ಪುಟ:ಪ್ರಬಂಧಮಂಜರಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧಮಂಜರಿ.ಮೊದಲನೆಯ ಭಾಗ ಯಾದರೂ ವಾಕ್ಯರಚನೆಯನ್ನು ಚೆನ್ನಾಗಿ ಕಲಿಯಬೇಕಾದರೆ ಈ ವಿಧಿಗಳನ್ನು ಅನುಸರಿಸಬೇಕು: (1) ಆ ಭಾಷೆಯಲ್ಲಿರುವ ಉತ್ತಮವಾದ ವಚನಗ್ರಂಥಗಳನ್ನು ಸಾವ ಧಾನವಾಗಿ ಓದಬೇಕು (2) ಆ ಗ್ರಂಥಗಳ ವಿಷಯಗಳನ್ನು ಚೆನ್ನಾಗಿ ಮಂದಟ್ಟು ಮಾಡಿಕೊಳ್ಳಬೇಕು. (3) ನಮ್ಮ ಕಣ್ಣು ಮೊದಲಾದಿಂದ್ರಿಯಗಳಿಂದ ಪ್ರಪಂಚದಲ್ಲಿರುವ ವಸ್ತುಗಳ ಸಂಗತಿಗಳನ್ನು ಚೆನ್ನಾಗಿ ಪರೀಕ್ಷಿಸಿ ಗ್ರಹಿಸಿಕೊಳ್ಳುವುದು. (4) ನಮ್ಮ ಅಭಿಪ್ರಾಯಗಳನ್ನು ಅಡಿಗಡಿಗೆ ಬರೆಯುತ್ತಿರುವುದು. (5) ನಾವು ಬರೆದುದನ್ನು ತಿದ್ದಿ ಸರಿಮಾಡುವುದು. ಶೈಲಿ (Style) .ಪದಗಳನ್ನು ಆರಿಸಿಕೊಂಡು ವಾಕ್ಯಗಳಾಗಿ ತಕ್ಕಂತೆ ಜೋಡಿಸುವ ರೀತಿಗೆ ಶೈಲಿ ಅಥವಾ ಸರಣಿ ಎಂದು ಹೆಸರು. ನಡೆನುಡಿಗಳು ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುವಂತೆ, ಒಬ್ಬೊಬ್ಬರ ಭಾಷಾ ಶೈಲಿ ಒಂದೊಂದು ವಿಧವಾಗಿರುವುದು. ಒಂದು ಭಾಷೆಯ ಸರಣಿ ಮತ್ತೊಂದು ಭಾಷೆಯ ಸರಣಿಯಂತೆ ಇರುವುದಿಲ್ಲ. ಇಂಗ್ಲಿಷಿನಲ್ಲಿ ಬರೆವ ರೀತಿಯೇ ಬೇರೆ, ಕನ್ನಡದಲ್ಲಿ ಬರೆವ ಬಗೆಯೇ ಬೇರೆ. ಕಾಲ ಬದಲಾಯಿಸಿದ ಹಾಗೆಲ್ಲಾ ಭಾಷಾಶೈಲಿಯೂ ಬದಲಾಯಿಸುವುದು. ನೂರು ವರ್ಷಗಳ ಹಿಂದೆ ಕನ್ನಡದಲ್ಲಿ ಬರೆಯುತ್ತಿದ್ದ ಸರಣಿ ಈಗ ಇಲ್ಲ. ಪ್ರಚಾರದಲ್ಲಿರುವ ಎಲ್ಲಾ ಭಾಷೆಗಳಿಗೂ ಇದು ಸಲ್ಲುವುದು, ಒಂದೊಂದು ಕಾಲದಲ್ಲಿ ಒಂದೊಂದು ರೀತಿಯಿಂದ ನಡೆದುಕೊಳ್ಳುವಂತೆಯೂ, ಆಯಾ ಕಾಲಕ್ಕೆ ತಕ್ಕ ಬೇರೆ ಬೇರೆ ಉಡುಪನ್ನು ತೊಟ್ಟು ಕೊಳ್ಳುವಂತೆಯೂ ಸಂದರ್ಭಕ್ಕನುಸಾರವಾಗಿ ಸರಣಿಯನ್ನು ಬದಲಾಯಿಸಬೇಕು. ಯೋಗಕ್ಷೇಮಕ್ಕೆ ಕಾಗದ ಬರೆವುದು, ಉಪನ್ಯಾಸ ಮಾಡುವುದು, ಪ್ರಬಂಧವನ್ನು ಬರೆವುದು ಇವುಗಳಿಗೆ ಬೇರೆ ಬೇರೆ ಭಾಷಾ ಸರಣಿ ಬೇಕು. ವಚನಕಾವ್ಯವನ್ನು ಬರೆವ ಸರಣಿಯೇ ಬೇರೆ, ಪದ್ಯಕಾವ್ಯವನ್ನು ಬರೆವ ಶೈಲಿಯೇ ಬೇರೆ, ಆದರೂ ಎಲ್ಲಾ ಭಾಷೆಗಳಿಗೂ, ಎಲ್ಲಾ ಕಾಲಗಳಿಗೂ ಮತ್ತು ಎಲ್ಲಾ ಸಂದರ್ಭಗ