ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವರು ಅರ್ಜುನನ ಅರ್ಥ ಹೇಳಿದವರಲ್ಲ. ಹನುಮಂತನ ಅರ್ಥ ಹೇಳುತ್ತಿದ್ದರು. ಎದುರಾಳಿ ಹನುಮಂತ ಉಡುವೆಕೋಡಿ ಸುಬ್ಬಪ್ಪಯ್ಯ, ಮಾತಲ್ಲೇ ಸೇತುವೆ ಕಟ್ಟಿದರು, ಮುರಿದರು, ಕಟ್ಟಿದರು. ಅಂದಿನ ಅರ್ಜುನ ಇಡೀ ತಾಳಮದ್ದಲೆ ಕೂಟಗಳಲ್ಲೇ ಅಪೂರ್ವ ಎಂದು ಬಣ್ಣಿತವಾಯಿತು. ಆವರೆಗೆ ಶರಸೇತು ಬಂಧನದ ಅರ್ಜುನ ಪೆರ್ಲ ಪಂಡಿತರಿಗಷ್ಟೇ ಸೀಮಿತವಾಗಿದ್ದುದು ಈ ಘಟನೆಯ ಬಳಿಕ ಜೋಶಿಯವರಿಗೆ ದಕ್ಕಿತು.
ಇಂದಿಗೂ ಜೋಶಿಯವರ ಒಟ್ಟು ಅರ್ಥಗಾರಿಕೆಯಲ್ಲಿ ಅವರಿಗೆ ತುಂಬ ಹೆಸರು ತಂದುಕೊಟ್ಟದ್ದು 'ಶರಸೇತು ಬಂಧನ'ದ ಅರ್ಜುನ.

ಅದೃಷ್ಟ ಮತ್ತು ದುರಾದೃಷ್ಟ...

ಜೋಶಿಯವರ ಬದುಕಲ್ಲಿ ಅದೃಷ್ಟ ಮತ್ತು ತಪ್ಪಿದ ಅವಕಾಶಗಳ ಒಂದು ದೊಡ್ಡ ಸರಣಿಯೇ ಇದೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂಕಾಂ ವಿದ್ಯಾರ್ಥಿಯಾಗಿದ್ದಾಗ ಎಕ್ಸ್‌ಪೋ- ೭೦ ಎಂಬ ವಾಣಿಜ್ಯ ಮತ್ತು ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿ ಬಂತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಪಾನ್‌ನ ಟೋಕಿಯೋ ಮಹಾನಗರ ಸಂದರ್ಶಿಸುವ ಅವಕಾಶ. ಆ ಯೋಜನೆಯ ಸ್ವರೂಪದಂತೆ ಆಗಲೇ ವಿವಿಯಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಮತ್ತು ಸಾಂಸ್ಕೃತಿಕವಾಗಿಯೂ ಪಾಲ್ಗೊಳ್ಳುತ್ತಿದ್ದ ಜೋಶಿಯವರೂ ಆಯ್ಕೆಯಾಗಬೇಕಿತ್ತು. ಆದರೆ ಸ್ಪರ್ಧೆಗಳು ಹೆಚ್ಚಾಗಿ ವಿವಿ ಆಡಳಿತ ಮಂಡಳಿ ಯಾವ ಪಕ್ಷಪಾತವೂ ಬೇಡ ಎಂದು ವಿವಿಯ ೩೦ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ನಾಲ್ವರನ್ನು ಕಳಿಸಲು ನಿರ್ಧರಿಸಿತು. ದುರದೃಷ್ಟವೆಂದರೆ ಆ ಯೋಜನೆಯ ಗಂಧಗಾಳಿಯೂ ಇರದ ಗಣಿತ ವಿಷಯದ ವಿದ್ಯಾರ್ಥಿಗಳು ಅಂದು ಆಯ್ಕೆಯಾದರು!
ಇನ್ನೊಂದು ಸಾರಿ ವಿವಿ ಮಟ್ಟದ ಅತ್ಯುತ್ತಮ ವಿದ್ಯಾರ್ಥಿ ಸ್ಪರ್ಧೆ ನಡೆದು ಜೋಶಿ ಮತ್ತು ಇನ್ನೊಬ್ಬ ವಿದ್ಯಾರ್ಥಿನಿ ಆಯ್ಕೆಯಾಗುತ್ತಾರೆ ಎಂದೆಲ್ಲ ಪ್ರಚಾರವೂ ಆಯಿತು. ಆದರೆ ಆ ವರ್ಷ ಫಲಿತಾಂಶವೇ ಪ್ರಕಟಗೊಳ್ಳಲಿಲ್ಲ.
ಇನ್ನೊಂದು ಬಾರಿ ರೋಟರಿ ಪೌಂಡೇಶನ್‌ನ ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ ಎರಡು ಸಲವೂ ವಿದೇಶ ಪ್ರವಾಸದ ಅವಕಾಶ ವಿಚಿತ್ರ ರೀತಿಯಲ್ಲಿ ಕೈತಪ್ಪಿತು. ಮೊದಲ ಸಲ ಅಂತಿಮ ಸಂದರ್ಶನಕ್ಕೆಂದು ಜೋಶಿಯವರಿಗೆ ಕಳುಹಿಸಿದ್ದ ಪತ್ರ ವಿಳಾಸ ಸರಿಯಿಲ್ಲದೆ ಸಂದರ್ಶನ ನಡೆದ ಮಾರನೇ ದಿನ ಸಿಕ್ಕಿತ್ತು! ಇನ್ನೊಂದು ಸಾರಿ ಸಂದರ್ಶನಕ್ಕೆ ಹಾಜರಾಗಿದ್ದರೂ ಕೊನೆಯ ಹೆಸರಿದ್ದ ಕಾರಣ ರಾತ್ರಿ ೧೦ ಗಂಟೆಗೆ ಬೇಕಾಬಿಟ್ಟಿ ಸಂದರ್ಶನ ನಡೆದು ಜೋಶಿಯವರು ಆಯ್ಕೆಯಾಗಲೇ ಇಲ್ಲವಂತೆ.

ಜೋಶಿ ಮಂತ್ರಿಯಾಗಿರುತ್ತಿದ್ದರು...!

ಜೋಶಿಯವರು ಮನಸ್ಸು ಮಾಡಿರುತ್ತಿದ್ದರೆ ಇಂದು ಒಬ್ಬ ಪ್ರಬುದ್ಧ ಜನಪ್ರತಿನಿಧಿಯೂ ಆಗಿರುತ್ತಿದ್ದರು, ಸಚಿವರಾಗಿರುತ್ತಿದ್ದರು! ೧೯೭೦ರಲ್ಲಿ ಜೋಶಿಯವರ ಮಾತಿನ ವೈಖರಿ, ವಾದ ಸಾಮರ್ಥ್ಯ ಕಂಡ ಕಾರ್ಕಳದ ಉದ್ಯಮಿ ಸುರೇಂದ್ರ ಕಾಮತ್‌ರು, ಆ ಸಲಹೆ ಕೊಟ್ಟಿದ್ದರು.

ಡಾ.ಎಂ. ಪ್ರಭಾಕರ ಜೋಶಿ / ೩೩