ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸುಮಾರು ಐವತ್ತು ಪ್ರಶ್ನೆ ಕೇಳಿರಬಹುದು. ಜೋಶಿಯವರು ಹಿಂದೆ ಮುಂದೆ ನೋಡದೆ ಲೀಲಾಜಾಲವಾಗಿ ಉತ್ತರಿಸಿ ಬೆರಗುಗೊಳಿಸಿದ್ದರು. ಬೇರೆಬೇರೆ ಕಲೆಗಳನ್ನು ಉದಾಹರಿಸಿ ಪರಿಣಾಮಕಾರಿಯಾಗಿ ಉತ್ತರಿಸಿದ್ದರು.”

ಇಂದು ಯಕ್ಷಗಾನದಲ್ಲಿ ದೊಡ್ಡ ದೊಡ್ಡ ಅರ್ಥಧಾರಿಗಳು, ಪಾತ್ರಧಾರಿಗಳಿರಬಹುದು. ಆದರೆ ವಿಮರ್ಶೆಯೆನ್ನುವಂಥದದ್ದು ಬೇರೆಯೇ ಆಗಿದೆ. ಅದಕ್ಕೆ ಜೋಶಿಯವರೇ ಬೇಕು. ಇವರ ವಿಮರ್ಶೆಯಲ್ಲಿ ನಿಶಿತವಾದ ವೈಚಾರಿಕ ನೇರ ನೋಟ ಇದೆ. ಕೆಲವರು ಮುಖ ನೋಡಿ ಮಣೆ ನೀಡುವುದಿದೆ. ಆಗ ವಿಮರ್ಶೆ ದಾರಿ ತಪ್ಪಿ ಅಪಾಯವೇ ಸಂಭವಿಸುವುದಿದೆ. ಕೆಲವರು ಕಲೆಯ ಬಗ್ಗೆ ಜ್ಞಾನವಿಲ್ಲದೆ ಏನೋ ತನಗೆ ಕಂಡದ್ದನ್ನು ಹೇಳುವುದುಂಟು. ಶಿಲ್ಪ ಜ್ಞಾನವಿಲ್ಲದವ ಗಣಪತಿ ಮಾಡಲು ಹೊರಟು ಮಂಗನ ಮುಸುಡು ಮಾಡಿದ ಹಾಗಾಗುವುದುಂಟು. ಜೋಶಿಯವರದ್ದು ಹಾಗಲ್ಲ. ಯಾರ ಹಂಗೂ ಇಲ್ಲದೆ, ದಾಕ್ಷಿಣ್ಯಕ್ಕೆ ಒಳಗಾಗದೆ, ಕಲೆಯ ಸಂಪೂರ್ಣ ಜ್ಞಾನವನ್ನು ತಿಳಿದು ವಸ್ತುನಿಷ್ಠವಾಗಿ ವಿಮರ್ಶೆ ಮಾಡ ಬಲ್ಲವರಲ್ಲಿ ಜೋಶಿಯವರು ಮೊದಲಿಗರು. ರೈಲು ನಿಲ್ದಾಣದಲ್ಲಿ ಟಿಕೇಟು ಕೊಡುವವ ಪ್ರಯಾಣದ ಸ್ಥಳ, ಅದಕ್ಕೆ ಸರಿಯಾದ ಹಣವನ್ನು ಪಡೆದುಕೊಳ್ಳಬೇಕು. ಟಿಕೇಟು ಕೇಳಲು ಬಂದವ ಹೇಗಿದ್ದಾನೆ, ಚಂದ ಇದ್ದಾನಾ? ಕೋಟು ಬೂಟು ತೊಟ್ಟಿದ್ದಾನೋ, ಸ್ನೇಹಿತನೋ, ಸಂಬಂಧಿಯೋ ಎಂದು ನೋಡಿ ಟಿಕೆಟಿನ ಹಣ ಕಡಿಮೆ ತೆಗೆದುಕೊಂಡರೆ ಸಂಜೆ ಇವನೇ ಭರ್ತಿ ಮಾಡಬೇಕಾಗುತ್ತದೆ. ಪ್ರಯಾಣದ ಸ್ಥಳಕ್ಕೆ ಸರಿಯಾಗಿ ಟಿಕೇಟು ಕೊಟ್ಟು ಹಣ ಪಡೆಯುವುದೇ ಅವನ ಕರ್ತವ್ಯ. ಅದೇ ರೀತಿ ಜೋಶಿಯವರ ವಿಮರ್ಶೆ ವಸ್ತು ನಿಷ್ಠವಾದುದು. ಇದು ಕಲೆಯ ಆರೋಗ್ಯಕ್ಕೆ ಬಹಳ ಉತ್ತಮ. ಪಾದರಸದಂಥ ಲವಲವಿಕೆ, ಶಿಸ್ತು, ಔದಾರ್ಯ, ಗುಣಗ್ರಾಹಿ, ಒಳ್ಳೆಯ ಗುಣಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವ ಸಜ್ಜನಿಕೆ, ಆತ್ಮೀಯತೆ, ಒಪ್ಪ ಓರಣ ಇವರನ್ನು ಮುನ್ನಡೆಸಿದ ಗುಣಗಳು. ಇನ್ನಿಲ್ಲ ಎಂಬಷ್ಟರವರೆಗಿನ ಇವರ ಭಾಷಣ ಬಹು ಪ್ರಸಿದ್ದ. ಅದಿಂದ ಅಃ'ದವರೆಗೆ ವಿಷಯಗಳನ್ನು ಕ್ರೋಢೀಕರಿಸಬಲ್ಲ ವಿದ್ವಾಂಸ, ಉದಾ: ಶೇಣಿಯವರನ್ನು ಕಂಡು ಕೇಳದವರಿಗೂ ಶೇಣಿಯವರ ಬಗ್ಗೆ ಜೋಶಿಯವರ ಭಾಷಣ ಕೇಳಿದರೆ ಶೇಣಿಯವರ ಸಮಗ್ರ ಚಿತ್ರಣ ಮನದಟ್ಟಾದೀತು. ಇದೇ ರೀತಿಯಲ್ಲಿ ಭಾಷಣಗಳೂ ಅನುಭವದ ಖನಿಜ. ಒಂದು ನವಿರಾದ ಹಾಸ್ಯ ಭಾಷಣದಲ್ಲೂ, ಅರ್ಥದಲ್ಲೂ ಹೀಗೆ ಮಾತನಾಡುವಾಗಲೂ ನುಸುಳಿ ಹೋದೀತು. ಗಂಟೆ ಗಂಟೆ ಮಾತಾಡಿದರೂ ಮಾತಿನ ಒರತೆ ಆರಲಾರದು. ಮಾತು ಆಕರ್ಷಣೀಯ. ಇನ್ನೂ ಕೇಳೋಣ ಎನಿಸುವಂತಿದೆ. ಹಲವಾರು ಉದಾಹರಣೆಗಳು, ಉಪಕಥೆಗಳು, ಉಪಮೆಗಳು ಇವರ ಮಾತಿನಲ್ಲಿ ಪುಂಖಾನುಪುಂಖವಾಗಿ ಬರುತ್ತವೆ. ಹಲವಾರು ಭಾಷೆಗಳನ್ನು ಲೀಲಾಜಾಲವಾಗಿ ಮಾತಾಡಬಲ್ಲ ಭಾಷಾ ಕೋವಿದ. ಇವರ ಅರ್ಥಗಾರಿಕೆಯೂ ಹಾಗೆ. ಪಾತ್ರವನ್ನು ಹಲವಾರು ದೃಷ್ಟಿಕೋನದಲ್ಲಿ ಕಂಡುಕೊಂಡು ಪಾತ್ರಗಳನ್ನು ಹೃದಯಂಗಮವಾಗಿ ಚಿತ್ರಿಸುತ್ತಿದ್ದರು. ಬಹಳ ದೀರ್ಘವಾಗಿ ಆಕರ್ಷಕವಾಗಿ ಮಾತಾಡಬಲ್ಲ ಜೋಶಿಯವರು ಸಮಯಾವಕಾಶವಿಲ್ಲದಾಗ ಕೆಲವೇ ವಾಕ್ಯಗಳಲ್ಲಿ ಪದ್ಯದ ಅರ್ಥವನ್ನೆಲ್ಲಾ ತುಂಬಿಸಿ ಲಘುಬಗೆಯಿಂದ ಮಾತಾಡಬಲ್ಲ ಸಮರ್ಥ.

ಡಾ.ಎಂ. ಪ್ರಭಾಕರ ಜೋಶಿ