ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
*
ಪ್ರಸ್ತಾವನೆ

ಕನ್ನಡ ನೆಲದ ಮೇಲೆ ಪ್ರಥಮ ಸಮಾಜೋಧಾರ್ಮಿಕ ಆಂದೋಲನವೊಂದು ಹನ್ನೆರಡನೆಯ ಶತಮಾನದಲ್ಲಿ ಜರುಗಿತು. ಈ ಆಂದೋಲನದ ನಾಯಕವ್ಯಕ್ತಿ ಬಸವಣ್ಣ.
ಬಸವಣ್ಣ ಬಾಳಿದ್ದು ಕನ್ನಡ ನಾಡಿನಲ್ಲಿ. ಬರೆದದ್ದು ಕನ್ನಡ ಭಾಷೆಯಲ್ಲಿ. ಈ ಪರಿಮಿತಿ ಕಾರಣವಾಗಿ ಇವನಿಗೆ ನ್ಯಾಯವಾಗಿ ಸಿಗಬೇಕಾದ ಜಾಗತಿಕ ಪ್ರಸಿದ್ದಿ ಇನ್ನೂ ಸಿಕ್ಕಿಲ್ಲವಾದರೂ, ಇವನಷ್ಟು ಸಾಹಿತ್ಯ, ಕನ್ನಡದಲ್ಲಿ ಯಾರನ್ನೂ ಕುರಿತು ಹುಟ್ಟಿಲ್ಲ: ಇವನಷ್ಟು ಪ್ರಭಾವವನ್ನು ಕರ್ನಾಟಕದ ಮೇಲೆ ಯಾವ ಧಾರ್ಮಿಕ ಮಹಾಪುರುಷನೂ ಬೀರಿಲ್ಲ.
ಜಾಗತಿಕ ಸಂಸ್ಕೃತಿಗೆ ಘನತೆಯನ್ನು ತಂದುಕೊಡುವವರೆಂದರೆ ತಮ್ಮ ವ್ಯಕ್ತಿತ್ವವನ್ನು ಉದಾತ್ತೀಕರಿಸಿಕೊಂಡ ಮಹಾಪುರುಷರು: ಮತ್ತು ತಮ್ಮ ಪರಿಸರವನ್ನು ಉದಾತ್ತೀಕರಿಸುವ ಯುಗಪುರುಷರು. ಈ ಎರಡನ್ನೂ ಸಾಧಿಸುವ ಮೂಲಕ ಬಸವಣ್ಣ ಕೇವಲ ಮಹಾಪುರುಷನಾಗಿ ಉಳಿಯದೆ, ಯುಗಪುರುಷನಾಗಿಯೂ ಬೆಳೆದಿದ್ದಾನೆ. ಸಾಮಾನ್ಯವಾಗಿ ಯುಗಪುರುಷರು ಸಾಮಾಜಿಕ, ಧಾರ್ಮಿಕ, ಸಾಹಿತ್ಯಕ- ಹೀಗೆ ಜೀವನದ ಯಾವುದೋ ಒಂದು ಕ್ಷೇತ್ರಕ್ಕೆ ಹೊಸ ತಿರುವು ತಂದುಕೊಡುತ್ತಾರೆ. ಬಸವಣ್ಣ ಇಂಥ ಎಲ್ಲ ಕ್ಷೇತ್ರಗಳಿಗೂ ಹೊಸ ತಿರುವು ಕೊಟ್ಟ ಕಾರಣ. ಅವನು ಒಂದು ಕ್ಷೇತ್ರದ ಯುಗಪುರುಷನೆನಿಸದೆ. ಜೀವನದ ಎಲ್ಲ ಕ್ಷೇತ್ರಗಳ 'ಯುಗಪುರುಷ' ನೆನಿಸಿದ್ದಾನೆ. ಹೀಗಾಗಿ ಅವನನ್ನು ಜಗತ್ತು ಕಂಡ ಒಬ್ಬ ಅಪರೂಪದ 'ಸಮಗ್ರ ಯುಗಪುರುಷ'ನೆಂದು ಗುರುತಿಸಲಾಗುತ್ತಿದೆ.
ಬಸವಪೂರ್ವಯುಗವೆಂಬುದು ಕರ್ನಾಟಕದ ಇತಿಹಾಸದಲ್ಲಿ ಪತನ ವೈಭವದ ಕಾಲವಾಗಿದ್ದಿತು. ಅಂದು ರಾಜಸತ್ತೆ, ಮತಸತ್ತೆ, ಪುರುಷಸತ್ತೆಗಳು ಸಮಾಜವನ್ನು ನಿಯಂತ್ರಿಸುವ ಶಕ್ತಿಯಾಗಿದ್ದವು. ಇವುಗಳಲ್ಲಿ “ ರಾಜಸತ್ತೆ "ಯ ಪೋಷಣೆಗಾಗಿ ಯುದ್ಧದಲ್ಲಿ ತೊಡಗುವುದು. ದುಡಿದು ಸುಂಕ ತೆರುವುದು ಅಂದಿನ ಪ್ರಜೆಗಳ ಸ್ಥಿತಿಯಾಗಿದ್ದಿತು. * ಮತಸತ್ತೆ " ಯ ಹೆಸರಿನಲ್ಲಿ ಶಿಷ್ಟ ಪದ ಮತ್ತು ಜಾನಪದ ಧರ್ಮಗಳ ಮುಖಂಡರು ಭಕ್ತರನ್ನು ಶೋಷಿಸುತ್ತಿದ್ದರು. ಇದೇ ರೀತಿ ಪುರುಷಸತ್ತೆ" ಸ್ತ್ರೀವರ್ಗವನ್ನು ತುಳಿಯುತ್ತಲಿದ್ದಿತು. ಹೀಗಾಗಿ ಸಮಾಜದಲ್ಲಿ ರಾಜವರ್ಗ- ಪ್ರಜಾವರ್ಗ, ಪುರೋಹಿತವರ್ಗ-ಭಕ್ತವರ್ಗ, ಪುರುಷವರ್ಗ-ಸ್ತ್ರೀವರ್ಗಗಳೆಂಬ ಸೀಳು ತಲೆದೋರಿ. ಒಂದು ಇನ್ನೊಂದನ್ನು ಶೋಷಿಸುವಲ್ಲಿ ಜೀವನ ವ್ಯವಸ್ಥೆಯ ಸಮತೋಲನ ತಪ್ಪಿ ಹೋಗಿದ್ದಿತು. ಈ ಅನ್ಯಾಯದ ಗರ್ಭಸೀಳಿ ಹುಟ್ಟಿಕೊಂಡು, ಸಾಮಾಜಿಕ ಸಮತೋಲನಕ್ಕಾಗಿ ಹೋರಾಡಿದವ. ಬಸವಣ್ಣ,