ಪುಟ:ಬೆಳಗಿದ ದೀಪಗಳು.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೬

ಸಂಪೂರ್ಣ-ಕಥೆಗಳು

ಹತ್ತಾಟದಲ್ಲಿ ಸೊಗಸಿರಲಿಲ್ಲ ಮೂವರದೂ ಜೀವ ಒಂದಾಗಿತ್ತು.

ಈ ಸಡಗರದಿಂದ ಹತ್ತು ಹರದಾರಿ ಹೋಗಿ ರಾಜನು ತನ್ನ ಕೆಲಸ ತೀರಿಸಿಕೊಂಡು ಮರಳಿ ಹತ್ತು ಹರದಾರಿ ಬರಬೇಕೆಂದು ಯೋಚಿಸಿ "ಹೇಗೆ ಬಂಟನೆ, ಇಂದೆಯೇ ನಾವು ರಾಜಧಾನಿಗೆ ಹೋಗಬಹುದಷ್ಟೆ?” ಎಂದು ತನ್ನ ಕೊಡೆಯಾಳನ್ನು ಕೇಳಿದನು. "ದೇವರೂ, ಕುದುರೆಯು ದಣಿಯದೆ ಇದ್ದರೆ ನಾನೇಕೆ ಬೇಡೆನ್ನಲಿ? ನಡೆಯಿರಿ ” ಎಂದು ನುಡಿದು ಆ ಭಟನು ಮತ್ತೆ ಟೊಂಕಕಟ್ಟಿ ಸಿದ್ಧನಾಗಿ ನಿಂತನು. ಕುದುರೆಯಾದರೂ ಕಟ್ಟದಲ್ಲಿ ನಿಂದಿರಲಾರದೆ, ಪ್ರಯಾಣದ ಸಿದ್ಧತೆಯನ್ನು ಕಂಡು ರಭಸದಿಂದ ಹೇಂಕರಿಸಿತು. ಊರ ಕಡೆಗೆ ಹೊರಟ ಕುದುರೆಯ ವೇಗವು ಇಮ್ಮಡಿಯಾಗುವದೆಂದು ಕುದುರೆಗಳನ್ನು ಕಟ್ಟಿದವರು ಮನಗಂಡ ಮಾತು.

ಕೇರಳಾಧೀಶ್ವರನ ಕುದುರೆಯು ವಾಯುವೇಗದಿಂದ ಧಾವಿಸುತ್ತಿತ್ತು. "ನನ್ನ ಮುಂದೆ ನೀನೆಷ್ಟು ಓಡುವಿ ಕುದುರೆಯ ಮರಿಯೇ,” ಎಂದೆನ್ನುತ್ತ ಕಡುವೇಗದ ಹುಡುಗನಾದ ಆ ಕೊಡೆಯಾಳು ಕೇರಳಾಧೀಶ್ವರನ ಮೋರೆಗೆ ಬಿಸಿಲು ತಗಲದಂತೆ ಕೊಡೆಹಿಡಿದು ಹುಯ್ಯೆಂದು ಹಾರಿಕೆಗಾಲಿಕ್ಕುತ್ತೆ ಓಡುತ್ತಿದ್ದನು. ಜೂಜುಕಟ್ಟಿ ಓಡುತ್ತಿರುವ ಕುದುರೆ ಕೊಡೆಯಾಳುಗಳೀರ್ವರೂ ತಮ್ಮ ಚಾಪಲ್ಯದ ಇಯತ್ತೆಯನ್ನು ಮೀರಿದರು, ಕೊಡೆಯಾಳಿನ ಜಡೆಯಿಂದ ಬೆವರನಿಗಳು ಗಿರಿಶಿಖರದಿಂದ ಬೀಳುವ ಗಂಗಾತುಷಾರಗಳಂತೆ ಸುರಿಯುತ್ತಿದ್ದವು. ಸಮುದ್ರದೊಳಗಿಂದ ಈಗಲೆದ್ದು ಬಂದಿರುವ ಉಚ್ಚೆಶ್ರವಸ್ಸನು ಫೇನಾವೃತನಾಗಿ ಕಾಣುವಂತೆ ಆ ಆರಸುಗುದುರೆಯು ಬೆವರಿನ ಬುರಗನ್ನು ತೆಪ್ಪ ತೆಪ್ಪವಾಗಿ ಸುರಿಸುತ್ತೆ ನಡೆದಿತ್ತು. ಕುದುರೆ ಕಾಲಾಳುಗಳೀರ್ವರೂ ಓಡಿ ದಣಿದಿದ್ದರೂ ಗತಿಯನ್ನು ಶಿಥಿಲಿಸಿದರೆ ತಮ್ಮ ಕಲಿತನವು ಕಲುಷಿತವಾಗುವದೆಂಬ ಅಭಿಮಾನಕ್ಕೆ ಈಡಾಗಿ, ಆ ಜೊತೆಗಾರರು ರಾಜಧಾನಿಯ ಮಹಾದ್ವಾರದ ವರೆಗೆ ಓಡಿಯೇ ಓಡಿದರು. ಕೋಟೆಯ ಸಮೀಪಕ್ಕೆ ಬಂದಕೂಡಲೆ ಕುದುರೆಯು ಫಕ್ಕನೆ ಮುಗ್ಗಿತು. ಕೊಡೆಯಾಳುವೂ ಗಕ್ಕನೆ ನಿಂತನು. ಕುದುರೆಯು ಲಗಬಗೆಯಿಂದ ಕಾಲೂರಿ ನಿಂತು ರಾಜನನ್ನು ಕರಕೊಂಡು ಅರಮನೆ ಮುಂದೆ ನಿಂತಿತು. ಕಡೆಯಾಳು ಮಾತ್ರ ಹಿಂದುಳಿದನು.

ಶ್ರಮನಿರ್ವಿಣ್ಣನಾದ ರಾಜನನ್ನು ಕಂಡು ರಾಜವೈದ್ಯರು ಅವನಿಗೆ