ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಪ್ರಕಾಶಕರ ನಾಲ್ಕು ಮಾತುಗಳು.

Rule Segment - Span - 100px.svgRule Segment - Diamond - 6px.svgRule Segment - Span - 10px.svgRule Segment - Diamond - 10px.svgRule Segment - Span - 10px.svgRule Segment - Diamond - 6px.svgRule Segment - Span - 100px.svg

ಇತಿಹಾಸವೆಂದರೆ ಹಿಂದಕ್ಕೆ ಹೀಗಾಯಿತೆಂದು ಹೇಳುವದು. ಆಗಿಹೋದ ಕಾಲದ ವೃತ್ತಾಂತ. "ಆದದ್ದಾಗಿ ಹೋಗಿ ಹೋಯಿತು. ಅದೇನೂ ತಿರಿಗಿ ಬರುವಂತಿಲ್ಲ. ಅದನ್ನು ನೆನಿಸುತ್ತ ಕುಳಿತರೇನು ಪಯೋಗ? ಅದರಂತೆ ಮುಂದಾಗಬಹುದಾದ್ದನ್ನು ಯೋಚಿಸುವದು ಕನ್ನಡಿಯೊಳಗಿನ ಗಂಟಿಗೆ ಕೈಯಿಕ್ಕಿದ೦ತೆ ವ್ಯರ್ಥವೇ ಸರಿ. ನಾವಿರುವದು ಈಗ. ಈಗಿನ ವಿಷಯಗಳನ್ನಷ್ಟು ನೋಡಿಕೊಂಡರೆ ಸಾಕು. ಹಿಂದಾದ ಮತ್ತು ಮು೦ದಾಗುವ ರಗಳೆಯನ್ನು ತಲೆಯಲ್ಲಿ ಹೇರಿಕೊ೦ಡರೆ ಆಗುವದೇನು?” ಎಂದು ಆಲೋಚಿಸಬಹುದು. ಹಾಗಲ್ಲ. ಹಿಂದು ಮುಂದಿನ ಚರಿತ್ರೆಗಳು ನಮ್ಮ ಈಗಿನ ಚರಿತ್ರೆಯ ಮೇಲೆ ವಿಲಕ್ಷಣ ಪರಿಣಾಮವನ್ನುಂಟು ಮಾಡುವವು. ನಾವು ಚಿಕ್ಕ ಬಾಲಕರಿದ್ದಾಗ ಅಜ್ಜಿಯು ನಮ್ಮನ್ನು ತನ್ನೆದುರಿಗೆ ಕುಳ್ಳಿರಿಸಿಕೊಂಡು ನಮ್ಮ ಮನೆತನದ ಹಿ೦ದಿನ ಹಿರಿಯರು ಮಾಡಿದ ಅದ್ಭುತ ಕಾರ್ಯಗಳನ್ನೂ ತೋರಿಸಿದ ಶೌರ್ಯವನ್ನೂ ಸಂಪಾದಿಸಿದ ಸದ್ಗುಣಗಳನ್ನೂ ವರ್ಣಿಸಿ ಹೇಳುವಾಗ ಯಾರ ಹೃದಯವು ಹುರುಪುಗೊಳ್ಳಲಿಕ್ಕಿಲ್ಲ? ಯಾರ ಮೈ ಮೇಲಿನ ಕೂದಲುಗಳು ರೋಮಾಂಚಿತವಾಗಲಿಕ್ಕಿಲ್ಲ! ಮೊನ್ನೆ ಮೊನ್ನೆ ಆಗಿ ಹೋದ ನರಗುಂದ ಬಂಡಾಯದ ವೃತ್ತಾಂತ, ಸಂಗೊಳ್ಳಿರಾಯನ ಚರಿತ್ರೆ, ಕಿತ್ತೂರ ಚನ್ನಮ್ಮನ ಆರ್ಯತೇಜಪ್ರಭಾವಗಳ ವರ್ಣನೆಯನ್ನು ಲಾವಣಿ ರೂಪದಿಂದ ಕೇಳಿ ಹಳ್ಳಿ ಹಳ್ಳಿಯ ಜನರು ಈಗಲೂ ಹುರುಪು ಗೊಳ್ಳುವದನ್ನು ಕಣ್ಣಾರೆ ಕಾಣುವ ಮಾತಾಗಿದೆ. ಓದು ಬರಹ ಬಾರದ ಜನರಿಗೆ ಲಾವಣಿಗಳ ಇತಿಹಾಸಗಳು. ಅರಸರಲ್ಲಿಯೂ ಸರದಾರ ಇನಾಮದಾರರಲ್ಲಿಯೂ ಇರುವ ಭಟ್ಟಂಗಿ ಹೆಳವರ ಉದ್ದೇಶವಾದರೂ ಇದೇ ನಮ್ಮ ಹಿರಿಯರ ಕಾರ್ಯ ತೇಜಗಳ ನೆನಪು ಮಾಡಿಕೊಟ್ಟು ಅವರ ಮಕ್ಕಳಾದ ನಾವು ನಮ್ಮ ಚರಿತ್ರೆಯನ್ನೂ ಅಷ್ಟೇ ಉಜ್ವಲವಾಗಿ ಮಾಡಬಲ್ಲೆವೆಂದು ಹುರಿದುಂಬಿಸುವದೇ ಇವುಗಳ ಅಂತಿಮಸಾಧ್ಯವು.