ಪುಟ:ಪಾಲಿಗೆ ಬಂದ ಪಂಚಾಮೃತ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

93

“ಸುನಂದಾ ದೂರು ಕೊಟ್ಟು ನನ್ನನ್ನ ಕರೆಸಿಕೊಳ್ಲಿಲ್ಲ ಪುಟ್ಟಣ್ಣ. ಹಾಗೇ
ನಾದರೂ ಆಕೆ ಮಾಡಿದ್ದರೆ, ಹಾಗೆ ದೂರು ಕೊಟ್ಟ ತಪ್ಪಿಗೆ ತಕ್ಕ ಶಿಕ್ಷೆ ಕೊಡೀಂತ
ನಿಮಗೇ ಹೇಳ್ತಿದ್ದೆ. ನಾನು ಬಂದದ್ದು ನನ್ನ ಎರಡನೇ ಮಗಳಿಗೆ ವರ ಹುಡುಕಿಕೊಂಡು.
ಬಂದು ನೋಡೀಂತ ಒಂದು ಕಡೆಯವರು ಕಾಗದ ಬರೆದಿದ್ದರು. ಅದಕ್ಕೋಸ್ಕರ
ಬಂದೆ.”
ಆತ ಸತ್ಯವನ್ನೆ ಆಡುತ್ತಿದ್ದರೆಂಬುದು ಪುಟ್ಟಣ್ಣನಿಗೆ ಸ್ಪಷ್ಟವಾಯಿತು. ಅವನು
ಸುಮ್ಮನಿದ್ದ.
ಆತನ ಮಾವ, ಮಾತುಗಳನ್ನೆಲ್ಲ ಸುರಿದು ತನ್ನ ನೋವಿನ ಬರಿದಾದ ಆಳವನ್ನು
ಮುಚ್ಚಲು ಬಯಸಿದರು.
“ಬಂದದ್ದು ವ್ಯರ್ಥವಾಯ್ತು, ಆ ವರ ನನಗೆ ಹಿಡಿಸಲಿಲ್ಲ. ಮದುವೆ ಅನ್ನೋದು
ತುಂಬಾ ಯೋಚಿಸಿ ಮಾಡಬೇಕಾದ ಕೆಲಸ ನೋಡಿ. ಶುದ್ಧ ಅಯೋಗ್ಯನಿಗೆಲ್ಲ ಮಗಳನ್ನ
ಕೊಡೋಕಾಗುತ್ಯೆ?”
ತಮ್ಮ ವರಾನ್ವೇಷಣದ ಅನುಭವವನ್ನೇ ಸ್ವಲ್ಪ ರೂಪಾಂತರಗೊಳಿಸಿ ಈ
ಸಂಭಾಷಣೆಯ ಉದ್ದೇಶ ಸಾಧನೆಗೋಸ್ಕರ ಬಳಸಿದ್ದರು ಸುನಂದೆಯ ತಂದೆ.
ತಾನು ಬಿಟ್ಟುಕೊಡಬಾರದು; ವ್ಯಗ್ರನಾಗಿ ಮಾತನಾಡಬೇಕು; 'ನಿಮ್ಮ
ಮಗಳನ್ನೂ ಮೊಮ್ಮಗಳನ್ನೂ ಇವತ್ತೇ ಕರಕೊಂಡು ಹೊರಟು ಹೋಗಿ' ಎನ್ನಬೇಕು-
ಎಂದೆಲ್ಲ ಪುಟ್ಟಣ್ಣ ಯೋಚಿಸಿದ್ದ. ಅದಕ್ಕೆ ಅವಕಾಶವೇ ಸಿಗಲಿಲ್ಲ. ಬದಲು, “ಶುದ್ಧ
ಅಯೋಗ್ಯನಿಗೆಲ್ಲ ಮಗಳನ್ನ ಕೊಡೋಕಾಗುತ್ಯೆ?” ಎಂದು ಮಾವ ಕೇಳಿದ್ದರು. 'ಒಬ್ಬ
ಮಗಳನ್ನ ಈಗಾಗಲೇ ಅಯೋಗ್ಯನಿಗೆ ಕೊಟ್ಟು ತಪ್ಪು ಮಾಡಿದ್ದೇನೆ; ಇನ್ನೊಬ್ಬ
ಮಗಳನ್ನೂ ಹಾಗೆಯೇ ಕೊಡೋದಕ್ಕಾಗುತ್ಯೆ?'_ಎಂದು ಕೇಳಿದ ಹಾಗಿತ್ತು ಅವರ
ಮಾತಿನ ಧ್ವನಿ.
ಬೀದಿ ಕವಲೊಡೆದ ಕಡೆ ಪುಟ್ಟಣ್ಣ ನಿಂತ.
“ನಾನು ಈ ಹಾದೀಲಿ ಹೋಗ್ಬೇಕು. ಗೃಹಕೃತ್ಯದ ವಿಷಯ ಮಾತಾಡೋಕೆ
ಇದ್ದದ್ದು ಇಷ್ಟೆ ತಾನೆ?”
ಆತನ ಮಾವನೂ ಅಲ್ಲೇ ನಿಂತರು.
“ನಾವು ಏನು ಮಾಡಿದರೂ ನಮ್ಮನ್ನೆಲ್ಲ ನೋಡೋ ದೇವರೊಬ್ಬ ಮೇಲಿದಾ
ನಲ್ವೆ ಪುಟ್ಟಣ್ಣ ?”
ದೇವರ ಹೆಸರು ಹೇಳಿ ಮುದುಕ ಹೆದರಿಕೆ ಹುಟ್ಟಿಸುತ್ತಿದ್ದಾನೆ_ಎಂದುಕೊಂಡ
ಪುಟ್ಟಣ್ಣ.
ಅಳಿಯ ನಿರುತ್ತರನಾದುದನ್ನು ಕಂಡು ಮಾವ ಹೇಳಿದರು:
“ಆಗಲಿ. ನಾನೀಗ ಹೋಗ್ತೀನಿ. ಹಿರಿಯರ ಆಶೀರ್ವಾದಕ್ಕೆಲ್ಲ ಈಗ ಬೆಲೆ
ಯುಂಟೋ ಇಲ್ವೋ? ಆದರೂ ಆಶೀರ್ವಾದ ಮಾಡೋದು ನನ್ನ ಕರ್ತವ್ಯ.