ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ


ಆಗಿರುವ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಂ. ವೀರಪ್ಪ ಮೊಯಿಲಿ ಅವರಿಗೂ ಋಣಿಯಾಗಿದ್ದೇವೆ.
ಈ ಯೋಜನೆ ಅಸ್ತಿತ್ವಕ್ಕೆ ಬರುವಲ್ಲಿ ವಿಶೇಷ ಆಸಕ್ತಿ ವಹಿಸಿದವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವರಾಗಿದ್ದ ಶ್ರೀ ಎಂ. ಪಿ. ಪ್ರಕಾಶ ಅವರು. ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಅನನ್ಯ ಪ್ರೀತಿ-ಗೌರವ ಬೆಳೆಸಿಕೊಂಡಿರುವ ಶ್ರೀಯುತರಿಗೆ ನಾವು ಕೃತಜ್ಞರಾಗಿದ್ದೇವೆ. ಆಮೇಲೆ ಈ ಇಲಾಖೆಗೆ ಸಚಿವರಾಗಿ ಬಂದ ಶ್ರೀ ಎಂ. ವೀರಪ್ಪ ಮೊಯಿಲಿ, ಶ್ರೀ ಕೆ. ಎಚ್. ರಂಗನಾಥ, ಶ್ರೀ ಎಸ್. ರಮೇಶ್, ಇಂದಿನ ಸಚಿವರಾದ ಮಾನ್ಯ ಶ್ರೀ ಎಚ್. ವಿಶ್ವನಾಥ್ ಅವರಿಗೆ ನಮ್ಮ ಗೌರವಗಳು ಸಲ್ಲುತ್ತವೆ.
ಈ ಪ್ರಸಂಗದಲ್ಲಿ ಆತ್ಮೀಯ ಆಡಳಿತ ನಿರ್ದೇಶನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಅಂದಿನ ನಿರ್ದೇಶಕರಾಗಿದ್ದ ಶ್ರೀ ಐ. ಎಂ. ವಿಠಲಮೂರ್ತಿ, ಶ್ರೀ ಬಿ. ಪಾರ್ಥಸಾರಥಿ, ಕಮಿಷನರ್ ಡಾ. ಪಿ. ಎಸ್. ರಾಮಾನುಜಂ, ಇಂದಿನ ಕಮಿಷನರ್‌ರಾದ ಶ್ರೀ ಪಿ. ಎಸ್. ವಿ. ರಾವ್ ಅವರನ್ನೂ ಅಧಿಕ ನಿರ್ದೇಶಕರಾದ ಶ್ರೀ ಕೆ. ದೇವರಸಯ್ಯ, ಉಪನಿರ್ದೇಶಕರಾದ ಶ್ರೀ ಕಾ. ತ. ಚಿಕ್ಕಣ್ಣ ಅವರನ್ನೂ ನೆನೆಯುವುದು ಪ್ರೀತಿಯ ವಿಷಯವಾಗಿದೆ.
ಇಂಥ ಒಂದು ಬೃಹತ್ ಯೋಜನೆಗೆ ಕಾರ್ಯಾಲಯವೊಂದು ಅತ್ಯವಶ್ಯ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಈ ಅವಕಾಶ ಕಲ್ಪಿಸಿಕೊಟ್ಟ ಕರ್ನಾಟಕ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಡಾ. ಜಿ. ಕೆ. ನಾರಾಯಣರೆಡ್ಡಿ, ಇಂದಿನ ಕುಲಪತಿ ಡಾ. ಎಸ್. ರಾಮೇಗೌಡ ಅವರ ಔದಾರ್ಯವನ್ನು, ಪೀಠದ ಮುಖ್ಯಸ್ಥರ ಸಹಕಾರವನ್ನು ಕೃತಜ್ಞತೆಯಿಂದ ನೆನೆಯುತ್ತೇವೆ.
ಇದು ಒಂದು ದೊಡ್ಡ ಯೋಜನೆ. ಇದರ ಸಂಪಾದನೆಯ ಸಮಸ್ಯೆಗಳೂ ದೊಡ್ಡವು. ಪಾಠಾಂತರ, ರೂಪಾಂತರ, ಪ್ರಕ್ಷಿಪ್ತತೆ ಇತ್ಯಾದಿಗಳ ದಾಳಿಗೆ ಗುರಿಯಾಗುತ್ತ ಬಂದ ವ್ಯಾಪಕ ಪ್ರಮಾಣದ ಈ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸುವುದು, ಪುನರುಕ್ತಿಗಳನ್ನು ಗುರುತಿಸುವುದು, ಮುದ್ರಿಕೆ ಪಲ್ಲಟಗಳನ್ನು ಸರಿಪಡಿಸುವುದು, ಪ್ರಕ್ಷಿಪ್ತಗಳನ್ನು ದೂರೀಕರಿಸುವುದು, ಕೊನೆಯದಾಗಿ ವಚನಗಳನ್ನು ಶುದ್ದೀಕರಿಸುವುದು - ಎಂಥವರನ್ನೂ ಧೈಯ್ಯಗೆಡಿಸುವ ಕೆಲಸ. ಹೀಗಿದ್ದೂ ವಚನಸಾಹಿತ್ಯದ ಮೇಲಿನ ಗೌರವ, ಕೆಲಸದ ಮೇಲಿನ ಪ್ರೀತಿಗಳು ನಮ್ಮಿಂದ ಈ ಕಾರ ಮಾಡಿಸಿವೆ. ನಮ್ಮ ಶಕ್ತಿಗೆ ಮೀರಿ ಉಳಿದಿರಬಹುದಾದ ದೋಷಗಳನ್ನು ಮನ್ನಿಸಬೇಕೆಂದು ಕೋರುತ್ತ, ಎರಡು ವರ್ಷ ರಾತ್ರಿಯನ್ನೂ ಹಗಲುಮಾಡಿ ದುಡಿದು ರೂಪಿಸಿದ ಈ ಹದಿನೈದು ಸಂಪುಟಗಳನ್ನು ಸಹೃದಯಲೋಕಕ್ಕೆ ಅರ್ಪಿಸುತ್ತೇವೆ. 'ಶಿವಶರಣರ ಸಮಗ್ರ ವಚನಸಾಹಿತ್ಯ' ಸುಲಭ ಬೆಲೆಯಲ್ಲಿ ಕನ್ನಡಿಗರ ಮನೆ-ಮನಗಳನ್ನು ಬೆಳಗಲೆಂದು ಹಾರೈಸುತ್ತೇವೆ.