ತಂದೆ ಹೇಳುತ್ತಿರುವುದು ಎಷ್ಟೊಂದು ನಿಜ-ಎಂದು ತೋರಿತು ಸುನಂದೆಗೆ.
ಹೊರಡುತ್ತ ತಂದೆಯೆಂದರು:
"ಸುಮ್ಮನೆ ಕೊರಗ್ತಾ ಇರಬೇಡ ಸುಂದಾ. ಧೈರ್ಯವಾಗಿರು. ನಗುನಗ್ತಾ
ಇರು. ಈತ ಹಾದಿಗೆ ಬಂದೇ ಬರ್ತಾನೆ. ಹಾಗಾದರೆ ಅನಾಹುತವೇನಾದರೂ ಆದರೆ,
ನಾವೆಲ್ಲ ಇನ್ನೂ ಇದೀವಿ ಅನ್ನೋದನ್ನ ಮರೀಬೇಡ. ಕಾಗದ ಬರಿ....ಬರೀತಿ ತಾನೆ?"
ಆಕೆ ಮೆಲ್ಲನೆ ಉತ್ತರವಿತ್ತಳು:
"ಬರೀತೀನಿ."
ಸುನಂದಾ ತನ್ನ ಮಾಂಗಲ್ಯ ಸೂತ್ರದ ರಕ್ಷಣೆಗೆ ಟೊಂಕ ಕಟ್ಟಿದಳು. ಒಳಗಿನ
ಮನಸ್ಸು ಏನೇ ಇದ್ದರೂ ಹೊರಗೆ ನಗೆಯ ಮುಖವಾಡ ಧರಿಸಲು ಆಕೆ ಕಲಿತಳು.
"ಹೀಗೇ ಇರೀಮ್ಮ ಯಾವಾಗಲೂ"
—ಎಂದರು ರಾಧಮ್ಮ.
ಎಂದಾದರೊಮ್ಮೆ ಹಿತ್ತಿಲು ಗೋಡೆಗಳು ಆಚೆ ಈಚೆಯಿಂದ ಸುನಂದೆಗೂ
ಕುಸುಮಳಿಗೂ ಸಂಭಾಷಣೆಯಾಗುತ್ತಿತ್ತು. ಆ ಕುಸುಮಳೂ ಒಂದು ದಿನ ಅಂದಳು:
"ನೀವು ಬೈತಲೆ ತೆಗೆದು, ಹೆರಳು ಹಾಕಿ, ಕೊಂಡೆ ಕಟ್ಟಿದರೆ ತುಂಬಾ ಚೆನ್ನಾಗಿ
ಕಾಣ್ತೀರಿ"
"ಹೌದೆ!"
—ಎಂದು ಸುನಂದಾ ನಕ್ಕು ಬಿಟ್ಟಳು. ಕುಸುಮ ತನಗಿಂತಲೂ ಸುಂದರಿ ಎಂದು
ಸುನಂದೆಗೆ ಗೊತ್ತಿತ್ತು. ಆದರೂ ಸರಿಯಾಗಿ ಅಲ೦ಕಾರ ಮಾಡಿಕೊಂಡಾಗ ತಾನೂ
ಕುಸುಮಳ ಎದುರಲ್ಲಿ ಸೋಲುವುದಿಲ್ಲ ಎಂಬುದೂ ಆಕೆಗೆ ತಿಳಿದಿತ್ತು.
****
ಅಂತಹ ಒಂದು ಸಂಜೆ-ರಾತ್ರೆ-ಸುನಂದೆ ನಿರೀಕ್ಷಿಸದೇ ಇದ್ದ ಘಟನೆಯೊಂದು
ನಡೆಯಿತು.
ಆ ದಿನ ಸುನಂದಾ ಶ್ರಮವಹಿಸಿ ತನ್ನನ್ನು ಸಿಂಗರಿಸಿಕೊಂಡಿದ್ದಳು. ಉಲ್ಲಾಸ
ವಾಗಿರಲು ಆಕೆ ಯತ್ನಿಸುತ್ತಿದ್ದುದರ ಪರಿಣಾಮ ದೇಹದ ಮೇಲೆಯೂ ಆಗಿತ್ತು. ಆ
ಸ್ಪಷ್ಟ ಬದಲಾವಣೆಯನ್ನು ಗುರುತಿಸದೆ ಇರುವುದು ಯಾರಿಂದಲೂ ಸಾಧ್ಯವಿರಲಿಲ್ಲ.
ಮಧಾಹ್ನ ಮಾತನಾಡಿಸಲೆಂದು ಬಂದ ರಾಧಮ್ಮ ಮೂಗಿನ ಮೇಲೆ ಬೆರಳಿಟ್ಟು
ನೋಡಿ ಕತ್ತು ಕೊಂಕಿಸಿ ಹೇಳಿದರು: