ಪುಟ:ಪ್ರಬಂಧಮಂಜರಿ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲಾಲಿತ್ಯ, (a) ಲಾಲಿತ್ಯವು ಶೈಲಿಗೆ ಉಂಟಾಗಬೇಕಾದರೆ ಕೂಡಿದ ಮಟ್ಟಿಗೂ ಅತಿದೀರ್ಘವಾದ ಸಂಸ್ಕೃತಪದಗಳನ್ನು ಪ್ರಯೋಗಿಸಬಾರದು, ಬಹುಕಾಲದಿಂದಲೂ ಅನೇಕ ಸಂಸ್ಕೃತ ಶಬ್ದ ಗಳು ಕನ್ನಡದಲ್ಲಿ ನೆಲೆಗೊಂಡಿವೆ. ಇವುಗಳನ್ನು ಯಾರೂ ತಳ್ಳಿ ಬಿಡಲಾರರು. ಒಂದು ಸಂಸ್ಕೃತ ಶಬ್ದ ವೂ ಇಲ್ಲದಂತೆ ವಾಕ್ಯಗಳನ್ನು ಬರೆವುದು ಅಸಾಧ್ಯ. ಕನ್ನಡದ ಸ್ಥಿತಿಯೇ ಸಂಸ್ಕೃತಕ್ಕೆ ಅಧೀನವಾಗಿದೆ. ಆದರೂ ಪೂರ್ವಕಾಲದಿಂದ ಕನ್ನಡದಲ್ಲಿಸೇರಿ ಕೊಂಡು, ಸಂಸ್ಕೃತವೆಂದು ಭಾವಿಸಲಾಗದಷ್ಟು ಧಾರಾಳವಾಗಿ ಬಳಕೆಯಲ್ಲಿರುವ ಶಬ್ದಗಳು ಹೊರತು, ದೀರ್ಘವಾಗಿಯೂ ಕಠಿನವಾಗಿಯೂ ಇರುವ ಸಂಸ್ಕೃತಶಬ್ದಗಳನ್ನು ಹೊಸದಾಗಿ ಸೇರಿಸಿಕೊಳ್ಳಲಾಗದು. ಅದರಿಂದ ಅರ್ಥವು ಬೇಗನೆ ಹೊಳೆಯಲಾರದು. ಆದರೆ ಹೊಸದಾಗಿ ಸಂಸ್ಕೃತಶಬ್ದ ವೊಂದನ್ನೂ ಯಾವಾಗಲೂ ಸೇರಿಸಿಕೊಳ್ಳಕೂಡದೆಂದಲ್ಲ. ಕೆಲವು ಸಂದರ್ಭಗಳಲ್ಲಿ ಹೊಸದಾಗಿ ಪದಗಳು ಬೇಕಾಗುವುವು. ಪ್ರಾಣಿಶಾಸ್ತ್ರ, ವಸ್ತುಶಾಸ್ತ್ರ, ವೇದಾಂತ ಮೊದಲಾದ ಶಾಸ್ತ್ರಗಳನ್ನು ಕನ್ನಡದಲ್ಲಿ ಬರೆಯಬೇಕಾದರೆ ಸಂಸ್ಕೃತ ಶಬ್ದಗಳಿಲ್ಲದೆ ಕೆಲಸ ನಡೆದೀತೆ? ಶಾಸ್ತ್ರಗಳ ಪಾರಿಭಾಷಿಕ ಶಬ್ದ ಗಳು (Technical Terms) ಸಂಸ್ಕೃತದಿಂದ ಬರಬೇಕಲ್ಲದೆ ಕನ್ನಡದಲ್ಲಿಯೇ ಸಿಕ್ಕುವುದಿಲ್ಲ. ಇಂಥ ಸಂದರ್ಭಗಳನ್ನು ಬಿಟ್ಟು, ಕಾಗದಗಳನ್ನು ಬರೆವಾಗಲೂ, ಸಾಮಾನ್ಯ ವಿಷಯಗಳನ್ನು ಕುರಿತು ಪ್ರಬಂಧವನ್ನು ಬರೆವಾಗಲೂ, ಉಪನ್ಯಾಸ ಮಾಡುವಾ ಗಲೂ ದೊಡ್ಡ ದೊಡ್ಡ ಸಂಸ್ಕೃತ ಶಬ್ದಗಳನ್ನು ಪ್ರಯೋಗಿಸಕೂಡದು. ಕೆಲವರು ಬಳಕೆಯಲ್ಲಿರುವ ಸುಲಭವಾದ ಮಾತುಗಳನ್ನು ಬಿಟ್ಟು, ಕಠಿನವಾದ ದೊಡ್ಡ ಸಂಸ್ಕೃತಶಬ್ದಗಳನ್ನು ಹುಡುಕಿ ಪ್ರಯೋಗಿಸುವುದರಿಂದ ತಮ್ಮ ಪಾಂಡಿತ್ಯವನ್ನು ತೋರಿಸಿಕೊಳ್ಳುವರು. ಹೀಗೆ ಇನ್ನು ಕೆಲವರು ಹೊಸಗನ್ನಡವನ್ನು ಬರೆಯುತ್ತಿರುವಾಗ ಸುಲಭವಾದ ಹೊಸಗನ್ನಡದ ಮಾತುಗಳನ್ನು ಬಿಟ್ಟು, ಹಳಗನ್ನಡದ ಮಾತುಗಳನ್ನೂ ಪ್ರತ್ಯಯಗಳನ್ನೂ ಡಂಭಕ್ಕಾಗಿಯೇ ಪ್ರಯೋಗಿಸುವುದುಂಟು. ಉದಾ ನೈರಾಶ್ಯದ ನಿದಾರುಣವಾದ ಯಾತನೆಯಿಂದ ಅವನು ಬಹಳ ವ್ಯಾಕುಲಿತನಾದನು, ”