ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ದಿಸೆಯಲ್ಲಿ ಮೊದಲು ಪ್ರಕಟವಾದ ವಚನಕೃತಿ (೧೮೮೩) 'ಅಪ್ರಮಾಣ ಕೂಡಲ ಸಂಗಮದೇವಾ' ಮುದ್ರಿಕೆಯ ವಚನಗಳನ್ನೊಳಗೊಂಡ “ಶಿಖಾರತ್ನಪ್ರಕಾಶ, ಆಮೇಲೆ ಒಂದು ಮೈಲಿಗಲ್ಲಿನಂತೆ ಪ್ರಕಟವಾದ ವಚನಕೃತಿ, ಬಸವಣ್ಣನವರ ಷಟ್‌ಸ್ಥಲವಚನ ಸಂಪುಟ. ಅದು ಮೊದಲು ಬೆಳಕು ಕಂಡುದು ೧೮೮೯ರಲ್ಲಿ. ಅಲ್ಲಿಂದ ಸರಿಯಾಗಿ ಒಂದು ಶತಮಾನ ಕಳೆಯುವಷ್ಟರಲ್ಲಿ ಅಂದರೆ ೧೯೮೮ರಲ್ಲಿ ಈ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ' ಅಸ್ತಿತ್ವಕ್ಕೆ ಬಂದುದು ಒಂದು ಯೋಗಾಯೋಗವಾಗಿದೆ; ವಚನಸಾಹಿತ್ಯದ ಪ್ರಕಟನಚರಿತ್ರೆಯ ಶತಮಾನಸ್ಮರಣೆಯಾಗಿದೆ.

ಈ ನೂರು ವರ್ಷಗಳ ಕಾಲವ್ಯಾಪ್ತಿಯಲ್ಲಿ ವಚನಸಾಹಿತ್ಯ ಪ್ರಕಟಣೆಗಾಗಿ ಅನೇಕರು ದುಡಿದಿರುವರಾದರೂ ಯೋಜನಾಬದ್ಧ ವ್ಯಾಪಕ ಪ್ರಯತ್ನಗಳು, ವಿಜಾಪುರ, ಧಾರವಾಡ, ಗದಗಗಳಲ್ಲಿ ಹೀಗೆ ಜರುಗಿವೆ :

೧. ಶಿವಾನುಭವ ಗ್ರಂಥಮಾಲೆ, ವಿಜಾಪುರ ಡಾ. ಫ. ಗು. ಹಳಕಟ್ಟಿ

೨. ಕನ್ನಡ ಅಧ್ಯಯನ ಪೀಠ, ಕ. ವಿ. ಧಾರವಾಡ - ಡಾ. ಆರ್. ಸಿ. ಹಿರೇಮಠ

೩. ತೋಂಟದಾರ್ಯಮಠ, ಗದಗ ಡಾ. ಎಂ. ಎಂ. ಕಲಬುರ್ಗಿ

ವಚನಸಾಹಿತ್ಯದ ಪ್ರಕಟನ ಕಾರ್ಯ ಹೀಗೆ ವಿಜಾಪುರದಲ್ಲಿ ಪ್ರಾರಂಭವಾಗಿ, ಧಾರವಾಡದಲ್ಲಿ ಬೆಳೆದು, ಗದುಗಿನಲ್ಲಿ ಒಂದು ನಿಲುಗಡೆಗೆ ಬರುತ್ತಿದ್ದಂತೆಯೇ, ಈಗ ನಾಲ್ಕನೆಯ ಘಟ್ಟದಲ್ಲಿ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯ ಅಂಗವಾಗಿ, ೧೫ ಸಂಪುಟಗಳು ಕರ್ನಾಟಕ ಸರಕಾರದ ಮೂಲಕ ಪ್ರಕಟವಾಗುತ್ತಲಿವೆ. ಸುಮಾರು ೧೧೦ ಜನ ಪ್ರಕ್ಷಿಪ್ತ ವಚನಕಾರರನ್ನೂ ಪ್ರಕ್ಷಿಪ್ತವಾಗಿರಬಹುದಾದ ಅನೇಕ ವಚನಗಳನ್ನೂ ಕೈಬಿಟ್ಟು ಸಂಯೋಜಿಸಲಾದ ಈ ಹದಿನೈದು ಸಂಪುಟಗಳ ಒಟ್ಟು ಪುಟ ಸುಮಾರು ಹತ್ತು ಸಾವಿರ; ಒಟ್ಟು ವಚನ ಸಂಖ್ಯೆ ಸುಮಾರು ಇಪ್ಪತ್ತು ಸಾವಿರ. ವಚನಸಾಹಿತ್ಯವನ್ನು ಒಮ್ಮೆ ಸಮಗ್ರವಾಗಿ ಹೊರತಂದ ಪ್ರಥಮ ಮಹತ್ವಾಕಾಂಕ್ಷೆಯ ಯೋಜನೆಯಿದು. ಈ ಸಾಹಿತ್ಯದ ಗಡಿಗೆರೆಗಳನ್ನು, ಸಂಖ್ಯಾಬಾಹುಳ್ಯವನ್ನು ವ್ಯವಸ್ಥೆಗೊಳಿಸಿ ಕೊಟ್ಟು, ವಿದ್ವಾಂಸರ ಅಧ್ಯಯನದ ಮುಂದುವರಿಕೆಗೆ ಒಂದು ನಿರ್ದಿಷ್ಟ ಚೌಕಟ್ಟನ್ನು ಒದಗಿಸಿದ ಹಿರಿಮೆ ಈ ಯೋಜನೆಗೆ ಸಲ್ಲುತ್ತದೆ.

ಈ ಯೋಜನೆಯ ಅಂಗವಾಗಿ ಬಸವಣ್ಣನವರ ವಚನ, ಪ್ರಭುದೇವರ ವಚನ, ಚೆನ್ನಬಸವಣ್ಣನವರ ವಚನ, ಸಿದ್ಧರಾಮೇಶ್ವರ ವಚನ, ಶಿವಶರಣೆಯರ ವಚನ - ಹೀಗೆ ಐದು ಸಂಪುಟಗಳು, ಬಸವ ಸಮಕಾಲೀನ ಮಿಕ್ಕ ಶರಣರ ವಚನಗಳ ನಾಲ್ಕು ಸಂಪುಟಗಳು,

೧. ಮೊದಲು ಪ್ರಕಟವಾದ ವಚನಕೃತಿ ಅಖಂಡೇಶ್ವರ ವಚನ (೧೮೮೨)ಎಂದು ಡಾ. ಬಿ. ನಂಜುಂಡ ಸ್ವಾಮಿ ಅವರ ಅಭಿಪ್ರಾಯ. (ಬಸವಪಥ ೧೬.೬)

೨. ಬಸವಣ್ಣನವರ ಷಟ್ಟಲದ ವಚನಗಳು ಪ್ರಥಮ ಸಲ ಬೆಳಕುಕಂಡುದು ೧೮೮೬ರಲ್ಲಿಯೆಂದು ಡಾ. ಬಿ. ನಂಜುಂಡಸ್ವಾಮಿ ಹೇಳುತ್ತಾರೆ. (ಬಸವಪಥ ೧೫-೫ ಪು. ೪೫)