ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೭೫
ಶ್ರೀಹರ್ಷವರ್ಧನ.

ಹರ್ಷನ ಮೊದಲಿನ ಹಳವಂಡವೆಂದರೆ ತಂಗಿಯನ್ನು ಕಾರಾಗೃಹದಿಂದ ಬಿಡಿಸುವದು. ಅದಾದ ಮೇಲೆ ದಿಗ್ವಿಜಯದ ಮಾತು. ಆದರೆ ಕನೋಜಕ್ಕೆ ಬಂದು ಕೇಳುವದರೊಳಗೆ ಎಲ್ಲವೂ ವಿಪರೀತಸ್ಥಿತಿಯೇ ! ಕಾರಾಗೃಹದಲ್ಲಿದ್ದ ರಾಜ್ಯಶ್ರೀಯು ಸಾಹಸದಿಂದ ಪಾರಾಗಿ ವಿಂಧ್ಯಾಚಲಕ್ಕೆ ಓಡಿ ಹೋಗಿರುವಳೆಂದೂ, ಎಷ್ಟು ಹುಡುಕಿದರೂ ಅವಳಿರುವ ಸ್ಥಳದ ಎಳೆಯು ಹತ್ತಿಲ್ಲವೆಂಬುದೂ ಹರ್ಷನಿಗೆ ತಿಳಿಯಿತು. ಒಡಹುಟ್ಟಿದವರಲ್ಲಿ ಹೆಣ್ಣುಗರಳಿನವನಾದ ಹರ್ಷನಿಗೆ ಈ ಸುದ್ದಿಯನ್ನು ಕೇಳಿದೊಡನೆ ಮನಸು ಮಿತಿಮೀರಿ ಮರುಗಿ, ಕೊರಗಿ, ಕಳವಳಿಸಿ ಅವನಿಗೆ ತಂಗಿಯನ್ನು ಕಾಣುವ ಹಂಬಲದ ಹುಚ್ಚು ಹಿಡಿದಂತೇ ಆಯಿತು. ತತ್ ಕ್ಷಣವೇ ತನ್ನ ಸೈನಿಕರನ್ನೆಲ್ಲ ಅಲ್ಲಿಯೇ ನದಿಯ ದಡದಲ್ಲಿ ಬೀಡು ಬಿಡಲಿಕ್ಕೆ ಆಜ್ಞಾಪಿಸಿ, ಕೆಲವು ಕೆಚ್ಚ ಬಂಟರನ್ನು ತನ್ನೊಡನೆ ಕಟ್ಟಿಕೊ೦ಡು ತಂಗಿಯ ಶೋಧಕ್ಕಾಗಿ ಲಗುಬಗೆಯಿಂದ ಹೊರಟನು. ಕಾಡಿನಲ್ಲಿ ಹುಡುಕುತ್ತ ತಿರುಗುತ್ತಿರಲಾಗಿ ತನ್ನ ಭಾವ ಮೈದುನನ ಮಿತ್ರನಾದ ದಿವಾಕರ ಮಿತ್ರನೆಂಬೊಬ್ಬ ಬೌದ್ಧ ಭಿಕ್ಷುವಿನ ಆಶ್ರಮಕ್ಕೆ ಬಂದು ತಲ್ಪಿದನು. ಆದರೆ ಅಲ್ಲೇನಿದೆ ? ತ೦ಗಿಯೇ ಇಲ್ಲ! ಕಾಣಬೇಕೆ೦ದು ಆತುರ ಪಡುತ್ತಿರುವ ಹರ್ಷನಿಗೆ ಈ ಆಶ್ರಮದಲ್ಲಿ ತಂಗಿಯು ಕಾಣಿಸದ್ದರಿಂದ ಆತನ ಮನಸ್ಸು ಹೆಚ್ಚೆಚ್ಚು ತಳಮಳಗೊ೦ಡಿತು; ಹೀಗೆ ಮೊದಲೇ ತಳಮಳಗೊಳ್ಳುತ್ತಿರುವ ಹರ್ಷನಿಗೆ, "ಸಮೀಪದಲ್ಲಿಯೇ ಯಾವಳೋ ಒಬ್ಬ ದುಃಖಾರ್ತಳಾದ ಹೆ೦ಗಸು ಉರಿಯುವ ಕಿಚ್ಚಿನ ಕೊಂಡದಲ್ಲಿ ಹಾರಿಕೊಳ್ಳಬೇಕೆಂದು” ಸಜ್ಜಾಗಿರುವ ಸಂಗತಿಯನ್ನು ಕೇಳಿಯಂತೂ ಹುಣ್ಣಿಗೆ ಬರೆ ಕೊಟ್ಟಂತಾಗಿ ಆ ಹೆ೦ಗಸಿದ್ದಲ್ಲಿಗೆ ಧಾವಿಸಿ ಬಂದು ನೋಡುವಷ್ಟರಲ್ಲಿ ತನ್ನ ಪ್ರಿಯ ತ೦ಗಿ! ಅಹಹ! ಅಣ್ಣನಿಗೂ ತ೦ಗಿಗೂ ದುಃಖದ ಉಕ್ಕು ಬಂದಿತು. ಒಬ್ಬರಿಗೊಬ್ಬರು ಬಿಗಿದಪ್ಪಿಕೊ೦ಡು ಕಣ್ಣೀರಿನ ಕೋಡಿ ಹರಿಸಿ ಮನಸನ್ನು ಹಗುರು ಮಾಡಿಕೊಂಡರು. ಯಾರೂ ದಿಕ್ಕಿಲ್ಲದವಳಂತೆ ಆಸೆಗೆಟ್ಟು ಮುಂಗಾಣದೆ ಜೀವದ ಹಂಗು ತೊರೆದು ಅಗ್ನಿನಾರಾಯಣನಿಗೆ ತನ್ನ ಕೋಮಲ ಕಾಯವನ್ನು ಆಹುತಿಯಾಗಿಡಲು ಸಿದ್ಧಳಾದ ತಂಗಿಯನ್ನು ಹರ್ಷನು ತಡೆದು ಸಂತಸನುಡಿಗ