ಪ್ರಹಾರ... ಇನ್ನು ಮುಂದೆ ಶಿವ ಲಿಂಗ ಮಾಡುವಾಗ ಒಂದು ಗೆರೆ ಮಾಡಬೇಕಂತೆ. ಅದರರ್ಥವೇನು? ಅರ್ಜುನ ಹೊಡೆದ ಪೆಟ್ಟು ಅಷ್ಟು ಗಟ್ಟಿ...
ಹೇಳಿ ಪ್ರಯೋಜನ ಇಲ್ಲ...
ಬಂದಿದ್ದನಲ್ಲ ಚಿತ್ರಸೇನ... ನಮ್ಮ ಪ್ರಭು ಶ್ರೀಮಾನ್ ಕೌರವನವರು ೨೭ ತಮ್ಮಂದಿರೊಂದಿಗೆ ದಿವಂಗತರಾಗ್ತಿದ್ರು... ನೀನು ಪ್ರಯತ್ನ ಮಾಡಿದಿ. ಪೆಟ್ಟು ತಿಂದು ಯಾರ ಸೆರಗಿನಲ್ಲಿ ಬದುಕಿದ್ದೆಯೋ? ವಿಕರ್ಣನ ರಥಕ್ಕೆ ಹಾರಿ ಓಡಿದವ ನೀನು... ಆ ಕಾಲಕ್ಕೆ ಚಿತ್ರಸೇನನಿಂದ ಕೌರವನನ್ನು ಬಿಡಿಸಿದವ ಅವ. ಈಗ ಹೇಳಿ... ಅಂಥ ಅರ್ಜುನನ್ನು ನಾನು ಸೋಲಿಸ್ತೇನೆ...
ಗೋಗ್ರಹಣದ ಯುದ್ಧದಲ್ಲಿ ಭೀಷ್ಮರು, ನೀನು, ದುರ್ಯೋಧನ, ದುಶ್ಯಾಸನ, ದ್ರೋಣರು, ಅಶ್ವತ್ಥಾಮರು, ಸಕಲ ಅತಿರಥ ಮಹಾರಥರು ಒಬ್ಬ ಅರ್ಜುನನ ಮೇಲೆ ಬಿದ್ದಿರಿ. ನಡುಗುತ್ತಿರುವ ಸಾರಥಿಯನ್ನು ಮೈಯ ಶಲ್ಯದಿಂದ ಕಟ್ಟಿ ಬಿಗಿದು... ಅಲ್ಲಾ... ರಥ ಓಡಿದ್ದು ಅವ ನಡುಗಿದ್ದರಿಂದಲೇ.. ಅವ ಸಾರಥ್ಯ ಮಾಡಲಿಲ್ಲ... ಲೋಕ ಉಂಟೋ ಅವನಿಗೆ...ಒಬ್ಬನೇ ಸಕಲರನ್ನು ಪರಾಭವಗೊಳಿಸಿದ್ದು... ನಿನ್ನ ಒಂದು ರಥವನ್ನೇ ಮೂರು ಸಲ ನಿನ್ನ ರಥದ ಮೂಕಿಗೆ ಹೊಡೆದಿದ್ದನಲ್ಲಾ? ಅವನನ್ನು ಹೊಡೀತೇನೆ ಅಂತ ಹೇಳ್ತೀಯಲ್ಲಾ ನಿನಗೆ ಸ್ವಯ ಉಂಟಾ ನಿನಗೆ?
ಅವರು ಇವರು ಅಂತ ಯಾಕೆ ಸುಮ್ಮನೆ ಹುಡುಕ್ತಿ? ಅವರಿವರೊಳು ನೀ ಪಲುಗಿರುವುದೇತಕೆ? ಒಂದೊಂದು ಯುದ್ಧದಲ್ಲಿ ಅವನು ಮಾಡಿದ ವೀರಗಾಥೆಯನ್ನು ಕೇಳಿದ್ರೆ....
ಸಮುದ್ರವನ್ನೇ ಮಸಿಯನ್ನಾಗಿ ಮಾಡಿ ಅರ್ಜುನನ ಬಾಣವನ್ನೇ ಲೇಖನಿಯನ್ನಾಗಿ ಮಾಡಿ ಭೂಮಿಯನ್ನೇ ಪಟವನ್ನಾಗಿ ಮಾಡಿ ಪ್ರಬಂಧ ಬರೆದ್ರೆ ಭೂಮಿ ಮುಗಿದೀತು, ಅವನ ಪ್ರಬಂಧ ಮುಗೀಲಿಕ್ಕಿಲ್ಲ...
ಭೀಷ್ಮರೊಂದಿಗೆ ಅವನ ಹೋರಾಟವೇನು? ದ್ರೋಣರನ್ನು ಎದುರಿಸಿದ್ದೇನು? ಈಗಾಗಲೇ ನಮ್ಮ ೧೧ ಅಕ್ಷೋಹಿಣಿ ಸೇನೆಯಲ್ಲಿ ಎಷ್ಟು ೩-೪ ಅಕ್ಷೋಹಿಣಿಯನ್ನು ಒಬ್ಬ ಅರ್ಜುನನೇ ಮುಗಿಸಿದ್ದಾನೆ ಅಂತ ಪ್ರತೀತಿ ಉಂಟು. ಬಿಡುವು, ತೊಡುವು, ಲಾಘವ, ಸೌಷ್ಠವ, ಪ್ರಯೋಗ, ಉಪಸಂಹಾರ, ಮಂತ್ರಾಸ್ತ್ರ, ನಾರಾಚ, ಶ್ರೀಮುಖ, ಬಾಣ, ದಶವಿಧ ಪ್ರಯೋಗ.. ಇವತ್ತು ದ್ರೋಣರು ಹೆದರ್ತಾರೆ. ಅವರೇನು ಹೇಳಿದ್ರು? ಅರ್ಜುನನೊಬ್ಬ ತಪ್ಪಿದಡೆ ಮಿಕ್ಕ ದೂರ್ಜಟಿ ಮೊದಲಾದ ಭಟರೆನಗಿದಿರೆ...? ದ್ರೋಣರಿಗೂ ಭಯವುಂಟು.. ದೇವತೆಗಳು ಹೆದರ್ತಾರೆ. ಅರ್ಜುನ ಧನುಷ್ಥೇಂಕಾರ ಮಾಡಿದ್ರೆ ಪಾತಾಳ ಲೋಕದಲ್ಲಿದ್ದ ರಾಕ್ಷಸ ಸ್ತ್ರೀಯರಿಗೆ ಗರ್ಭಪಾತವಾಗುತ್ತದೆ.. ಇಂದ್ರಾದಿಗಳು ಹರ್ಷಿಸುತ್ತಾರೆ.. ಹೆಚ್ಚೇನು ಆಶ್ರಿತನಾಗಿ ಬಂದಂಥ ಗಯನಿಗಾಗಿ ಕೃಷ್ಣನನ್ನೂ ಎದುರು ಹಾಕಿಕೊಳ್ಳುವುದಕ್ಕೂ ಧರ್ಮ ಬುದ್ದಿಯವ ಅರ್ಜುನ ಹೆದರಿದವನಲ್ಲ.
ಅವನು ನಿಜವಾಗಿ ಬವರಗಾರರ ದೇವ... ಕುರುಕುಲವೆಂಬ ಕಾಡಿಗೆ ಬೆಂಕಿಯದು. ಕುರುಕುಲವೆಂಬ ಜೀವಕ್ಕೆ ಅರ್ಜುನನ ಬಾಣ ವಿಷ. ಕುರುಕುಲವೆಂಬ ಕುರಿಗೆ ಅವನು ಸಿಂಹಪ್ರಾಯ... ಹೇ..'
ಡಾ.ಎಂ. ಪ್ರಭಾಕರ ಜೋಶಿ / ೪೪