ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನಿರ್ದೇಶಕರ ಮಾತು


ಕೆ. ಸಿ. ರಾಮಮೂರ್ತಿ

ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ


ವಚನಸಾಹಿತ್ಯ, ಕರ್ನಾಟಕದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. ಪ್ರಾಚೀನ ಕರ್ನಾಟಕದ ಜನಸಾಮಾನ್ಯರ ಧ್ವನಿಯಾಗಿರುವ ಇದನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಜನತಂತ್ರ ಸರಕಾರದ ಮುಖ್ಯ ಕರ್ತವ್ಯವಾಗಿದೆ.

ಭಾರತದಲ್ಲಿ ಆತ್ಮೋದ್ಧಾರದ ಬಗ್ಗೆ ಉದಾತ್ತ ತತ್ವಗಳನ್ನು ಪ್ರತಿಪಾದಿಸುತ್ತ ಬಂದಿದ್ದರೂ ಸಮಾಜೋದ್ಧಾರದ ಬಗ್ಗೆ ಉಪೇಕ್ಷೆ ಬೆಳೆದು, ಅಲ್ಲಿ ಶೋಷಣೆ ವರ್ಧಿಸುತ್ತ ಬಂದುದು ನಮ್ಮ ಇತಿಹಾಸದ ಒಂದು ವಿಪರ್ಯಾಸವೇ ಸರಿ. ೧೨ನೆಯ ಶತಮಾನದಲ್ಲಿ ಉಲ್ಬಣಗೊಂಡಿದ್ದ ಈ ವಿಷಮ ಪರಿಸ್ಥಿತಿಯನ್ನು ನಾಶಗೊಳಿಸಿ, ಸಮಸ್ಥಿತಿಯನ್ನು ಸಮಾಜದಲ್ಲಿ ತರಲು ಹೋರಾಡಿದವರು, ಕಲ್ಯಾಣದ ಶರಣರು. ಈ ಕಾರ್ಯಕ್ಕಾಗಿ ಅವರು ಕೈಕೊಡ ಜನಪರ ಆಂದೋಲನ ನಮ್ಮ ದೇಶದ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಘಟನೆಯಾಗಿದೆ.

ಭಾರತದಲ್ಲಿ ರಾಜಸತ್ತೆಯ ಸ್ಥಾಪನೆಗಾಗಿ ರಾಜರು, ಮತಸತ್ತೆಯ ಸ್ಥಾಪನೆಗಾಗಿ ಧರ್ಮಗಳು ಪರಸ್ಪರ ಸಂಘರ್ಷಕ್ಕಿಳಿದುದು ಸರ್ವಶ್ರುತ, ಆದರೆ ಸಾಮಾಜಿಕ ನ್ಯಾಯದ ಸ್ಥಾಪನೆಗಾಗಿ ಈ ರಾಜಸತ್ತೆ, ಮತಸತ್ತೆಗಳ ವಿರುದ್ಧ ಸಮಾಜದ ವಿವಿಧ ಸ್ತರಗಳ ಜನತೆ, ಅದರಲ್ಲಿಯೂ ದೀನರು-ದಲಿತರು-ಮಹಿಳೆಯರು ಬೀದಿಗಿಳಿದು ನಡೆಸಿದ ಈ ಆಂದೋಲನ, ಇಪ್ಪತ್ತನೆಯ ಶತಮಾನವೂ ಆಶ್ಚರ್ಯಪಡುವ ಸಂಗತಿಯಾಗಿದೆ.

ಅಂದಿನ ಸನ್ನಿವೇಶಕ್ಕೆ ಅನುಗುಣವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಅಂಕುರಿಸಿದ ಈ ಆಂದೋಲನ, ಸಾಮಾಜಿಕ ಕ್ಷೇತ್ರವನ್ನೂ ಆವರಿಸಿದ ಕಾರಣ, ಇದನ್ನು 'ಸಮಾಜೋ ಧಾರ್ಮಿಕ' ಆಂದೋಲನವೆಂದು ಗುರುತಿಸಲಾಗುತ್ತದೆ. ಸಮಾಜವೆನ್ನುವುದು ಸಂಕೀರ್ಣ ವ್ಯವಸ್ಥೆ, ಅದರ ಎಲ್ಲ ಸ್ತರಗಳನ್ನೂ ಎಲ್ಲ ಮಗ್ಗಲುಗಳನ್ನೂ ಬದಲಿಸಲು ಮಾಡಿದ ಪ್ರಯತ್ನವಾಗಿರುವುದರಿಂದ ಇದು ಒಂದು “ಸಮಗ್ರ ಆಂದೋಲನವಾಗಿದೆ. ಈ ಆಂದೋಲನದ ನೇರ ಧ್ವನಿ, ವಚನಸಾಹಿತ್ಯ.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನಿಂದಾಗಿ ವ್ಯಕ್ತಿ ಸ್ವಾತಂತ್ರ್ಯ ಪಡೆದ ಜನವರ್ಗವು ವ್ಯಕ್ತಪಡಿಸಿದ ಅಭಿಪ್ರಾಯ ಸ್ವಾತಂತ್ರ್ಯದ ಫಲ, ಈ ಸಾಹಿತ್ಯ. ಹೀಗಾಗಿ ಇಲ್ಲಿ ಆತ್ಮವಿಮರ್ಶೆಯಷ್ಟೇ ವಿಪುಲವಾಗಿ ಸಮಾಜವಿಮರ್ಶೆಯನ್ನೂ ಕಾಣಬಹುದಾಗಿದೆ. ಅದರಲ್ಲಿಯೂ ವರ್ಣಭೇದ ನಿರಾಕರಣೆ, ವರ್ಗಭೇದ