ಪುಟ:ಪಾಲಿಗೆ ಬಂದ ಪಂಚಾಮೃತ.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

90

ಕನಸು

“ಅಳಿಯನನ್ನ ಉಚ್ಚ ವ್ಯಾಸಂಗಕ್ಕೆ ಅಮೆರಿಕಾಕ್ಕೆ ಕಳುಹಿಸೋಕೆ ಸಿದ್ಧವಾಗಿದ್ದೀ
ರೇನು?”
ಅವರು ಸಿದ್ಧವಾಗಿರಲಿಲ್ಲ. ತಾನು ಬಡವ ಎಂದು ಆ ಜನರೆದುರು ಗೋಗರೆ
ಯಲು ಬಯಸದೆ, ಎದ್ದು ಬಂದರು.
ಅಲ್ಲಿಂದ ಅವರು ಪುಟ್ಟಣ್ಣನ ಆಫೀಸಿಗೆ ನಡೆದರು. ಆಫೀಸು ಮುಗಿಯಲು
ಇನ್ನೂ ಹೊತ್ತಿತ್ತು. ನ್ಯಾಯಸ್ಥಾನದ ಆವರಣದಲ್ಲಿ ಕಕ್ಷಿಗಾರರು ಕಾದಿರುವಂತೆ, ಅಲ್ಲೆ
ಸ್ವಲ್ಪ ದೂರದಲ್ಲಿದ್ದ ಮರದ ನೆರಳಿನಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತರು.
ಐದು ಘಂಟೆಗೆ ಸರಿಯಾಗಿ ಕುಳಿತಲ್ಲಿಂದೆದ್ದು ಆ ಕಟ್ಟಡದ ಹೆಬ್ಬಾಗಿಲ ಬಳಿ,
ಅಳಿಯನಿಗಾಗಿ ಮಾವ ಕಾದು ನಿಂತರು.
ಮೆಟ್ಟಲಿಳಿಯುತ್ತಿದ್ದಾಗಲೆ ಅವರನ್ನು ನೋಡಿದ ಪುಟ್ಟಣ್ಣನಿಗೆ 'ಈ ಪೀಡೆಯಿಂದ
ತಪ್ಪಿಸಿಕೊಂಡರಾದೀತು' ಎಂದು ತೋರಿತು. ತಪ್ಪಿಸಿಕೊಳ್ಳುವ ಹಾದಿಯನ್ನೂ ಆತ
ಯೋಚಿಸಿದ. ಆದರೆ, ತಮ್ಮ ಮಗಳ ಪರವಾಗಿ ಮಾವ ಏನು ಹೇಳುವರೆಂಬುದನ್ನು
ತಿಳಿಯುವ ಕುತೂಹಲವೂ ಆತನಿಗಿತ್ತು. ಹೀಗಾಗಿ, ಮಾವನೊಡನೆ ಮಾತನಾಡಿಯೇ
ಬಿಡುವುದೆಂದು ಪುಟ್ಟಣ್ಣ ತೀರ್ಮಾನಿಸಿದ.
ಅಳಿಯ ಬಳಿಗೆ ಬಂದಾಗಲೂ ಅವರು ಗಂಭೀರವಾಗಿಯೇ ಇದ್ದರು. ಪುಟ್ಟಣ್ಣನೇ
ಕೇಳಿದ:
“ಬಹಳ ಹೊತ್ತಾಯ್ತೇನು ನೀವು ಬಂದು?”
“ಇಲ್ಲ, ಈಗ್ತಾನೇ ಬಂದೆ”
—ಎಂದು ಮಾವ ಸುಳ್ಳಾಡಿದರು.
ಹೇಗೆ ಮಾತು ಮುಂದುವರಿಸಬೇಕೆಂದು ತಿಳಿಯದೆ ಸ್ವಲ್ಪ ತಡವರಿಸುತ್ತ ಪುಟ್ಟಣ್ಣ
ಹೇಳಿದ:
“ಊರಿಗೆ ಯಾವತ್ತು ಹೊರಡ್ತೀರಾ?”
“ರಾತ್ರೆ ಹೊರಡ್ತೀನಿ. ಹೋಗೋಕ್ಮುಂಚೆ ನಿಮ್ಜತೇಲಿ ಮಾತಾಡ್ಬಿಟ್ಟು
ಹೋಗೋಣ ಅಂತ ಬಂದೆ.”
ಬೀದಿಯ ಮೇಲಕ್ಕೂ ಕೆಳಕ್ಕೂ ನೋಡುತ್ತ ಪುಟ್ಟಣ್ಣ ಹೇಳಿದ.
“ಆಗಬಹುದು. ಎಲ್ಲಿ ಮಾತಾಡೋಣ?”
“ಮೊದಲು ಒಂದಿಷ್ಟು ಕಾಫಿ ತಗೊಂಡರಾದೀತು.”
ಮಾತುಕತೆಯಲ್ಲಿ ಮುದುಕನಿಗೇ ಮೇಲುಗೈ ಆಗುತ್ತಿದೆ, ಎಂದು ಪುಟ್ಟಣ್ಣನಿಗೆ
ಕಸಿವಿಸಿಯಾಯಿತು. ಆದರೂ ಅದನ್ನು ತೋರಗೊಡದೆ, ಎಚ್ಚರದ ರಕ್ಷಣೆಯ
ಮುಖವಾಡ ಧರಿಸಿ, ಮಾವನನ್ನು ಆತ ಸಮೀಪದಲ್ಲೇ ಇದ್ದ ಒಳ್ಳೆಯದೆಂದು
ಹೋಟೆಲಿಗೆ ಕರೆದೊಯ್ದ.
“ತಿಂಡಿ ಏನು ತರಿಸೋಣ?”