ಜೋಶಿಯವರ ಬಳಿ ಸಾವಿರ ರಸ ನಿಮಿಷಗಳಿವೆ. ಲಘು ಹಾಸ್ಯ ಅವರ ಮಾತಿನ ಸ್ಥಾಯೀಭಾವ. ಆಪ್ತರ ಮನೆಗೆ ಹೋದರೆ, ಜೊತೆಗಿದ್ದವರ ಬಳಿ- 'ನಾನು ಈ ಮನೆಯಲ್ಲಿ ಸುಮಾರು ೬೪೫೭ ಸಾರಿ ಟೀ ಕುಡಿದಿರಬಹುದು. ೩೪೮ ಸಲ ಊಟ ಮಾಡಿರಬಹುದು' ಎಂದೆನ್ನುವರು. ಜೊತೆಗೆ ಕೇಳುಗರನ್ನು ಜತೆಗಾರರನ್ನು ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷಣವಂತರನ್ನಾಗಿಸುವ ಮಾತುಗಾರಿಕೆಯದು. ಇನ್ನು ಖಂಡತುಂಡ ನಿರ್ಣಯ. ಎಷ್ಟೇ ಆಪ್ತನಾಗಿರಲಿ, ಸರಿ ಅನ್ನಿಸದ್ದನ್ನು ನೇರವಾಗಿ ಹೇಳುವ ಪ್ರವೃತ್ತಿ. ಸ್ನೇಹಿತರ ಬಳಿಯೂ ಸೈದ್ಧಾಂತಿಕ ರಾಜಿ ಮಾಡಿಕೊಳ್ಳದವರು ಜೋಶಿ.
ಮೆಚ್ಚುಗೆಯೂ ಇದೆ, ಕಟುವಾದ ವಿಮರ್ಶೆಯೂ ಇದೆ.
ಜೋಶಿಯವರ ನಿಷ್ಠುರವಾದಿತ್ವವನ್ನು ರೂಪಿಸಿರಬಹುದಾದ ಹಲವು ಘಟನೆಗಳಲ್ಲಿ ಒಂದನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಆಗ ಜೋಶಿಯವರು ಪುಟ್ಟ ಹುಡುಗ ಅಂದು ಕಾರ್ಕಳದಲ್ಲಿ ಬೋಳ ನಾರಾಯಣ ಕಾಮತರ ಅಂಗಡಿ ಅಂದರೆ ಒಂದು ಯಾತ್ರಾಸ್ಥಳ. ಗುಣಮಟ್ಟ, ಸೇವೆ, ಪಾರದರ್ಶಕತೆ, ಬದ್ಧತೆಗೆ ಹೆಸರಾದ ಅಂಗಡಿ, ಪುಟ್ಟ ಮಕ್ಕಳು ಬಂದರೂ ಸೇವೆಯಲ್ಲಿ ಚ್ಯುತಿಯಿಲ್ಲ. ಒಂದು ಸಾರಿ ಓರ್ವ ಗ್ರಾಹಕರು ಅಲ್ಲಿ ಸಜ್ಜಿಗೆ ಖರೀದಿಸಿದ್ದ ವಿಷಯ ಮಾತಾಡು ತಿದ್ದಾಗ ಜೋಶಿಯವರ ಚಿಕ್ಕಪ್ಪ ಲಕ್ಷ್ಮಣ ಜೋಶಿ, 'ತೋರದ ಸಜ್ಜಿಗೆಯೋ ಸಮೀರದ ಸಜ್ಜಿಗೆಯೋ?' ಎಂದು ಕೇಳಿದ್ದರು. ಆಗ ಯಾರೋ, ವಿಷಯಾಂತರಿಸಿ, 'ಸಪೂರದ ಸಜ್ಜಿಗೆ ರವೆ ಲಾಡು ಮಾಡ್ಲಿಕ್ಕೆ ಒಳ್ಳೆಯದಾಗುತ್ತದೆ' ಎಂದು ಬಿಟ್ಟರು. ಅದಕ್ಕೆ ಲಕ್ಷ್ಮಣ ಜೋಶಿ, 'ನಾನು ಕೇಳಿದ್ದು ಸಜ್ಜಿಗೆ ಯಾವುದೂಂತ. ಅದು ಯಾವುದಕ್ಕೆ ಒಳ್ಳೆಯದಾಗುತ್ತದೆ ಅಂತಲ್ಲ. ಅದು ವಿಷಯಾಂತರ ಆಯಿತು. ನಾವು ಹೀಗೆಯೇ ಮಾತಾಡುವುದು ಎಲ್ಲ..” ಎಂದು ಬಿಟ್ಟರಂತೆ.
'ಒಂದು ವಿಷಯದ ಕುರಿತು ಮಾತನಾಡುವಾಗ ವಿಷಯಾಂತರ ಮಾಡಬಾರದು. 'ಟು ದ ಪರ್ಫೆಕ್ಟ್' ಇರಬೇಕು. ನಿತ್ಯ ಜೀವನದಲ್ಲೂ ಮಾತು ತರ್ಕದಂತಿರಬೇಕು. ಇಲ್ಲದಿದ್ದರೆ ಸಮಯವ್ಯರ್ಥ ಎಂಬ ಸಂದೇಶವನ್ನು ನಾನು ಕಲಿತದ್ದು ಚಿಕ್ಕಪ್ಪ ಲಕ್ಷ್ಮಣ ಜೋಶಿಯವರಿಂದ.. ಈ ತರ ನಿಶಿತವಾಗಿ ಚಿಂತನೆ ಮಾಡುವುದರಿಂದ ಸಮಾಜದಲ್ಲಿ ಅಂಥವರನ್ನು ಜನ 'ಚೊರೆ' ಎಂತಲೇ ಕರೆಯುತ್ತಾರೆ. ಒಟ್ಟು ಸಮೂಹದ ಮಧ್ಯದಲ್ಲಿ ಯಾವ ಚಿಂತನೆಯ ಮಟ್ಟ ಇದೆಯೋ ಅದನ್ನು ದಾಟಿ ನಿರೀಕ್ಷೆ ಮಾಡುವುದೇ ಅಪರಾಧ ಎಂದು ನನಗನ್ನಿಸುತ್ತದೆ' ಎನ್ನುತ್ತಾರೆ ಜೋಶಿ.
ಜೋಶಿ ಎಡಪಂಥೀಯರ ಗುಂಪಲ್ಲಿ ಬಲಪಂಥೀಯರಂತೆ, ಬಲಪಂಥೀಯರ ಗುಂಪಿಗೆ ಎಡಪಂಥೀಯರಂತೆ ಕಾಣಿಸುತ್ತಾರೆ. ಅವೆರಡೂ ಪಂಥಗಳ ಆಳವಾದ ಶಾಸ್ತ್ರೀಯ ಅಧ್ಯಯನ ಮಾಡಿಯೇ ನಿರ್ಣಯಕ್ಕೆ ಬರುತ್ತಾರೆ. ಎಲ್ಲ ವಾದಗಳ ಸೋಗಲಾಡಿತನವನ್ನು ಕಟುವಾಗಿ ವಿರೋಧಿಸುತ್ತಾರೆ. ರಾಜ್ಯದ ಒಂದು ಪತ್ರಿಕೆಯಲ್ಲಿ ಬಲಿ ವಾಮನ ಕಥೆ ವಿಶ್ಲೇಷಣೆಯ ಕುರಿತು ಅದೇ ಪತ್ರಿಕೆಗೆ ಜೋಶಿಯವರು ಬರೆದ ಪ್ರತಿಕ್ರಿಯೆಯನ್ನು ಇಲ್ಲಿ ಉದಾಹರಣೆಯಾಗಿ ಕೊಡಬಹುದು.
'ಪುರಾಣಾದಿ ಕಥನಗಳನ್ನು ಪ್ರಸ್ತುತಕ್ಕೆ ಅಳವಡಿಸುವುದು, ಸ್ತುತಿ, ನಿಂದೆ, ವಿಮರ್ಶೆಗಳು ತಪ್ಪಲ್ಲ. ಆದರೆ ಅವು ಸಯಕ್ತಿಕ ಮತ್ತು ಆ ಕಥೆ ಹೊರುವ ತರ್ಕಗಳಾಗಬೇಕು.... ವಾಮನ ಎಂಬ ಬ್ರಾಹ್ಮಣ ವಟು ಬಲಿಯ ತಲೆಯಲ್ಲಿ ಪಾದವಿಟ್ಟು ದಾನ ಪಡೆದುದನ್ನು ಬ್ರಾಹ್ಮಣ್ಯ,
-