ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಇವು ಜನಪ್ರಿಯ ಆವೃತ್ತಿಗಳಾಗಿರುವುದರಿಂದ ಲಭ್ಯವಿರುವ ಪಾಠಾಂತರಗಳಲ್ಲಿ ಯೋಗ್ಯವಾದುದನ್ನು ಸ್ವೀಕರಿಸಿ, ಅನ್ಯಪಾಠಗಳನ್ನು ಅಡಿಯಲ್ಲಿ ನಮೂದಿಸದೆ ಕೈಬಿಟ್ಟಿದ್ದೇವೆ. ಜನಸಾಮಾನ್ಯರ ಅನುಕೂಲತೆಗಾಗಿ ಶಕಟರೇಫೆಗೆ ಬದಲು ರೇಫೆ ಇಟ್ಟುಕೊಂಡಿದ್ದೇವೆ. ಅಭ್ಯಾಸಿಗಳ ಉಪಯೋಗ ದೃಷ್ಟಿಯಿಂದ ಕಠಿಣ ಪದಕೋಶ, ಅಕಾರಾದಿ, ಆಕರಸೂಚಿಗಳನ್ನು ಅನುಬಂಧದಲ್ಲಿ ಕೊಟ್ಟಿದ್ದೇವೆ. ಹೆಚ್ಚಿನದಾಗಿ ಪಾರಿಭಾಷಿಕ ಪದಗಳ ಒಂದು ಸ್ವತಂತ್ರ ಕೋಶವನ್ನೇ ಪ್ರಕಟಿಸಿದ್ದೇವೆ. ಒಟ್ಟಿನಲ್ಲಿ, ಇವು ಜನಪ್ರಿಯ ಆವೃತ್ತಿಗಳಾದರೂ ವಿದ್ವಜ್ಜನಪ್ರಿಯ ಆವೃತ್ತಿಗಳೂ ಆಗಬೇಕೆಂಬ ಆದರ್ಶದಲ್ಲಿ ಈ ಸಂಪುಟಗಳನ್ನು ರೂಪಿಸಲು ಪ್ರಯತ್ನಿಸಿದ್ದೇವೆ.

ಕೃತಜ್ಞತೆ

ವಿಶ್ವವಿದ್ಯಾಲಯದಂಥ ಶಿಕ್ಷಣ ಸಂಸ್ಥೆಗಳು, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಂಥ ಸಾರ್ವಜನಿಕ ಸಂಸ್ಥೆಗಳು, ವೀರಶೈವ ಮಠಗಳಂಥ ಧಾರ್ಮಿಕ ಸಂಸ್ಥೆಗಳು, ಡಾ. ಫ. ಗು. ಹಳಕಟ್ಟಿಯವರಂಥ ವಿದ್ವಾಂಸ ವ್ಯಕ್ತಿಗಳು ನಿರಂತರ ದುಡಿದರೂ ವಚನಸಾಹಿತ್ಯ ಪೂರ್ಣಪ್ರಮಾಣದಲ್ಲಿ ಪ್ರಕಟವಾಗಲು ಒಂದುನೂರು ವರ್ಷ ಹಿಡಿದುದು ಅದರ ಗಾತ್ರಬಾಹುಳ್ಯಕ್ಕೆ ಸಾಕ್ಷಿಯಾಗಿದೆ. ನೂರುವರ್ಷ ದುಡಿದು, ಸಾಮಗ್ರಿಯನ್ನು ಪ್ರಕಟಿಸಿದ ಈ ಎಲ್ಲ ವ್ಯಕ್ತಿ-ಸಂಸ್ಥೆಗಳಿಗೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು ಸಲ್ಲುತ್ತವೆ.
ಈ ಯೋಜನೆಯ ಕಾರ್ಯಾಲಯ ಅಸ್ತಿತ್ವಕ್ಕೆ ಬಂದು ಕೆಲಸ ಪ್ರಾರಂಭವಾದದ್ದು ಅಕ್ಟೋಬರ್ ೧೫, ೧೯೮೮ರಂದು, ಹಸ್ತಪ್ರತಿಗಳು ಅಚ್ಚಿಗೆ ಹೋದದ್ದು ೧೬ ಮಾರ್ಚ್ ೧೯೯೦ರಂದು. ಹೀಗೆ ಮೊದಲೇ ಯೋಜಿಸಿದಂತೆ ಎರಡು ವರ್ಷಗಳ ನಿರ್ದಿಷ್ಟ ಅವಧಿಯಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಪ್ರತಿಯೊಂದು ಹಂತದಲ್ಲಿಯೂ ಈ ಯೋಜನೆ ಸಕ್ರಮವಾಗಿ ಮುನ್ನಡೆಯುವುದಕ್ಕಾಗಿ 'ಸಂಪಾದಕ ಮಂಡಳಿ'ಯ ಸದಸ್ಯರಾದ ಡಾ. ಎಂ. ಚಿದಾನಂದಮೂರ್ತಿ, ಡಾ. ಸಿ. ಪಿ. ಕೃಷ್ಣಕುಮಾರ, ಡಾ. ಎಸ್. ವಿದ್ಯಾಶಂಕರ, ಶ್ರೀ ಎಸ್. ಶಿವಣ್ಣ ಅವರು ಉದ್ದಕ್ಕೂ ಬೆಲೆಯುಳ್ಳ ಸಲಹೆ-ಮಾರ್ಗದರ್ಶನ ನೀಡಿದ್ದಾರೆ. ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು ಆರಂಭದ ಕೆಲವು ತಿಂಗಳು ಸಂಪಾದಕ ಮಂಡಳಿಯ ಸದಸ್ಯರಾಗಿ, ವಿಶ್ವಾಸದಿಂದ ನೆರವಾಗಿದ್ದಾರೆ. ಸಂಪಾದಕ ಮಿತ್ರರಾದ ಡಾ. ಬಿ. ವಿ. ಮಲ್ಲಾಪುರ, ಡಾ. ಎಸ್. ವಿದ್ಯಾಶಂಕರ, ಡಾ. ವಿ. ಬಿ. ರಾಜೂರ, ಡಾ. ಬಿ. ಆರ್. ಹಿರೇಮಠ, ಶ್ರೀ ಎಸ್. ಶಿವಣ್ಣ ತುಂಬ ಶ್ರಮ-ಶ್ರದ್ಧೆಗಳಿಂದ ಸಂಪಾದನ ಕೆಲಸ ಪೂರೈಸಿದ್ದಾರೆ. ಸಹಾಯಕ ಸಂಶೋಧಕರಾದ ಶ್ರೀಮತಿ ವಿಜಯಶ್ರೀ ಹಿರೇಮಠ, ಶ್ರೀ ಶ್ರೀ ವಾಯ್. ಎಂ. ಯಾಕೊಳ್ಳಿ, ಶ್ರೀ ಬಿ. ವಿ. ಕೋರಿ ಅವರು ದಣಿವನ್ನು ಲೆಕ್ಕಿಸದೆ ದುಡಿದಿದ್ದಾರೆ.ಇವರೆಲ್ಲರಿಗೆ ನಾವು ಕೃತಜ್ಞರಾಗಿದ್ದೇವೆ.
ಈ ಯೋಜನೆಯನ್ನು ಅನುದಾನ ಮಾಡಿದ ಕರ್ನಾಟಕ ಸರಕಾರದ ಔದಾರ್ಯಕ್ಕೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ. ಈ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ರಾಮಕೃಷ್ಣ ಹೆಗಡೆ, ಶ್ರೀ ಎಸ್. ಆರ್. ಬೊಮ್ಮಾಯಿ, ಶ್ರೀ ವೀರೇಂದ್ರ ಪಾಟೀಲ, ಶ್ರೀ ಎಸ್. ಬಂಗಾರಪ್ಪ ಅವರಿಗೂ, ಸಾಹಿತಿಗಳೂ ಸಾಹಿತ್ಯ-ಸಂಸ್ಕೃತಿಗಳ ಗಾಢ ಆಸಕ್ತರೂ