ಪುಟ:ಬೆಳಗಿದ ದೀಪಗಳು.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಸಂಪೂರ್ಣ ಕಥೆಗಳು

ಮೈ- ಕೈಗಳನ್ನೂ ಅರಿವೆ-ಅಂಚಡಿಗಳನ್ನೂ ನಿರ್ಮಲವಾಗಿ ತೊಳೆಯುವೆನು ಬನ್ನಿರೆಂದು ಕೂಗುವಳೋ ಎಂಬಂತೆ ಕಂಡಳು.

"ಸಾವಿತ್ರಿಬಾಯಿ, ನಾವು ಯಾವ ಊರಿಗೆ ಬಂದೆವು? ಇದು ಕೊಣ್ಣೂರ ಗ್ರಾಮದಂತೆ ತೋರುವದಿಲ್ಲ” ಎಂದು ಯಮುನಾಬಾಯಿಯು ಕೇಳಿದಳು.

"ಇದು ಕೊಣ್ಣೂರಲ್ಲ; ನಮ್ಮ ತೋಟ ಮಾವಿನ ಗಿಡಗಳ ಗುಂಪುಗಳು ಕಾಣುವದಿಲ್ಲ. ಆದರೂ ಇಲ್ಲಿಗಿಂತ ಕೊಣ್ಣೂರಲ್ಲಿ ಏನು ಹೆಚ್ಚಿದೆ ? ಇಲ್ಲಿಯೂ ಮಲಪ್ರಭಾಮಾತೆಯು ನಮ್ಮ ಕೊನೆಯ ಪ್ರಾರ್ಥನೆಯನ್ನು ಲಾಲಿಸಲು ಸಿದ್ಧಳಾಗಿಯೇ ಇರುವಳು. ಸಮಯವು ತೀರ ಸಮೀಪಿಸಿತು. ಐಹಿಕವಾದ ವಿಚಾರಗಳಿಗೆ ಇನ್ನೆಷ್ಟು ಮಾತ್ರವೂ ಆಸ್ಪದವನ್ನು ಕೊಡದೆ ಗಂಗಾಮಾತೆಯ ಉತ್ಸಂಗವನ್ನು ಆಶ್ರಯಿಸೋಣ.”

ಅವರೀರ್ವರೂ ನದಿಯ ತೀರಕ್ಕೆ ಬಂದರು. ಆಂದೆಯೇ ಸೋನೆ ಹೆಚ್ಚಾಗಿ ಬರುತ್ತಿರುವದರಿಂದ ಆ ಸ್ಥಳದಲ್ಲಿ ನೀರು ಆಳವಾಗಿತ್ತು. ಸಾವಿತ್ರಿಬಾಯಿಯು ಅದನ್ನು ನೋಡಿ ಒಂದು ಪ್ರಕಾರದ ವಿಲಕ್ಷಣವಾದ ಉತ್ಸಾಹವನ್ನು ಕಳೆದು “ನೋಡಿದಿರಾ ಅತ್ತೆಯವರೆ, ಗಂಗಾಮಾತೆಯು ತನ್ನ ಉದರದಲ್ಲಿ ನಮಗೆ ಸ್ಥಳಕೊಡ ಬೇಕಾಗಿರುವದರಿಂದಲೇ ಹೇಗೆ ಉಕ್ಕೇರಿ ಬರುತ್ತಿರುವಳು? ಬನ್ನಿರಿ, ಸ್ನಾನಮಾಡಿ ವೆಂಕಟೇಶನಿಗೆ ಕಡೆಯ ಪ್ರಣಾಮವನ್ನು ಮಾಡಿ ಈ ದುಃಖಸಾಗರವನ್ನು ದಾಟಿ ಹೋಗೋಣ” ಎಂದು ನುಡಿದು ಮಲಾಪಹಾರಿಣಿಯ ವಿಮಲವಾದ ಜಲದಲ್ಲಿ ತಾನು ಸ್ನಾನ ಮಾಡಿ ಅತ್ತೆಯ ಮೈ ತೊಳಿಸಿದಳು.

ಉತ್ತರಾಭಿಮುಖಿಯರಾಗಿ ನಿಂತು ಇಬ್ಬರೂ ನರಗುಂದದ ವೆಂಕಟೇಶ ನಿಗೆ ಪ್ರಾಮ ಮಾಡಿ ಗದಕಂಠಯರಾಗಿ ಕಣ್ಣೀರು ತಂದು “ದೇವ-ದೇವೇಶ, ಇದೆಲ್ಲ ನಿನ್ನಿಚ್ಛೆಗೆ ಬಂದಿತಲ್ಲವೆ ? ಆಗಲಿ. ನಿನ್ನ ಪಾದಾರವಿಂದದ ಸೇವೆಯನ್ನು ನಮಗೆ ನಿರಂತರವಾಗಿ ಕೊಡು ” ಎಂದು ಬೇಡಿಕೊಂಡರು.

ವೆಂಕಟೇಶನಿಗೆ ಪ್ರಣಾಮವಾದ ಬಳಿಕ ಸಾವಿತ್ರಿಬಾಯಿಯ ಹೃದಯವನ್ನೆಲ್ಲ ಬಾಬಾಸಾಹೇಬನ ಮೂರ್ತಿಯು ವ್ಯಾಪಿಸಿಕೊಂಡಿತು. ನಿರ್ಭರವಾದ ದುಃಖವು ಒಮ್ಮೆಲೆ ಒಟ್ಟರಸಿ ಬಂದಿತು. ದೊಡ್ಡ ದನಿ ತೆಗೆದು ಅವಳು