ಡಾ. ಎಂ. ಪ್ರಭಾಕರ ಜೋಶಿಯವರು ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಆಡಳಿತಾತ್ಮಕವಾಗಿ ಹಲವು ಸುಧಾರಣೆಗಳನ್ನು ತಂದರು. ವಿದ್ಯಾರ್ಥಿ ಮತ್ತು ಉಪನ್ಯಾಸಕ ಸ್ನೇಹಿಯಾಗಿ ಮಾದರಿ ಪ್ರಾಚಾರ್ಯರಾಗಿ ಜೋಶಿ ಕಾರ್ಯನಿರ್ವಹಿಸಿದ ರೀತಿ ಹುಬ್ಬೇರಿಸು ವಂಥದ್ದು. ಅವರ ಹಲವು ಸಹೋದ್ಯೋಗಿಗಳು ಹೇಳುವಂತೆ ಜೋಶಿ ಪ್ರಾಚಾರ್ಯರಾಗಿದ್ದ ೨ ವರ್ಷಗಳ ಅವಧಿ 'ರಾಮ ರಾಜ್ಯ'ಕ್ಕೆ ಸಮಾನವಾಗಿತ್ತು! ಪ್ರಿನ್ಸಿಪಾಲ್-ವಿದ್ಯಾರ್ಥಿಗಳು- ಉಪನ್ಯಾಸಕರ ನಡುವೆ ಇದ್ದ ಅಂತರವನ್ನು ಇನ್ನಷ್ಟು ಕಿರಿದಾಗಿಸಿದರು. ತಮ್ಮ ದೂರು, ಮನವಿ, ಸಲಹೆ, ಯಾವುದೇ ಕೆಲಸವಿದ್ದರೂ ಚೇಂಬರ್‌ನೊಳಗೆ ಎಷ್ಟೇ ದೊಡ್ಡ ಮಹಾನು ಭಾವರಿದ್ದರೂ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಸದಾ ಮುಕ್ತ ಪ್ರವೇಶವಿರುತ್ತಿತ್ತು. ಈ ಅವಧಿಯಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ವಿದ್ಯಾರ್ಥಿನಿಯರನ್ನೂ ಈ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು.
೧೯೮೫ರ ಸುಮಾರಿಗೆ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಜೋಶಿಯವರ ವಿದ್ಯಾರ್ಥಿನಿ ಯಾಗಿದ್ದ ಮತ್ತು ಸದ್ಯ ಅಲ್ಲೇ ಪ್ರಾಧ್ಯಾಪಕಿಯಾಗಿರುವ ಹರಿಣಿ, ಪ್ರಭಾಕರ ಜೋಶಿಯವರ ಅಧ್ಯಾಪನ ಕ್ರಮ, ಆಡಳಿತದ ಬಗ್ಗೆ ಹೇಳುವುದಿಷ್ಟು: 'ಆಗಷ್ಟೇ ಕಾಲೇಜು ಸೇರಿದ್ದ ನಮಗೆ ಅಕೌಂಟೆನ್ಸಿ ಏನೊಂದೂ ಅರ್ಥವಾಗುತ್ತಿರಲಿಲ್ಲ. ನಮ್ಮ ನಡುವಿನ ತಾಜಾ ಉದಾಹರಣೆಗಳ ಮೂಲಕ ಅಕೌಂಟೆನ್ಸಿಯನ್ನು ಅರ್ಥ ಮಾಡಿಸಿದ್ದು ಜೋಶಿ ಸರ್. ಅವರ ಪಾಠ, ಪಾಠದ ಹಾಗೆ ಇರ್ತಿಲಿಲ್ಲ. ಅಲ್ಲಿ ಜೋಕ್ಸ್ ಇರ್ತಿತ್ತು. ಪೀರಿಯೆಡ್ ಮುಗಿದದ್ದೇ ಗೊತ್ತಾಗ್ತಿರ್ಲಿಲ್ಲ. ಆಗ ಜೋಶಿ ಸರ್ ಬಿ.ಎಸ್.ರಾಮನ್ ಪುಸ್ತಕ ರೆಫರ್ ಮಾಡುತ್ತಿದ್ದರು. ಆದರೆ ಅವರು ಬುಕ್ ನೋಡಿ ಪಾಠ ಮಾಡುತ್ತಿರಲಿಲ್ಲ. ಅವರು ಅಕೌಂಟೆನ್ಸಿಯನ್ನು ಪಾಠ ಮಾಡುತ್ತಿದ್ದ ಬಗೆಯೇ ಬೇರೆ. ಎಲ್ಲರಂತೆ ಅವರು ತರಗತಿಯ ಫ್ಲಾಟ್‌ಫಾರಂ ಮೇಲೆ ನಿಂತು ಪಾಠ ಮಾಡುತ್ತಿರಲಿಲ್ಲ. ಇಡೀ ತರಗತಿಯಲ್ಲಿ ಓಡಾಡಿಕೊಂಡೇ ಪಾಠ ಪ್ರವಚನ. ಲೆಕ್ಕಾಚಾರದ ವಿಷಯ ಬಂದಾಗ ಒಂದು ಪುಸ್ತಕವನ್ನು ತೆಗೆದು ಇನ್ನೊಂದು ಕಡೆ ಇಟ್ಟು ಕೂಡಿಸಿ ಗುಣಿಸುವಂತೆ ಪ್ರಾಯೋಗಿಕವಾಗಿ ತೋರಿಸುತ್ತಿದ್ದರು. ಇಂಥ ಸರಳ ನಿದರ್ಶನಗಳ ಮೂಲಕವೇ ನಾವೆಲ್ಲ ಅಕೌಂಟೆನ್ಸಿಯನ್ನು ಕಲಿತದ್ದು. ಮತ್ತು ಈಗ ನಾನು ಉಪನ್ಯಾಸಕಿ ಯಾಗಿಯೂ ಅದೇ ರೀತಿಯನ್ನು ಪಾಲಿಸುತ್ತಿದ್ದೇನೆ.
'ಜೋಶಿ ಸರ್ ಪ್ರಿನ್ಸಿಪಾಲ್ ಆಗಿದ್ದ ಅವಧಿ ಮತ್ತೆಂದೂ ಬರಲೇ ಇಲ್ಲ. ಬೇರೆ ಯಾರೇ ಪ್ರಿನ್ಸಿಪಾಲರಾಗಿದ್ದರೆ ಲೆಕ್ಚರರ್ ಕಾಲೇಜಿಗೆ ಬರುವಾಗ ೨ ನಿಮಿಷ ಲೇಟ್ ಆಗಿದ್ದರೂ ಎದೆ ಮೇಲೆ ಕೈಹಿಡಿದುಕೊಂಡೇ ಬರಬೇಕಿತ್ತು. ಜೋಶಿ ಸರ್ ಬಳಿ ಅಂಥ ಅಳುಕು, ಹಿಂಜರಿಕೆ ಇರಲಿಲ್ಲ. ಯಾರೇ ಆಗಿದ್ದರೂ ಅವರು ತಮ್ಮ ಖಾಸಗಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಿತ್ತು. ಮತ್ತು ಅದಕ್ಕೆ ಅವರು ಪರಿಹಾರವನ್ನೂ ಸೂಚಿಸುತ್ತಿದ್ದರು. ಆಡಳಿತ ವ್ಯವಸ್ಥೆಯಲ್ಲಿ ತುಂಬ ಮುಕ್ತತೆ ತಂದರು. ಹಾಗಂತ ಯಾರೂ ಕೂಡಾ ಅದನ್ನು ದುರುಪಯೋಗ ಪಡಿಸಿಕೊಳ್ಳಲಿಲ್ಲ. ಆ ೨ ವರ್ಷವನ್ನು ನಾವೆಲ್ಲ ತುಂಬ ಖುಷಿಯಲ್ಲಿ ಕಳೆದಿದ್ದೇವೆ. ಆ ವರ್ಷಗಳಲ್ಲಿ ನಮ್ಮ ಕಾಲೇಜು ಫಲಿತಾಂಶದಲ್ಲೂ ಮುಂದಿತ್ತು!”
“ಜೋಶಿ ಸರ್ ನಿವೃತ್ತಿಯ ಬಳಿಕವೂ ಜೋಶಿ ಸರ್ ಅವರನ್ನು ತುಂಬ ಸಲ ನಮ್ಮ