ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಸಂಪಾದಕೀಯ

ಕಾಂತಾವರ ಕನ್ನಡ ಸಂಘದ ಮಹತ್ವದ ಯೋಜನೆ 'ನಾಡಿಗೆ ನಮಸ್ಕಾರ' ಶತಮಾನೋತ್ತರ ಕೃತಿ ಮಾಲೆಯ ಸಂಪಾದಕತ್ವವನ್ನು ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರು ನನಗೆ ವಹಿಸಿದ್ದಾರೆ. ಈಗಾಗಲೇ ನೂರ ಇಪ್ಪತ್ತೆರಡು ಕೃತಿಗಳನ್ನು ಈ ಮಾಲೆಯಲ್ಲಿ ತಂದಿರುವುದರಿಂದ ಇದರ ಸ್ವರೂಪಕ್ಕೆ ಒಂದು ಖಾಚಿತ್ಯ ಬಂದಿದೆ.

ಒಂದು ಪ್ರದೇಶದ ಬದುಕು ಸುಸಂಸ್ಕೃತವೆನಿಸಿಕೊಳ್ಳಬೇಕಾದರೆ ಅಲ್ಲಿನ ಪ್ರತಿಭಾವಂತ ಪ್ರಜೆಗಳು ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಒಳಿತಿಗಾಗಿ ದುಡಿಯಬೇಕಾಗುತ್ತದೆ. 'ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ'ಎಂಬಂತಹ ಪರಿಸ್ಥಿತಿ ಇದ್ದಾಗ ಇಂತಹ ಸಂಸ್ಕೃತಿ ಬೆಳೆಯಲಾರದು. ಗ್ರೀಕ್ ಚಿಂತಕ ಲಾಂಜೈನಸ್‌ನ ವಿಚಾರಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು:ರಾಜ ಪ್ರಭುತ್ವದಡಿ ಸ್ವಾತಂತ್ರ್ಯ ಇಲ್ಲದ ಕಾರಣ ಪ್ರತಿಭೆ ಮುರುಟಿ ಹೋಗುತ್ತದೆ.ಪ್ರಜಾಪ್ರಭುತ್ವದಲ್ಲಿ ಸೃಷ್ಟಿಕಾರ್ಯ ಪ್ರಗತಿಪಥದಲ್ಲಿ ಸಾಗುತ್ತದೆ ಎನ್ನುವ ಮಾತುಗಳನ್ನು ಒಪ್ಪದೆ ಅವನು ಜನರ ನೈತಿಕ ಅಧಃಪತನದಲ್ಲಿ ಪ್ರತಿಭೆಯ ಅವನತಿ ಮತ್ತು ದುರ್ಗತಿಗೆ ಕಾರಣವನ್ನು ಗುರುತಿಸುತ್ತಾನೆ. ಧನಲೋಭ, ಭ್ರಷ್ಟಾಚಾರ, ಸುಖಲೋಲುಪತೆ, ಸ್ವಾರ್ಥಗಳ ಪರಿಣಾಮವಾಗಿ ಹುಟ್ಟಿಕೊಳ್ಳುವ ನಿರ್ಲಜ್ಜ ಮನೋವೃತ್ತಿ, ಆದರ್ಶ ವಿಮುಖತೆ ಇವುಗಳಿಂದಾಗಿ ಆತ್ಮಶಕ್ತಿ ಕುಗ್ಗಿಸಿಕೊಂಡ ಒಂದು ಜನಾಂಗದಲ್ಲಿ ಸಂಸ್ಕೃತಿ ದೊಡ್ಡದಾಗಿ ಬೆಳೆಯಲಾರದು ಎನ್ನುವುದು ಅವನ ಅಭಿಪ್ರಾಯ. ನಮ್ಮ ನಾಡಿನಲ್ಲಿ ಹಾಗಾಗದ ಹಾಗೆ ಸದಾ ಎಚ್ಚರವಾಗಿರಬೇಕಾದುದು ಅಗತ್ಯ. ಜನರಲ್ಲಿ ಆದರ್ಶಗಳನ್ನು ಬಿತ್ತಬೇಕಾದುದೂ ಅಗತ್ಯ. ಇಂತಹ ಮಹತ್ಕಾರ್ಯಕ್ಕೆ ಕಾಂತಾವರ ಕನ್ನಡ ಸಂಘ ತನ್ನ ಕಿಂಚಿತ್ ಕಾಣಿಕೆ ಸಲ್ಲಿಸುತ್ತಲೇ ಬಂದಿದೆ. 'ನಾಡಿಗೆ ನಮಸ್ಕಾರ' ಪುಸ್ತಕ ಮಾಲೆ ಅಂತಹ ಒಂದು ಕಾಣಿಕೆ.

ನಮ್ಮ ದಕ್ಷಿಣಕನ್ನಡ (ಉಡುಪಿ ಮತ್ತು ಕಾಸರಗೋಡು ಸೇರಿದ ಅವಿಭಜಿತ ಜಿಲ್ಲೆ) ಧಾರ್ಮಿಕ, ನೈತಿಕ, ಸಾಹಿತ್ಯಕ, ಸಾಂಸ್ಕೃತಿಕ ಅಧಃಪತನವಾಗದಂತೆ ಸದಾ ಎಚ್ಚರಿಕೆಯಿಂದಿರುವ ಒಂದು ನಾಡು. ಇಲ್ಲಿನ ಬಹುಮುಖೀ ಸಂಸ್ಕೃತಿಯ ನಿರ್ಮಾಣಕ್ಕಾಗಿ ದುಡಿದು ಕೀರ್ತಿಶೇಷರಾಗಿರುವ ಮತ್ತು ಈಗಲೂ ನಮ್ಮ ನಡುವೆ ಇರುವ ವಿದ್ವಾಂಸರು, ಚಿಂತಕರು, ಸಾಹಿತಿಗಳು, ಯಕ್ಷಗಾನ ಸಾಹಿತಿಗಳು ಹಾಗೂ ಕಲಾವಿದರು, ವರ್ಣಚಿತ್ರ ಕಲಾವಿದರು, ಶಿಲ್ಪಿಗಳು, ದಾರುಶಿಲ್ಪಿಗಳು, ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಮಾಜಸೇವಕರು, ಶಿಕ್ಷಕರು, ಅಭಿವೃದ್ಧಿಯ ಹರಿಕಾರರು, ಕೃಷಿ ಋಷಿಗಳು, ವೈದ್ಯರು ಮುಂತಾದವರ ಸಾಧನೆಗಳನ್ನು ದಾಖಲಿಸುವುದು ಸಮಾಜದ ಕರ್ತವ್ಯ. ಮುಂದೆ ಅಧ್ಯಯನ ಕಾರ್ಯಗಳನ್ನು ಕೈಗೊಳ್ಳುವವರಿಗೆ ಒಂದು ಮಾಹಿತಿ ಕೋಶವಾಗಿಯೂ ಈ ಮಾಲೆಯ ಪುಸ್ತಕಗಳು ಒದಗಿಬರಲಿವೆ.

ಪ್ರಗಲ್ಬ ಚಿಂತಕ, ಅರ್ಥವಿಹಾರಿ ಡಾ.ಎಂ.ಪ್ರಭಾಕರ ಜೋಶಿ ಅವರ ಕುರಿತಾದ ಈ ಕೃತಿಯನ್ನು ಬರೆದುಕೊಟ್ಟು ಮಾಲೆಯ ಮಹತ್ವವನ್ನು ಹೆಚ್ಚಿಸಿದ ಲೇಖಕ ಚಂದ್ರಶೇಖರ ಮಂಡೆಕೋಲು ಅವರಿಗೆ ಸಂಘವು ಋಣಿಯಾಗಿದೆ.

೧ ನವೆಂಬರ್ ೨೦೧೫
ಡಾ. ಬಿ. ಜನಾರ್ದನ ಭಟ್