ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ


ಎಸ್. ಎಂ. ಕೃಷ್ಣ

ಮುಖ್ಯಮಂತ್ರಿಗಳು


ಕನ್ನಡನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಹ್ಮಯ ನಮ್ಮ ಪರಂಪರೆಯ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಅನೇಕ ಜನ ವಿದ್ವಾಂಸರು, ಅನೇಕ ಸಂಸ್ಥೆಗಳು ಈ ಸಾಹಿತ್ಯವನ್ನು ಬೆಳಕಿಗೆ ತರಲು ಕಳೆದ ನೂರು ವರ್ಷಗಳಿಂದ ದುಡಿಯುತ್ತ ಬಂದುದು, ಇದರ ವ್ಯಾಪಕತೆಯ ದ್ಯೋತಕವಾಗಿದೆ. ಹೀಗೆ ಪ್ರಕಟವಾಗಿದ್ದ ಮತ್ತು ಅಪ್ರಕಟಿತ ಸ್ಥಿತಿಯಲ್ಲಿದ್ದ ಈ ಸಾಹಿತ್ಯದ ದ್ವಿತೀಯ ಆವೃತ್ತಿಯನ್ನು ವಚನ ಪರಿಭಾಷಾಕೋಶವೂ ಒಳಗೊಂಡಂತೆ ೧೫ ಸಂಪುಟಗಳ ಮೂಲಕ ಕರ್ನಾಟಕ ಸರ್ಕಾರ ಹೊರತರುತ್ತಿರುವುದು, ನಮ್ಮ ಸಾಹಿತ್ಯ ಪ್ರಕಟಣೆಯ ಇತಿಹಾಸದಲ್ಲಿ ಒಂದು ಗಣ್ಯ ಸಾಧನೆಯೆಂದೇ ಹೇಳಬೇಕು. ಈ ಪ್ರಜಾಸಾಹಿತ್ಯವನ್ನು ಪ್ರಜೆಗಳಿಗೆ ಮುಟ್ಟಿಸುವುದು ತನ್ನ ಕರ್ತವ್ಯವೆಂದು ಭಾವಿಸಿ, ಕರ್ನಾಟಕದ ಪ್ರಜಾಸರ್ಕಾರ ಈ ಕೆಲಸವನ್ನು ಪೂರೈಸಿದೆ.

ವಚನಸಾಹಿತ್ಯಕ್ಕೆ ನಮ್ಮ ನಾಡಿನಲ್ಲಿ ಸುಮಾರು ೮೦೦ ವರ್ಷಗಳ ಇತಿಹಾಸವಿದೆ. ಈವರೆಗೆ ಬಸವಯುಗದ ಬರವಣಿಗೆಯನ್ನು ಹೊರತರಲು ವಿದ್ವಾಂಸರು ಹೆಚ್ಚು ಗಮನ ಕೊಟ್ಟಿದ್ದರು. ಈ ಯೋಜನೆ ಅದನ್ನೂ ಒಳಗೊಂಡು, ಬಸವೋತ್ತರ ಯುಗದ ಮೇಲೆಯೂ ಒತ್ತುಕೊಟ್ಟುದು ವಿಶೇಷವೆನಿಸಿದೆ. ಇದರಿಂದಾಗಿ ಈ ಯೋಜನೆಗೆ “ಒಂದು ಸಾಹಿತ್ಯ ಪ್ರಕಾರದ ಪ್ರಕಟಣೆ” ಎಂಬ ಕೀರ್ತಿ ಸಲ್ಲುತ್ತದೆ.

ವಚನವೆಂಬುದು ಚಳುವಳಿ ಸಾಹಿತ್ಯಪ್ರಕಾರವಾಗಿದೆ. ಆತ್ಮಕಲ್ಯಾಣದೊಂದಿಗೆ ಸಮಾಜಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ ಸಾಹಿತ್ಯವಿದು. ರಾಜಸತ್ತೆ, ಪುರೋಹಿತಸತ್ತೆ, ಪುರುಷಸತ್ತೆಗಳೆಂಬ ಪ್ರತಿಗಾಮಿ ಸತ್ತೆಗಳ ವಿರುದ್ಧ, ಕರ್ನಾಟಕದ ಎಲ್ಲ ಸಮಾಜದ ಜನರು ನಡೆಸಿದ ಹೋರಾಟದ ಉಪನಿಷ್ಪತ್ತಿಯಾದ ಈ ಸಾಹಿತ್ಯದಲ್ಲಿ ಜೀವಪರಧನಿಗಳು ದಟ್ಟವಾಗಿ ಕೇಳಿಸುತ್ತವೆ. ಪ್ರಾಚೀನ ಕರ್ನಾಟಕದ ಬೌದ್ಧಿಕ ಶ್ರಮದ ವಿದ್ವತ್ ಜನತಾ ಸಾಹಿತ್ಯಕ್ಕಿಂತ ದೈಹಿಕ ಶ್ರಮದ ಜನತಾಸಾಹಿತ್ಯ ಹೇಗೆ ಭಿನ್ನವಾಗಿದೆಯೆಂಬುದನ್ನು ಕಾಣಬೇಕಾದರೆ ನಾವು ಈ ಸಾಹಿತ್ಯಕ್ಕೇ ಮೊರೆಹೊಗಬೇಕು.

“ವಿಪ್ರ ಮೊದಲು ಅಂತ್ಯಜ ಕಡೆಯಾಗಿ" ಸಮಾಜದ ಎಲ್ಲ ವರ್ಗದ ಸ್ತ್ರೀ-ಪುರುಷರ ಸಂಕೀರ್ಣ ಧ್ವನಿಗಳು ಇದರಲ್ಲಿ ತುಂಬ ಕಲಾತ್ಮಕವಾಗಿ