ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ನೊಬ್ಬರು ಮಹದೇವ ಭಟ್. ಹಲವು ಹವ್ಯಾಸಗಳನ್ನು ಹೊಂದಿದ್ದ ಪ್ರಚಂಡ ಮನುಷ್ಯ, ಜ್ಯೋತಿಷ್ಯ, ಮರಾಠ, ಜಲಶೋಧನೆ, ಸ್ಥಳ ಪರೀಕ್ಷೆ, ಚೆಂಡೆ, ಮದ್ದಲೆ, ಮೃದಂಗವಾದನ, ಭಾಗವತಿಕೆ, ಕೊಳಲು, ವಯಲಿನ್, ಮಂತ್ರವಾದ, ಕೃಷಿ, ಸಂಸ್ಕೃತ, ಪೌರೋಹಿತ್ಯ, ಹಳ್ಳಿಮದ್ದು... ಮಹಾ ಪ್ರತಿಭಾಶಾಲಿ, ಕೊನೆಗೆ ಅವೆಲ್ಲವನ್ನೂ ಬಿಟ್ಟು ಕಾರ್ಕಳದಿಂದ ಮಾಳಕ್ಕೆ ನಿತ್ಯ ಕಾರು ಸರ್ವಿಸ್ ಮಾಡಿದ್ದರು. ನಿರಂತರ ೧೦-೧೫ ವರ್ಷ!! ಇವರು ಸಂಗೀತಗಾರ ಶ್ರೀನಾಥ ಮರಾಠ ಅವರ ತಂದೆ.

ವಾಸುದೇವ ಡೋಂಗ್ರೆ ಉತ್ತಮ ಅರ್ಥದಾರಿ. ಪೌರಾಣಿಕ ಅನುಭವ, ಹೇಳುವ ಕ್ರಮ, ಭಾವನೆ, ಹಿನ್ನೆಲೆ ಹೀಗೆ ಅರ್ಥಗಾರಿಕೆಯ ಸಮಗ್ರ ಗುಣಗಳನ್ನು ಒಳಗೊಂಡಿದ್ದ ಅರ್ಥದಾರಿ.

ಹಾಗೆ ನೋಡಿದರೆ ಮಾಳ-ದುರ್ಗದ ಪ್ರದೇಶದಲ್ಲಿ ಯಕ್ಷಗಾನ ತಾಳಮದ್ದಲೆಗೆ ೨೦೦-೨೫೦ ವರ್ಷಗಳ ಇತಿಹಾಸವೇ ಇದೆಯಂತೆ. ಬಾಪಟ್ ಮಹಾದೇವ ಶಾಸ್ತ್ರಿಗಳು ಇದೇ ಊರಿನಲ್ಲಿ ಬೆಳೆದವರು. ನಾರಾಯಣ ಡೋಂಗ್ರೆ, ನಾರಾಯಣ ಭಟ್, ಶಂಕರ ಡೋಂಗ್ರೆ, ಶೇಡಿ ಗಣಪತಿ ಭಟ್, ಶ್ರೀಕಂಠ ಪಾಠಕ್ (ಮದ್ದಲೆಗಾರ ಎ.ಪಿ. ಪಾಠಕ್ತರ ತಂದೆ), ಗೋವಿಂದ ಬರ್ವೆ- ಹೀಗೆ ಮಾಳದ ಊರಿನ ಅರ್ಥದಾರಿಗಳ ಪಟ್ಟಿ ಬೆಳೆಯುತ್ತದೆ.

ಮಾಳ ತೆಂಕು-ಬಡಗುಗಳ ಗಡಿಯಾದುದರಿಂದಲೋ ಏನೋ ಜೋಶಿಯವರಿಗೆ ಅವೆರಡೂ ತಿಟ್ಟನ್ನು ಸಮಾನವಾಗಿ ಕಾಣುವಂತಾಗಿರಬೇಕು.

ಆನಂದ ಕಮ್ಮಿಯೆಂಬ ಡಿಪಾರ್ಟ್‌ಮೆಂಟಲ್ ಸ್ಟೋರ್...

ಅದು ಕನ್ನಡದ ಪರಿಸರವಲ್ಲ. ಸಣ್ಣ ಪ್ರಾಯದಲ್ಲಿ ಜೋಶಿಯವರಿಗೆ ತಾಳಮದ್ದಲೆ ಕೇಳುವಾಗ ಆ ಮಾತುಗಳು ಏನೊಂದೂ ಅರ್ಥವಾಗುತ್ತಿರಲಿಲ್ಲವಂತೆ. ಮನೆ ಮಾತು ಚಿತ್ಪಾವನಿ. ತಪ್ಪಿಯೂ ಮನೆಯಲ್ಲಿ ಕನ್ನಡ ಮಾತಾಡುತ್ತಿರಲಿಲ್ಲ. ಎಲ್ಲಿ ತಮ್ಮ ಭಾಷೆ ಮರೆಯಾಗುತ್ತದೋ ಎಂಬ ಆತಂಕ. ಮನೆಯಿಂದ ಹೊರಬಂದರೆ ತುಳು. ಶಾಲೆಯಲ್ಲಿ ಮಾತ್ರ ಕನ್ನಡ, ಮತ್ತು ಯಾರಾದರೂ ಗಾರ್ಡುಗಳ ಅಧಿಕಾರಿಗಳೋ ಬಂದರೆ ಅಷ್ಟೇ ಕನ್ನಡ, ಹೀಗೆ ಕನ್ನಡಕರಾವಳಿಯ ಹಲವರಂತೆ ಅನ್ಯವಾಗಿಯೇ ಜೋಶಿಯವರೊಳಗಿಳಿದದ್ದು ಕನ್ನಡ.

ಜೋಶಿಯವರ ಬಾಲ್ಯದ ಇನ್ನೊಂದು ಅಚ್ಚರಿಯಂತೆ ಕಾಣುವ ವ್ಯಕ್ತಿಯೆಂದರೆ ಆನಂದ ಕಮ್ರ- ಆನಂದ ಕಾಮತ್. ಮರೆಯಲಾಗದ ಅದ್ಭುತ ವ್ಯಾಪಾರಿ ಮತ್ತು ಪ್ರಾತಃಸ್ಮರಣೀಯ ವ್ಯಕ್ತಿಯಂತೆ ಕಾಣುತ್ತಿದ್ದರು ಈ ಕಮ್ಮಿ, ಹೆಗಲಲ್ಲಿ ಎರಡು ಚೀಲ ಮೈಮೇಲೆ ಒಂದು ಕೋಟು- ಅವರು ಕೋಟು ಧರಿಸದೆ ಎಂದೂ ಹೊರಬರುತ್ತಿರಲಿಲ್ಲವಂತೆ. ಹಳ್ಳಿಯ ಮನೆಗಳಿಗೆ ಬಂದು ಅಡಿಕೆ, ಬಾಳೆಗೊನೆ, ಕಾಳುಮೆಣಸು ಮೊದಲಾದವನ್ನು ಕೊಂಡು ಪೇಟೆಯ ವಸ್ತುಗಳನ್ನು ಮಾರಿ ಹೋಗುವವರು, 'ನಮಗೆ ಇಂಥ ಸಾಮಾನು ಬೇಕೆಂದು ಪಟ್ಟಿಕೊಟ್ಟರೆ ಹೇಳಿದ ದಿನಕ್ಕೆ ರೆಡಿ, ಅಂಜೂರ, ಖರ್ಜೂರ, ಕೇಸರಿ, ದ್ರಾಕ್ಷಿಯೋ ಎಂತದೂಂತ ಕೇಳಬೇಡಿ. ಅವರೊಂದು ನಡೆದಾಡುವ ಡಿಪಾರ್ಟಮೆಂಟಲ್ ಸ್ಟೋ‌. ಆ ಕಾಲದಲ್ಲಿ ಅವರು ಸುದ್ದಿವಾಹಕರೂ ಹೌದು, ಯುದ್ಧದಿಂದ ಹಿಡಿದು ಹೊರ ಜಗತ್ತಿನ ಸುದ್ದಿಗಳನ್ನು ನಾವು ಈ ಕಮಿಯ ಮೂಲಕವೇ ಕೇಳುತ್ತಿದ್ದೆವು' ಎನ್ನುವರು ಜೋಶಿ.

ಡಾ.ಎಂ.ಪ್ರಭಾಕರ ಜೋಶಿ / ೫