ವಿಷಯಕ್ಕೆ ಹೋಗು

ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಂಪಾದಕೀಯ


ಡಾ. ಎಂ. ಎಂ. ಕಲಬುರ್ಗಿ

ಪ್ರಧಾನ ಸಂಪಾದಕರು


ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ, ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ. ಸಮಾಜದ ಎಲ್ಲ ವರ್ಗ, ಎಲ್ಲ ವರ್ಣಗಳ ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಗೊಂಡಿದ್ದ ವ್ಯಕ್ತಿಕಲ್ಯಾಣ ಮತ್ತು ಸಮಾಜಕಲ್ಯಾಣ ಚಳುವಳಿಯ ಸೃಷ್ಟಿಯೆನಿಸಿದ ಈ ವಚನಗಳು, ಜಾಗತಿಕ ಸಾಹಿತ್ಯದ ಮಹತ್ವಪೂರ್ಣ ಭಾಗವೆನಿಸಿವೆ.

'ವಚನ' ಶಬ್ದಕ್ಕೆ ಇಲ್ಲಿ ಗದ್ಯ ಸಾಹಿತ್ಯಪ್ರಕಾರವೆಂದು ಅರ್ಥವಲ್ಲ; ಪ್ರತಿಜ್ಞೆ ಆತ್ಮಸಾಕ್ಷಿಯ ಮಾತು ಎಂದು ಅರ್ಥ. ನಡೆ ಹೇಗೇ ಇರಲಿ, ನುಡಿ ಮಾತ್ರ ಕಲಾತ್ಮಕವಾಗಿದ್ದುದು 'ರಚನೆ'ಯಾದರೆ, ನಡೆದಂತೆ ನುಡಿದ ಆತ್ಮಸಾಕ್ಷಿಯ ವಾಣಿ 'ವಚನ'ವೆನಿಸುತ್ತದೆ.

ವಚನಗಳು ಆಚಾರ್ಯರ ಸಾಹಿತ್ಯವಲ್ಲ, ಅನುಭಾವಿಗಳ ಸಾಹಿತ್ಯ, ಆಚಾರರು ಜೀವಿಸಿರುವಾಗಲೇ ತಮ್ಮ ವಿಚಾರಗಳನ್ನು ಬರೆದು, ಅವುಗಳಿಗೆ ಸಂವಿಧಾನಾತ್ಮಕ ಮುದ್ರೆ ಒತ್ತುತ್ತಾರೆ. ಅನುಭಾವಿಗಳು ಮಾತ್ರ ತಮ್ಮ ಚಿಂತನೆಯನ್ನು ಹೃದಯದಿಂದ ಹೃದಯಕ್ಕೆ ಮುಟ್ಟುವಂತೆ ಬಿಡಿಮಾತುಗಳ ಮೂಲಕ ಹೇಳುತ್ತಾರೆ. ಬಿಡಿಮುತ್ತುಗಳಂತೆ ಸೂರೆಯಾದ ಅವುಗಳನ್ನು ಸಂಗ್ರಹಿಸುವ, ಸಂಕಲಿಸುವ, ಸಂಪಾದಿಸುವ ಕೆಲಸವನ್ನು ಉತ್ತರಕಾಲೀನ ಅನುಯಾಯಿಗಳು ಮಾಡುತ್ತಾರೆ. ಏಸುವಿನ ವಾಣಿಯಾದ ಬೈಬಲ್, ಮಹಮ್ಮದನ ಉಪದೇಶವಾದ ಕುರಾನ್, ಬುದ್ಧನ ಬೋಧೆಯಾದ ತ್ರಿಪಿಟಕ, ಶರಣರ ಸಂದೇಶವಾದ ವಚನಕೃತಿಗಳು ಈ ಬಗೆಯ ಉತ್ತರಕಾಲೀನ ಸಂಕಲನಗಳಾಗಿವೆ.

ಮೂಲತಃ ವಚನನಿಧಿ ಜನರಿಂದ, ಜನರಿಗಾಗಿ ಹುಟ್ಟಿ, ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯವಾಗಿದೆ. ಹೀಗಾಗಿ ಹನ್ನೆರಡರಿಂದ ಹದಿನೈದನೆಯ ಶತಮಾನಕ್ಕೆ ಬರುವಷ್ಟರಲ್ಲಿ ಅದಕ್ಕೆ ವಿಪುಲ ಭಿನ್ನಪಾಠಗಳು ಹುಟ್ಟಿಕೊಂಡವು. ಆಮೇಲೆ ಸಂಕಲನ-ಸಂಪಾದನ ಕಾರ್ಯದಿಂದಾಗಿ ಕೆಲವೊಮ್ಮೆ ಪ್ರಕ್ಷಿಪ್ತ ವಚನಗಳೂ ತಲೆಯೆತ್ತಿದವು. ಈ ಗೊಂದಲ ಕಾರಣವಾಗಿ ಕವಿಸಾಹಿತ್ಯಕ್ಕಿಂತ ವಚನಸಾಹಿತ್ಯದ ಸಂಪಾದನಕಾರ್ಯ ತುಂಬ ಜಟಿಲಸ್ವರೂಪ ದ್ದಾಗಿದೆ.

ಪ್ರಾಚೀನ ಕನ್ನಡ ಸಾಹಿತ್ಯದ ಪ್ರಕಟನಕಾರ್ಯವನ್ನು ಮೊದಲು ಕೈಗೆತ್ತಿಕೊಂಡವರು, ಕ್ರೈಸ್ತ ಪಾದ್ರಿಗಳು. ಜೈನ ಪುರಾಣ-ಕಾವ್ಯಗಳನ್ನು, ವೈದಿಕ ಪುರಾಣ-ಕೀರ್ತನೆಗಳನ್ನು, ವೀರಶೈವ ಶಾಸ್ತ್ರ-ಪುರಾಣಗಳನ್ನು ಪ್ರಕಟಿಸಿದ ಇವರು, ವಚನಸಾಹಿತ್ಯವನ್ನು ಮಾತ್ರ ತಪ್ಪಿಯೂ ಪ್ರಕಟಿಸಲಿಲ್ಲ. ದೇಶೀ ವಿದ್ವಾಂಸರೇ ಈ ಕೆಲಸವನ್ನು ಪ್ರಾರಂಭ ಮಾಡಬೇಕಾಯಿತು. ಈ