ಪುಟ:ಪಾಲಿಗೆ ಬಂದ ಪಂಚಾಮೃತ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

92

ಕನಸು

ನರೆತಿದೆ. ನನ್ನ ಆಪ್ತ ಸ್ನೇಹಿತರು ಇಬ್ಬರ ಸಂಸಾರಗಳೇ ಮಣ್ಣುಪಾಲಾದ್ದನ್ನ ನಾನು
ನೋಡಿದೀನಿ ಪುಟ್ಟಣ್ಣ. ಯಾಕಾಯಿತು ಅಂತಿರೋ? ಕ್ಷುಲ್ಲಕ ಕಾರಣದಿಂದ_ಮನೆ
ಹೆಂಗಸರ ಹಟಮಾರಿತನದಿಂದ.”
ಮುದುಕ ನೀತಿ ಕತೆ ಆರಂಭ ಮಾಡಿದಂತೆ ತೋರಿತು ಪುಟ್ಟಣ್ಣನಿಗೆ. ಆತನ
ಮುಖದ ನರಗಳು ಅಸ್ಥಿರವಾದುವು. ಪ್ಯಾಂಟಿನ ಜೇಬಿನೊಳಕ್ಕೆ ತುರುಕಿದ್ದ ಕೈ ಬೆರಳು
ಗಳನ್ನು ಅಲ್ಲಿಯೇ ಆತ ಒಂದಕ್ಕೊಂದು ತೀಡಿಕೊಂಡ.
ಪುಟ್ಟಣ್ಣನನ್ನು ಸಂಜೆ ನೋಡುವವರೆಗೂ ಯಾವ ರೀತಿ ಮಾತನಾಡಬೇಕೆಂಬು
ದನ್ನು ಆತನ ಮಾವ ನಿರ್ಧರಿಸಿರಲಿಲ್ಲ. ಅಳಿಯ ಒರಟಾಗಿ ವರ್ತಿಸಿದರೆ ಮಾತ್ರ,
ತಾನೂ ಸ್ಪಷ್ಟವಾಗಿ ಆಡಬೇಕು; ಆದರೆ ಆದಷ್ಟು ಮಟ್ಟಿಗೆ ಸಾಮೋಪಾಯದಿಂದ
ನಡೆದುಕೊಳ್ಳಬೇಕು-ಎಂಬುದು ಅವರ ಅಭಿಪ್ರಾಯವಾಗಿತ್ತು. ಈಗ ಸಾಮೋ
ಪಾಯದ ಹಾದಿಯಲ್ಲೆ ಹೊರಟಿದ್ದ ಅವರು, ಅದರಲ್ಲೇ ಮುಂದುವರಿದರು:
“ಗಂಡಸನ್ನ ಯಾವಾಗಲೂ ಸಮಾಜ ಸಂಶಯದಿಂದಲೆ ನೋಡುತ್ತೆ_ಆತ
ಅನೀತಿವಂತನೇ ಅಂತ. ಆದರೆ ಗಂಡಸು ಹಾಗಾಗೋದಕ್ಕೆ ಎಷ್ಟೋ ಸಂಸಾರಗಳಲ್ಲಿ
ಹೆಂಗಸೇ ಕಾರಣವಾಗ್ತಾಳೆ. ಆಕೆಗೆ ಒಳ್ಳೆಯ ಮಾತು ಆಡೋಕೆ ಬರದಿದ್ದರೆ, ಗಂಡ
ಹೊರಗೆ ಸ್ನೇಹಿತರ ಜತೇಲೇ ಹೆಚ್ಚಾಗಿರ್ತಾನೆ. ಮನೆಯ ಕಿರುಕುಳ ಜಾಸ್ತಿ ಆದರೆ,
ಕುಡಿದು ಮರೆಯೋಕೆ ಪ್ರಯತ್ನಿಸ್ತಾನೆ. ಮನೆ ಹೆಂಡತಿ ಆತನನ್ನು ದೂರವಿಟ್ಟರೆ,
ಬೇರೆ ಮನೆಗೆ ಹೋಗ್ತಾನೆ—”
ಇನ್ನು ತಡೆಯುವುದಾಗದೆ ಪುಟ್ಟಣ್ಣ ಗೊಗ್ಗರ ಧ್ವನಿಯಲ್ಲಿ ಕೇಳಿದ.
“ನಾನು ಹೀಗೆಲ್ಲಾ ಮಾಡ್ತಿದೀನಿ ಅಂತ ನಿಮ್ಮ ಅಭಿಪ್ರಾಯವೊ?”
“ಇಲ್ಲ ಪುಟ್ಟಣ್ಣ. ಖಂಡಿತ ಇಲ್ಲ. ನನ್ನ ಮಗಳು ಅಂಥ ಭಾಗ್ಯಹೀನೇಂತ
ನಾನು ಭಾವಿಸೋದಿಲ್ಲ. ಲೋಕವಿಚಾರ ಹೇಳ್ದೆ. ನಿಮಗಿನ್ನೂ ಚಿಕ್ಕ ವಯಸ್ಸು.
ಈಗ ಶ್ರದ್ಧೆ ಇಟ್ಟು ಕೆಲಸ ಮಾಡಿದರೆ, ಪ್ರಯತ್ನ ಪಟ್ಟರೆ, ದೊಡ್ಡ ಹುದ್ದೆಗೆ ಬಂದೇ
ಬರ್ತೀರಾ. ನಿಮಗೊಂದು ಗಂಡು ಮಗುವೂ ಹುಟ್ಟಿ-".
“ನೀವು ಏನು ಹೇಳಬೇಕೂಂತಿದೀರೋ ಸ್ಪಷ್ಟವಾಗಲಿಲ್ಲ.”
ಅಳಿಯನ ಸ್ವರದಲ್ಲಿದ್ದ ಅಸಹನೆಯನ್ನು ಗುರುತಿಸಿ, ಮಾವ ಸ್ವಲ್ಪ ಸ್ವರವೇರಿಸಿ
ನುಡಿದರು:
“ನಾನು ಹೇಳಬೇಕೂಂತಿರೋದು ಇಷ್ಟೆ ಪುಟ್ಟಣ್ಣ. ಒಳ್ಳೇದಾಗೋದೂ ಕೆಟ್ಟ
ದಾಗೋದೂ ಬಹಳಮಟ್ಟಿಗೆಲ್ಲ ಮನುಷ್ಯನ ಕೈಲೇ ಇದೆ. ಸುನಂದೆಯೂ ವಿದ್ಯಾವತಿ.
ನೀವೂ ವಿದ್ಯಾವಂತರು. ನನ್ನ ಮಗಳು ನಿಮ್ಮ ಕೈ ಹಿಡಿದಿದಾಳೇಂತ ನನಗೆ
ಸಂತೋಷವೇ.”
ಈ ಮಾತು ಸಾಕೆನ್ನುವಂತೆ ಪುಟ್ಟಣ್ಣ ಮತ್ತೆ ಚಡಪಡಿಸಿದ. ಆತನ ಮಾವ
ಅದನ್ನು ಲೆಕ್ಕಿಸದೆ ಹೇಳಿದರು: