ವಿಷಯಕ್ಕೆ ಹೋಗು

ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ


ದ್ವಿತೀಯ ಆವೃತ್ತಿ

ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಸಂಪುಟಗಳು ೧೯೯೩ರಲ್ಲಿ ಪ್ರಕಟವಾಗಿ, ಒಂದು ವರ್ಷ ಕಳೆಯುವಷ್ಟರಲ್ಲಿ ಮಾರಾಟವಾದವು. ಕರ್ನಾಟಕ ಸರಕಾರದ ಗ್ರಂಥಪ್ರಕಟನೆಯ ಇತಿಹಾಸದಲ್ಲಿಯೇ ಈ ಬಗೆಯ ಮಾರಾಟ ಒಂದು ದಾಖಲೆ. ಜನತೆಯ ಅಪಾರ ಬೇಡಿಕೆಯನ್ನು ಗಮನಿಸಿ, ಈಗ ಪರಿಷ್ಕೃತ ದ್ವಿತೀಯ ಆವೃತ್ತಿಯನ್ನು ಪ್ರಕಟಿಸುತ್ತಿದ್ದೇವೆ. ಇತ್ತೀಚೆಗೆ ಲಭ್ಯವಾದ ಸುಮಾರು ಒಂದು ಸಾವಿರ ಹೊಸವಚನಗಳನ್ನು ಸೇರಿಸುವ, ಮೊದಲ ಆವೃತ್ತಿಯ ವಚನಪಾಠವನ್ನು ಮತ್ತೆ ಪರಿಷ್ಕರಿಸುವ ಮೂಲಕ ಮೊದಲಿನ ೧೪ ಸಂಪುಟಗಳನ್ನು ಸಮಗ್ರವಾಗಿ ಮತ್ತೆ ರೂಪಿಸಿದ್ದೇವೆ. ೧೫ನೆಯ ಸಂಪುಟ (ಪರಿಭಾಷಾಕೋಶ) ವನ್ನು ಹೊಸದಾಗಿ ಸಿದ್ಧಪಡಿಸಿದ್ದೇವೆ. ಹೊಸ ವಿಚಾರ, ಶೋಧಗಳ ಬೆಳಕಿನಲ್ಲಿ ಸಂಪಾದಕೀಯ, ಪ್ರಸ್ತಾಪವನೆಗಳನ್ನು ಸೂಕ್ತ ರೀತಿಯಲ್ಲಿ ಪರಿಷ್ಕರಿಸಿದ್ದೇವೆ.

ಈ ಆವೃತ್ತಿ ಬೆಳಕು ಕಾಣಲು ವಿಶೇಷ ಆಸಕ್ತಿ ವಹಿಸಿದ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಸ್. ಎಂ. ಕೃಷ್ಣ ಅವರಿಗೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಅವರಿಗೂ ನಾವು ಋಣಿಯಾಗಿದ್ದೇವೆ. ಈ ಕೆಲಸ ನಿರ್ದಿಷ್ಟ ಕಾಲಾವಧಿಯಲ್ಲಿ ಪೂರ್ಣಗೊಳ್ಳುವಂತೆ ನೋಡಿಕೊಂಡ ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಕೆ. ಸಿ. ರಾಮಮೂರ್ತಿ ಅವರಿಗೂ ಅವರ ಸಿಬ್ಬಂದಿ ವರ್ಗಕ್ಕೂ, ಮಾರ್ಗದರ್ಶನ ಮಾಡಿ ಸಂಪುಟಗಳ ಉತ್ತಮಿಕೆ ಕಾರಣರಾದ ಸಂಪಾದಕ ಮಂಡಲದ ಸದಸ್ಯರಿಗೂ, ಸಂಸ್ಕೃತ ಶ್ಲೋಕಗಳನ್ನು ಪರಿಷ್ಕರಿಸಿಕೊಟ್ಟ ಮೈಸೂರಿನ ಪೂಜ್ಯ ಶ್ರೀ ಇಮ್ಮಡಿ ಶಿವಬಸವಸ್ವಾಮಿಗಳು ಕುಂದೂರುಮಠ ಅವರಿಗೂ, ೧೫ನೆಯ ಪರಿಭಾಷಾ ಸಂಪುಟವನ್ನು ಹೊಸದಾಗಿ ರೂಪಿಸಿಕೊಟ್ಟ ಡಾ. ಎನ್. ಜಿ. ಮಹಾದೇವಪ್ಪ ಅವರಿಗೂ ನಮ್ಮ ವಂದನೆಗಳು ಸಲ್ಲುತ್ತವೆ. ಹತ್ತು ಸಾವಿರ ಪುಟಗಳ, ಹದಿನೈದು ಸಂಪುಟಗಳ ಪ್ರಕಟನೆ ಸುಲಭದ ಕೆಲಸವೇನಲ್ಲ. ಸಾಹಿತ್ಯದ ಮೇಲಿನ, ಅದರಲ್ಲಿಯೂ ವಚನಸಾಹಿತ್ಯದ ಮೇಲಿನ ಪ್ರೀತಿ ಕಾರಣವಾಗಿ ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟಿಸಿದ ಅಧ್ಯಕ್ಷರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ನಾವು ಋಣಿಯಾಗಿದ್ದೇವೆ.

ಮೊದಲ ಆವೃತ್ತಿಯಲ್ಲಿ ಉಳಿದುಕೊಂಡಿದ್ದ ಕೊರತೆ, ದೋಷಗಳನ್ನು ಕಷ್ಟಪಟ್ಟು ಹುಡುಕಿ, ನಮಗೆ ಪೂರೈಸಿದ ತುಮಕೂರಿನ ಶ್ರೀ ಎಂ. ಚಂದ್ರಪ್ಪ ಅವರಿಗೂ, ಬೆಂಗಳೂರಿನ ಶ್ರೀ ಎಸ್. ಶಿವಣ್ಣ ಅವರಿಗೂ ನಾವು ಕೃತಜ್ಞರಾಗಿದ್ದೇವೆ.