ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸೂಕ್ಷ್ಮವಸ್ತು ವಿಷಯವೂ ಶಿವನ ಸಾನ್ನಿಧ್ಯದಂತೆ ತನಗೆ ಕಾಣುತ್ತಿದೆ ಎನ್ನುವ ಆ ಪಾತ್ರಕ್ಕೆ, ಕಡಲಿನ ತೆರೆಯ ಮೊರೆತವೂ ಶಿವೋಹಂ ಶಿವೋಹಂ..” ಎಂದಂತೆ ಕೇಳಿಸುತ್ತದೆ, ಜಗತ್ತಿನ ಪ್ರತಿಯೊಂದು ವಸ್ತುವೂ ಶಿವಲಿಂಗ ಸ್ವರೂಪದಂತೆ ಕಾಣಿಸುತ್ತದೆ. ಸೌತೆಕಾಯಿಯ ಹೊರ ಮೈಯ ಸೀಳೂ ಶಿವಲಿಂಗದಂತೆ ಕಾಣಿಸುತ್ತಿದೆ ಎಂದೆಲ್ಲ ವಿವರಿಸುತ್ತಾರೆ- ಇದು ಪ್ರಬುದ್ಧ ಚಿಂತನೆಯ ಜೊತೆಗೆ ಜೋಶಿಯವರ ಅರ್ಥ ಕುಸುರಿ.

ಕಾರಂತರ 'ಮರಳಿ ಮಣ್ಣಿಗೆ', ಅನಂತಮೂರ್ತಿಯವರ 'ಸಂಸ್ಕಾರ', ಕಂಬಾರರ ಕಾವ್ಯ, ಬೈರಪ್ಪನವರ 'ಪರ್ವ', ಕಾರ್ಲ್‌ ಮಾರ್ಕ್ಸ್, ಲೋಹಿಯಾರ ಪುಸ್ತಕಗಳು,ಅರ್ಥಶಾಸ್ತ್ರದ ಥಿಯರಿಗಳು, ಕುಮಾರಿಲ ಭಟ್ಟನ ಮೀಮಾಂಸೆ- ಹೀಗೆ ವ್ಯಾಪಕ ಓದು ಹೊಂದಿರುವುದೇ ಜೋಶಿಯವರ ಅರ್ಥಗಾರಿಕೆ ತಾಳಮದ್ದಲೆ ಲೋಕದ ಉಳಿದೆಲ್ಲ ಅರ್ಥದಾರಿಗಳಿಗಿಂತ ತೀರಾ ಭಿನ್ನವೂ ಶ್ರೇಷ್ಠವೂ ಆಗಿರುವುದಕ್ಕೆ ಕಾರಣ. ಜೊತೆಗೆ ಭಾರತೀಯ ದರ್ಶನ ಪರಂಪರೆಯ ವ್ಯಾಪಕ ಓದು. ಈ ಕಾರಣಕ್ಕೇ ಜೋಶಿಯವರ ಕರ್ಣ, ಅರ್ಜುನ, ಕೃಷ್ಣ, ರಾವಣ- ಮೊದಲಾದ ಪಾತ್ರಗಳ ಅಂತರಾಳದಲ್ಲಿ ಎಲ್ಲೋ ಒಂದು ಕಡೆ ಈ ಥಿಯರಿಗಳ ಛಾಯೆಯೂ ಕಾಣಿಸೀತು. 'ಕೃಷ್ಣ ಸಂಧಾನ'ದಲ್ಲಿ ದೌಪದಿಯಾಗಿ ಅರ್ಥ ಹೇಳಿದರೆ ಜೋಶಿಯೊಳಗೊಬ್ಬ ಸ್ತೀವಾದಿಯೂ ಇದ್ದಾನೆ ಎನ್ನಿಸದಿರದು. ಈ ಹಿನ್ನೆಲೆಯಲ್ಲಿ ತಾಳಮದ್ದಲೆ ಅರ್ಥದಾರಿಕೆಗೆ ಒಂದು ಹೊಸ ಸಾಧ್ಯತೆಯನ್ನು ಕೊಟ್ಟವರು ಜೋಶಿ. ತಾಳಮದ್ದಲೆಯಿಂದಾಗಿ ಕರ್ಣ ಈ ಹೊತ್ತು ಕೂಡ ಹೊಸ ಹೊಸತಾಗಿ ನಿತ್ಯ ಮರುಹುಟ್ಟು ಪಡೆಯುತ್ತಾನೆ. ಸನಾತನ ಅನುಭವಗಳು ಹೊಸ ಹೊಸ ರೂಪಗಳೊಂದಿಗೆ ನಮ್ಮೆದುರು ಅನಾವರಣಗೊಳ್ಳುತ್ತವೆ. ಜೋಶಿಯವರಂಥ ವಿದ್ವಾಂಸರು ಈ ಅನುಭವ ಸಾಕ್ಷಾತ್ಕಾರಕ್ಕೆ ಸಮರ್ಥ ಮಾಧ್ಯಮವಾಗುತ್ತಾರೆ. ಬಹುಶಃ ಆಧುನಿಕತೆ ಮತ್ತು ಪರಂಪರೆಯ ಈ ತರಹದ ಮುಖಾಮುಖಿ ಜಗತ್ತಿನ ಯಾವ ಕಲಾ ಮಾಧ್ಯಮದಲ್ಲೂ ನಡೆಯಲಾರದು.

ನಿಶಿತ ಚಿಂತಕ

ಡಾ.ಎಂ. ಪ್ರಭಾಕರ ಜೋಶಿಯವರು ಒಬ್ಬ ನಿಶಿತಮತಿಯ ಸೂಕ್ಷ್ಮಗ್ರಹಣ ಶಕ್ತಿಯ ಪ್ರಬುದ್ಧ ವ್ಯಕ್ತಿ. ಪ್ರಪಂಚದ ಯಾವುದೇ ವಿಷಯದ ಬಗ್ಗೆ ಸಮರ್ಪಕವಾಗಿ ಹತ್ತು ವಾಕ್ಯ ಹೇಳಬಲ್ಲ ಅಸಾಧಾರಣ ಪ್ರತಿಭೆಯುಳ್ಳ ವ್ಯಕ್ತಿ. ವೇದಶಾಸ್ತ್ರ, ಪುರಾಣ, ದೈತ, ಅದೈತ, ಭಗದ್ಗೀತೆ, ವಿಷ್ಣು ಸಹಸ್ರನಾಮ, ಆಧ್ಯಾತ್ಮ, ಸಂಗೀತ, ನೃತ್ಯ, ವಿವಿಧ ಕಲೆ, ಯಕ್ಷಗಾನ, ಸಮಾಜಶಾಸ್ತ್ರ, ವಿಜ್ಞಾನ, ರಾಜಕೀಯ, ಕ್ರಿಕೆಟ್, ದೇಶ ವಿದೇಶಗಳ ಸಮಸ್ಯೆ, ಯಾವುದೇ ವಿಚಾರದ ಬಗ್ಗೆ ಅರ್ಥಪೂರ್ಣವಾಗಿ, ಸ್ವಾರಸ್ಯವಾಗಿ ಮಾತಾಡಬಲ್ಲ ವಿದ್ವಾಂಸ. ಅಗಾಧವಾದ ಜ್ಞಾಪಕಶಕ್ತಿ, ಮೇಧಾಶಕ್ತಿ ಸಮ್ಮಿಳಿತಗೊಂಡ ಅನುಭವಿ. ವ್ಯಕ್ತಿಯನ್ನು ಒಂದೆರಡು ಭೇಟಿಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲ ಜಾಣೆ ಇವರಲ್ಲಿದೆ. ಮಾತು ಜೋಶಿಯವರ ಜೀವ ಸೆಲೆ. ಅವರು ಸರಸ ಮಾತುಗಾರ, ಚಿತ್ಪಾವನಿ, ಮರಾಟಿ, ಹಿಂದಿ, ತುಳು, ಹವ್ಯಕ, ಬ್ರಾಹ್ಮಣ ತುಳು, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಬುದ್ಧರು. ಆಯಾಯ ಭಾಷೆ ಬಲ್ಲವರ ಜೊತೆ ಅವರ ಆಪ್ತ ನಂಟನಂತೆ ಅದೇ ಭಾಷೆಯಲ್ಲಿ ಮಾತು ಸುರಿಸುವವರು ಜೋಶಿ.

ಡಾ.ಎಂ.ಪ್ರಭಾಕರ ಜೋಶಿ / ೧೮