ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

'''ಬಿನ್ನಹ'''


'''ರಾಣಿ ಸತೀಶ್''' ಕನ್ನಡ ಮತ್ತು ಸಂಸ್ಕೃತಿ ಸಚಿವರು


ಸಾಹಿತ್ಯಕ್ಕೆ ಸಾಹಿತ್ಯ, ಶಾಸ್ತ್ರಕ್ಕೆ ಶಾಸ್ತ್ರವಾಗಿರುವ ವಚನವಾಹ್ಮಯ ನಮ್ಮ ಪರಂಪರೆಯ ಅಪೂರ್ವ ಸೃಷ್ಟಿಯಾಗಿದೆ; ಅತ್ಯಪೂರ್ವ ಆಸ್ತಿಯೆನಿಸಿದೆ. ಪಂಡಿತರ ಮಾರ್ಗಸಾಹಿತ್ಯಕ್ಕೆ ಪ್ರತಿಯಾಗಿ ಸಾಮಾನ್ಯರ ಈ ದೇಶೀ ಸಾಹಿತ್ಯ ಹೊರಹೊಮ್ಮಿದ್ದು ೧೨ನೆಯ ಶತಮಾನದಲ್ಲಿ ಕಲಚುರಿಗಳ ರಾಜಧಾನಿಯಾಗಿದ್ದ ಕಲ್ಯಾಣದಲ್ಲಿ ಬಸವಾದಿ ಶರಣರ ಚಳುವಳಿಯಲ್ಲಿ.

ಮೂಲತಃ ಭಾರತೀಯರದು ಆತ್ಮ ಪರಮಾತ್ಮನಾಗಬೇಕೆಂಬ ವ್ಯಕ್ತಿಕೇಂದ್ರಿತ ಸಿದ್ಧಾಂತ. ಶರಣರು ಇದನ್ನು ಸಮಾಜಕೇಂದ್ರಿತ ಸಿದ್ಧಾಂತಕ್ಕೆ ವಿಸ್ತರಿಸಿದರು. ಹೀಗಾಗಿ ವ್ಯಕ್ತಿ ಕಲ್ಯಾಣದ ಜೊತೆ ಸಮಾಜಕಲ್ಯಾಣವೂ ಈ ಚಳುವಳಿಯ ಮುಖ್ಯ ಲಕ್ಷಣವೆನಿಸಿತು. ಸಾಹಿತ್ಯ ಸಾಹಿತ್ಯಕ್ಕಾಗಿ ಅಲ್ಲ, ವ್ಯಕ್ತಿ ಪರಿವರ್ತನೆಗಾಗಿ, ಸಮಾಜ ಪರಿವರ್ತನೆಗಾಗಿಯೆಂಬ ಸಿದ್ಧಾಂತ ಇಲ್ಲಿ ಅರ್ಥ ಪಡೆಯಿತು.

೧೨ನೆಯ ಶತಮಾನದ ಹೊತ್ತಿಗೆ, ಶೂದ್ರಜೀವ ದೇವನಾಗಲಾರನೆಂಬ ಸಿದ್ಧಾಂತ ಸ್ಥಾಪಿತವಾಗಿದ್ದಿತು. ಸಮಾಜದಲ್ಲಿ ಪುರುಷ-ಸ್ತ್ರೀ, ಪ್ರಭು-ಪ್ರಜೆ, ಬ್ರಾಹ್ಮಣ-ಶೂದ್ರರಲ್ಲಿ ಸಮಾನತೆ ಸಾಧ್ಯವಿಲ್ಲವೆಂಬ ಭೇದಸಂಸ್ಕೃತಿಯೂ ನಿರ್ಮಾಣವಾಗಿದ್ದಿತು. ಈಗ, ಶೂದ್ರನಿಗೂ ದೇವರಾಗುವ ಅರ್ಹತೆಯಿದೆ; ಸ್ತ್ರೀಗೆ ಪುರುಷನಷ್ಟು - ಪ್ರಜೆಗೆ ಪ್ರಭುವಿನಷ್ಟು - ಶೂದ್ರನಿಗೆ ಬ್ರಾಹ್ಮಣನಷ್ಟು ಅಧಿಕಾರವಿದೆಯೆಂದು ಶರಣರು ವಾದಿಸಿದರು. ಇದರ ಫಲವಾಗಿ, ಹೊಸ ಸಮಾಜವೊಂದು ಸೃಷ್ಟಿಯಾಯಿತು. ಇದರಿಂದಾಗಿ ಎಲ್ಲರೂ ಸ್ವತಂತ್ರರು, ಎಲ್ಲರೂ ಸಮಾನರು, ಎಲ್ಲರೂ ಸಹೋದರರೆಂಬ ತತ್ವ ಅನುಷ್ಠಾನಕ್ಕೆ ಬಂದಿತು. ಇದರ ಮುಂದುವರಿಕೆಯೆಂಬಂತೆ ಎಲ್ಲರೂ ದುಡಿಯಬೇಕು ಎಂಬ ಕಾಯಕತತ್ವ, ಎಲ್ಲರೂ ಹಂಚಿಕೊಂಡು ಉಣ್ಣಬೇಕು ಎಂಬ ದಾಸೋಹತತ್ವಗಳು ಆಕಾರ ಪಡೆದವು.

ಹೊಸ ಸಮಾಜದ ಈ ಎಲ್ಲ ನೆಲೆಗಳನ್ನು ಗುರಿಯಿಟ್ಟು ಆಡಿದ ಶರಣರ ಮಾತು ವಚನವೆಂಬ ಸಾಹಿತ್ಯಪ್ರಕಾರವಾಗಿ ಮೂಡಿತು. ವರ್ಗಭೇದ, ವರ್ಣಭೇದ, ಲಿಂಗಭೇದವೆನ್ನದೆ ಎಲ್ಲ ಜನವರ್ಗದವರ ಸಾವಿರ ಸಾವಿರ ವಚನಗಳು ಈ ಕಾಲದಲ್ಲಿ ಸೃಷ್ಟಿಯಾದವು. ಆದರೆ ಒಮ್ಮೆಲೇ ತಲೆದೋರಿದ ಕಲ್ಯಾಣ ಕ್ರಾಂತಿಯಿಂದಾಗಿ ಈ ಸಾಹಿತ್ಯ ನಾಡಿನ ತುಂಬ ಹರಿದು ಹಂಚಿಹೋಯಿತು.

ಹೀಗೆ ಹಂಚಿಹೋಗಿದ್ದ ಈ ಸಾಹಿತ್ಯವನ್ನು ೧೫-೧೬ನೆಯ ಶತಮಾನಗಳಲ್ಲಿ