಮೇಲೆ ಅದನ್ನು ಹೇಳುವು
ದಾದರೂ ಯಾಕೆ?-ಎಂದು ಅದೇ ಮನಸ್ಸು ಮರು ಪ್ರಶ್ನೆಯನ್ನೂ ಕೇಳಿತು. ಈ
ವಿಚಾರಗೊಂದಲದ ಫಲವಾಗಿ ಆಕೆ ಏನನ್ನೂ ಹೇಳಲಿಲ್ಲ.
ಹೆತ್ತ ತಂದೆಗೆ, ಮಗಳು ಬರೆದಿದ್ದ ಕಾಗದಗಳು ನೆನಪಾದುವು. ಮೊಮ್ಮಗಳ
ಕಾಹಿಲೆಯ ವಿಷಯ ಒಮ್ಮೆ ಬಂದಿತ್ತು. ಅದರಲ್ಲೊಂದು ಮಾತಿತ್ತು-'ಜೀವನ
ಎಂಬುದು ನಾನು ಭಾವಿಸಿದ್ದಷ್ಟು ಸುಲಭವಲ್ಲ' ಎಂದು. 'ಯಾವುದೋ ಮಾತಿನ
ವಿರಸವಾಗಿರಬೇಕು; ಅದಕ್ಕೋಸ್ಕರ ಹೀಗೆ ಬರೆದಿದ್ದಾಳೆ—' ಎಂದು ಅವರು ಸುಮ್ಮ
ನಾಗಿದ್ದರು. ಅನಂತರ ಸುನಂದಾ ತನ್ನ ತಂಗಿಗೆ ಕಾಗದ ಬರೆದಿದ್ದಳು. ಅದು ತನಗೆ
ಓದಲು ದೊರೆತಿರಲಿಲ್ಲ. 'ಅಕ್ಕ ಏನೋ ಬೇಸರದಲ್ಲಿದಾಳೆ ಅಪ್ಪಾ' ಎಂದಷ್ಟೆ ಕಿರಿಯ
ಮಗಳು ಹೇಳಿದ್ದಳು. ಆ ಬೇಸರದ ಸ್ವರೂಪ ಇಂತಹದಿರಬಹುದೆಂದು ಅವರು ಕನಸಿ
ನಲ್ಲೂ ಎಣಿಸಿರಲಿಲ್ಲ.
ಕಿರಿಯ ಮಗಳಿಗೆ 'ವರ ಸಂಧಾನ' ನಡೆಸುವುದಕ್ಕೋಸ್ಕರ ಅವರು ಬೆಂಗಳೂರಿಗೆ
ಹೊರಟು ಬಂದಿದ್ದರು-ಹೊಸ ಅಳಿಯನನ್ನು ಹುಡುಕಿಕೊಂಡು. ಆದರೆ ಹಳೆಯ
ಅಳಿಯ ಎಂದೂ ಮರೆಯಲಾಗದಂತಹ ಅದ್ಭುತ ಸ್ವಾಗತವನ್ನು ಅವರಿಗೆ ನೀಡಿದ್ದ.
ಅವರು ಆಳವಾಗಿ ನಿಟ್ಟುಸಿರು ಬಿಟ್ಟರು. ಒದಗಿ ಬಂದುದು ಎಂತಹ ಗಂಡಾಂತರ
ವೆಂದು ತಿಳಿಯುವ ಕುದಿತ ಶಮನವಾಗಿರಲಿಲ್ಲ.
ಸುನಂದಾ ಮೆಲ್ಲನೆ ಸುಧಾರಿಸಿಕೊಂಡು ತಂದೆಗೋಸ್ಕರ ಕಾಫಿ ಮಾಡಲು ಒಲೆಯ
ಬಳಿಗೆ ಸರಿದಳು.
ನಡುಗುತ್ತಿದ್ದ ಸ್ವರದಲ್ಲಿ ತಂದೆಯೆಂದರು:
“ನನಗೆ ಕಾಫೀನೂ ಬೇಡ, ಏನೂ ಬೇಡ. ಅದೇನು ಸುಡುಗಾಡೋ ಬಾಯಿ
ಬಿಟ್ಟು ಹೇಳಮ್ಮ ಸದ್ಯಃ.”
ಸುನಂದಾ, ಒಲೆಯ ಉರಿ ಸರಿಪಡಿಸುತ್ತ ಕಾಫಿ ಮಾಡುತ್ತಲೇ, ತನ್ನ ಕಥೆ
ಯನ್ನು ಹೇಳಿದಳು-ಚುಟುಕಾಗಿ, ಮೊಟಕಾಗಿ. ಆತ ತಡವಾಗಿ ಮನೆಗೆ ಬರುವುದು
ದುಡ್ಡಿಟ್ಟು ಆಡುವುದು, ವಿನಾಕಾರಣ ರೇಗುವುದು- ಇಷ್ಟೆ.
“ಪೂರ್ತಿ ಹೇಳು ಸುಂದಾ. ಬಚ್ಚಿಡ್ಬೇಡ. ಆತ ನಿನಗೆ ಗಂಡನಾದರೆ, ನಾನು
ನಿನಗೆ ತಂದೆ. ಇದ್ದುದನ್ನ ಇದ್ದ ಹಾಗೆಯೇ ಹೇಳು”