ಪುಟ:ಭಾರತ ದರ್ಶನ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ಭಾರತ ದರ್ಶನ

ಮಾರ್ಗವಾಗಿ ಪಾಟಲಿಪುತ್ರ ನಗರವನ್ನು ಸೇರಿದರು. ಅಲೆಕ್ಸಾಂಡರ್ ಮರಣಹೊಂದಿದ ಎರಡು ವರ್ಷಗಳ ಒಳಗೆ ಚಂದ್ರಗುಪ್ತನು ಪಾಟಲಿಪುತ್ರವನ್ನು ಹಿಡಿದು ಮೌಲ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದನು.

ಅಲೆಕ್ಸಾಂಡರನ ಸೇನೆಯ ಮಹಾ ಸೇನಾನಿಯಾದ ಸೆಲ್ಯೂಕಸ್ ಅಲೆಕ್ಸಾಂಡರನ ತರುವಾಯ ಏಷ್ಯಾಮೈನರ್‌ನಿಂದ ಭಾರತದವರೆಗಿನ ರಾಜ್ಯಗಳಿಗೆ ಅಧಿಪತಿಯಾದನು. ಆತನು ಪುನಃ ಭಾರತದ ವಾಯವ್ಯ ಗಡಿಯಲ್ಲಿ ತನ್ನ ಅಧಿಕಾರ ಸ್ಥಾಪನೆಮಾಡಲು ಪ್ರಯತ್ನಮಾಡಿ ಒಂದು ಸೈನ್ಯದೊಡನೆ ಸಿಂಧೂನದಿಯನ್ನು ದಾಟಿದನು. ಅವನಿಗೆ ಸೋಲಾಯಿತು. ಕಾಬೂಲ್‌ ಮತ್ತು ಹೀರತ್ ವರೆಗೆ ಆಫ್ಘಾನಿಸ್ಥಾನದ ಒಂದು ಭಾಗವನ್ನೇ ಚಂದ್ರಗುಪ್ತನಿಗೆ ಬಿಟ್ಟು ಕೊಡಬೇಕಾಗಿ ಬಂದಿತು. ಅಲ್ಲದೆ ಸೆಲ್ಯುಕಸ್ ನ ಮಗಳನ್ನು ಚಂದ್ರಗುಪ್ತನು ಮದುವೆಯಾದನು. ದಕ್ಷಿಣ ಭಾರತವನ್ನುಳಿದ ಚಂದ್ರಗುಪ್ತನು ಇಡೀ ಭಾರತದ ಅಧಿಪತಿಯಾದನು. ಅರಬ್ಬಿ ಸಮುದ್ರದಿಂದ ಬಂಗಾಳಕೊಲ್ಲಿಯ ವರೆಗೆ, ಉತ್ತರದಲ್ಲಿ ಕಾಬೂಲ್ ವರೆಗೆ ಅವನ ರಾಜ್ಯವು ಹಬ್ಬಿತ್ತು. ಮೊಟ್ಟಮೊದಲನೆಯ ಬಾರಿ ಇತಿಹಾಸ ಕಾಲದಲ್ಲಿ ಒಂದು ದೊಡ್ಡ ಕೇಂದ್ರಿಕೃತ ಸರಕಾರವು ಸ್ಥಾಪನೆಯಾಯಿತು. ಪಾಟಲಿಪುತ್ರ ನಗರವೇ ಈ ಸಾಮ್ರಾಜ್ಯಕ್ಕೆ ರಾಜಧಾನಿಯಾಯಿತು.

ಈ ಹೊಸ ರಾಜ್ಯವಾದರೂ ಹೇಗಿತ್ತು? ನಮ್ಮ ಪುಣ್ಯದಿಂದ ಭಾರತೀಯ ಮತ್ತು ಗ್ರೀಸ್ ಚರಿತ್ರಕಾರರಿಬ್ಬರೂ ಪೂರ್ಣ ಚಿತ್ರವನ್ನು ಕೊಟ್ಟಿದ್ದಾರೆ. ಸೆಲ್ಯೂಕಸ್ ನ ರಾಯಭಾರಿಯಾಗಿ ಬಂದಿದ ಮೆಗಸ್ತನೀಸ್‌ ಲಿಖಿತ ವರದಿಯನ್ನು ಕೊಟ್ಟಿದ್ದಾನೆ. ಇದಕ್ಕೂ ಮುಖ್ಯವಾಗಿ ಕೌಟಿಲ್ಯನ ಅರ್ಥ ಶಾಸ್ತ್ರದಿಂದ ಆಗಿನ ಕಾಲದ ಚರಿತ್ರೆಯು ತಿಳಿಯುತ್ತದೆ. ಕೌಟಿಲ್ಯ ಚಾಣಕ್ಯನ ಇನ್ನೊಂದು ಹೆಸರು. ಹೀಗೆ ಮಹಾವಿದ್ವಾಂಸನಾಗಿದ್ದುದು ಮಾತ್ರ ಅಲ್ಲದೆ ಸಾಮ್ರಾಜ್ಯವನ್ನು ಸ್ಥಾಪನೆಮಾಡಿ, ಬೆಳೆಸಿ ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಒಬ್ಬ ಮಹಾಪುರುಷನೇ ಬರೆದ ಗ್ರಂಥವಿದೆ. ಚಾಣಕ್ಯನನ್ನು ಭಾರತೀಯ ಮೆಕಿಯವೆಲ್ಲಿ ಎನ್ನುತ್ತಾರೆ. ಸ್ವಲ್ಪ ಮಟ್ಟಿಗೆ ಈ ಹೋಲಿಕೆ ನಿಜ. ಆದರೆ ಚಾಣಕ್ಯನು ಎಲ್ಲ ದೃಷ್ಟಿಯಲ್ಲಿ ಉನ್ನತ ಪುರುಷ, .ಬುದ್ದಿಯಲ್ಲಿ, ಕಾರ್ಯದಲ್ಲಿ ಇನ್ನೂ ಉನ್ನತನು. ಆತನು ಕೇವಲ ರಾಜನ ಹಿಂಬಾಲಕನಾಗಿರಲಿಲ್ಲ, ಮತ್ತು ಮಹಾಶಕ್ತನಾದ ಸಾಮ್ರಾಟನ ದೀನ ಮಂತ್ರಿಯೂ ಆಗಿರಲಿಲ್ಲ. ಆಗಿನ ಕಾಲದ ವರ್ಣನೆಯು ಇರುವ - 'ಮುದ್ರಾರಾಕ್ಷಸ' ನಾಟಕದಲ್ಲಿ ಅವನ ಚಿತ್ರವು ಎದ್ದು ಕಾಣುತ್ತದೆ. ಧೈರ್ಯದಲ್ಲಿ, ಯುಕ್ತಿಯಲ್ಲಿ, ಗಾಂಭೀರ್ಯದಲ್ಲಿ, ಸೇಡಿನ ಮನೋ ಭಾವದಲ್ಲಿ, ಅವಮಾನವನ್ನು ಮರೆಯದೆ ಉದ್ದೇಶವನ್ನು ಸಾಧಿಸುವುದರಲ್ಲಿ ಶತ್ರುವನ್ನು ಮೋಸ ಮಾಡಿ ದಾರಿತಪ್ಪಿಸಿ ಎಲ್ಲ ಉಪಾಯವನ್ನೂ ಉಪಯೋಗಿಸಿ ಸೋಲಿಸುವುದರಲ್ಲಿ ಅದ್ವಿತೀಯನಾಗಿದ್ದನು. ಸಾಮ್ರಾಜ್ಯದ ಸೂತ್ರಗಳನ್ನೆಲ್ಲ ತನ್ನ ಕೈಯಲ್ಲಿಟ್ಟು ಕೊಂಡಿದ್ದನು. ಚಕ್ರವರ್ತಿಯನ್ನು ತನ್ನ ಒಬ್ಬ ಪ್ರಿಯ ಶಿಷ್ಯನಂತೆ ನೋಡುತ್ತಿದ್ದನೇವಿನಾ ತನ್ನ ಯಜಮಾನನೆಂದು ಭಾವಿಸಲಿಲ್ಲ. ಸರಳ ನಾದರೂ - ಕಠಿನ ಜೀವಿ. ಉನ್ನತ ಪದವಿಯ ಆಡಂಬರ ಅಥವ ಅಧಿಕಾರ ದರ್ಪವು ಅವನಿಗೆ ಸೇರದು. ತನ್ನ ವಚನವನ್ನು ಪಾಲಿಸಿ ಕಾರ್ಯ ಸಾಧನೆ ಆದೊಡನೆ ನಿಜವಾದ ಬ್ರಾಹ್ಮಣನಂತೆ ಧ್ಯಾನಾಸಕ್ತ ಜೀವನ ನಡೆಸಲು ಇಷ್ಟ ಪಟ್ಟನು.

ತನ್ನ ಕಾರ್ಯ ಸಾಧನೆಯಲ್ಲಿ ಚಾಣಕ್ಯನು ಧರ್ಮವೋ, ಅಧರ್ಮವೋ, ಉಪೇಕ್ಷೆ ಮಾಡುವ ಸ್ವಭಾವದವನಲ್ಲ; ಆದರೆ ತನ್ನ ಗುರಿ ಸಾಧನೆಯಲ್ಲಿ ಅನುಚಿತ ಮಾರ್ಗದಿಂದ ತನ್ನ ಧೈಯವೇ ಹಾಳಾಗಬಹುದೆಂದು ತಿಳಿದಿದ್ದನು. ಕ್ಲಾಸ್ವಿಟ್ಸ್ಗಿಂತ ಅನೇಕ ಕಾಲದ ಹಿಂದೆಯೇ “ಇತರ ಮಾರ್ಗಗಳು ವಿಫಲವಾದಾಗ ಅನುಸರಿಸುವ ರಾಜ ನೀತಿಯೇ ಯುದ್ಧ” ಎಂದು ಚಾಣಕ್ಯ ಹೇಳಿ ದ್ದನು. ಆದರೆ ಯುದ್ಧವು ಒಂದು ಆದರ್ಶ ಧೈಯಕ್ಕಾಗಿ ನಡೆಯಬೇಕು. ಯುದ್ದಕ್ಕಾಗಿಯೇ ಯುದ್ಧ ಮಾಡಬಾರದು. ಯುದ್ಧದ ಧೈಯವು ಕೇವಲ ಶತ್ರುವಿನ ಸೋಲು ಮತ್ತು ನಾಶವಲ್ಲ, ಯುದ್ಧದ ಪರಿಣಾಮವಾಗಿ ರಾಷ್ಟ್ರದ ಉನ್ನತಿಯೇ ರಾಜ ನೀತಿಜ್ಞನ ಗುರಿಯಾಗಿರಬೇಕು.