ಪುಟ:ಭಾರತ ದರ್ಶನ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ದರ್ಶನ

ನಾನು ಮತ್ತು ನನ್ನ೦ತೆ ಇ೦ಡಿಯಾದಲ್ಲಿ ಅನೇಕರು ಮೊದಮೊದಲು ಫ್ಯಾಸಿಸಂ ಮತ್ತು ನಾಜಿಸಂಗೆ ಯಾವ ಮನೋಭಾವನೆ ತೋರಿದೆವೆಂಬುದು ಜ್ಞಾಪಕವಿದೆ, ಚೀನದ ಮೇಲೆ ಜಪಾನ್ ಧಾಳಿಮಾಡಿದ್ದು ಇಂಡಿಯಾದ ಹೃದಯವನ್ನು ಹೇಗೆ ಕಲಕಿತು ; ಇ೦ಡಿಯಾ ಚೀನದೇಶಗಳ ಶತಶತ ಮಾನಗಳ ಸ್ನೇಹವನ್ನು ಪುನಃ ಹೇಗೆ ಬೆಸೆಯಿತು ; ಇಟಲಿ, ಅಬಿಸೀನಿಯಾ ದೇಶವನ್ನು ಲೂಟಿಮಾಡಿದ್ದರಿಂದ ಇ೦ಡಿಯಕ್ಕೆ ಎಷ್ಟು ಬೇಸರವಾಯಿತು ; ಜೆಕೊಸ್ಕೊ ವೇಕಿಯಾ ವಿಷಯದ ದ್ರೋಹ ನಮ್ಮ ಹೃದಯವನ್ನಿರಿದು ಮನಸ್ಸನ್ನು ಹೇಗೆ ಕಹಿಮಾಡಿತು ; ಸ್ಪೇನ್ ದೇಶದ ಪ್ರಜಾಧಿ ಸತ್ಯ ಸರಕಾರ ಹೆಜ್ಜೆ ಹೆಜ್ಜೆ ಗೂ ವೀರಾವೇಶದಿಂದ ಕಾದಾಡಿ ಹೇಗೆ ನಿರ್ನಾಮವಾಯಿತು ; ಇವೆಲ್ಲ ನನಗೂ, ನನ್ನ೦ತೆ ಇನ್ನೂ ಅನೇಕರಿಗೂ ಘೋರ ದುರಂತಗಳಾಗಿ, ವೈಯಕ್ತಿಕವಾಗಿ ಮನನೊಂದಿದೇವೆ.

ನಮ್ಮ ಮನಸ್ಸನ್ನು ಕಲಕಿದ್ದು ಫ್ಯಾಸಿಸಂ ಮತ್ತು ನಾಜಿಸಂಗಳು ನಡೆಸಿದ ಪರಾಕ್ರಮಣದ ಪ್ರತ್ಯಕ್ಷಕಾರ್ಯಗಳು ಮಾತ್ರವಲ್ಲ ; ಎಷ್ಟೇ ಭಯಾನಕವಿದ್ದರೂ ಅದರ ಹಿಂದೆಯೇ ಒದಗಿದ ಅಸಭ್ಯತೆ ಮತ್ತು ಪಾಶವೀವೃತ್ತಿಯೂ ಅಲ್ಲ, ಆದರೆ ಬೊಬ್ಬೆಯಿಟ್ಟು ಕಿರಿಚಿ ಪ್ರಚಾರ ಮಾಡಿದ ಅವುಗಳ ಆಧಾರಭೂತ ತತ್ವಗಳು ಮತ್ತು ತಮ್ಮ ಜೀವನವನ್ನೇ ಮಾರ್ಪಡಿಸಲು ಇಟ್ಟು ಕೊಂಡ ಜೀವನಸಿದ್ಧಾಂತಗಳು, ಏಕೆಂದರೆ ಅವು ನಾವು ತಲೆತಲಾಂತರದಿಂದ ಅಂಟಿಕೊಂಡು ಇಂದೂ ನಂಬಿದ್ದಕ್ಕೆ ತೀರ ಭಿನ್ನವಾಗಿದ್ದುವು. ನಮ್ಮ ಜನಾಂಗದ ಸ್ಮರಣ ಶಕ್ತಿ ನಮ್ಮನ್ನು ಪೂರ್ಣ ಕೈ ಬಿಟ್ಟಿದ್ದರೂ, ನಮ್ಮ ನೆಲೆಯನ್ನು ನಾವು ಕಳೆದುಕೊಂಡಿದ್ದರೂ, ಸಭ್ಯತೆಗಾಗಿ ತಮ್ಮ ವೇಷವನ್ನು ಮರೆಮಾಚಿಕೊಂಡು ಬಂದ ನಮ್ಮ ಸ್ವಂತ ಅನುಭವಗಳೇ-ನಾಜಿ ತತ್ವಗಳು, ಜೀವದ ಸಿದ್ಧಾಂತಗಳು ರಾಷ್ಟ್ರ ಪದ್ದತಿ ಇವುಗಳ ಅ೦ತಿಮ ಗುರಿ ಏನು ಎಂದು ತಿಳಿಸಲು ಸಾಕಾಗಿದ್ದವು. ಏಕೆಂದರೆ ಬಹುಕಾಲದಿಂದ ನಮ್ಮ ಜನ ಅದೇ ತತ್ವಗಳಿಗೆ, ರಾಷ್ಟ್ರ ಪದ್ಧತಿಗೆ ಬಲಿಯಾಗಿದ್ದರು. ನಾವು ಫ್ಯಾಸಿಸಂ ಮತ್ತು ನಾಸಿಸಂಗೆ ಅಷ್ಟು ಬೇಗ ತೀವ್ರ ವಿರೋಧಿಸಿದ್ದಕ್ಕೆ ಅದೇ ಕಾರಣ,

೧೯೩೬ ನೆ ಮಾರ್ಚಿ ತಿಂಗಳ ಮೊದಲಲ್ಲಿ ಸಿನಾರ್ ಮುಸೋಲಿಸಿ ಒತ್ತಾಯಮಾಡಿಕೊಟ್ಟ ಆಹ್ವಾನವನ್ನು ನಾನು ತಿರಸ್ಕರಿಸಿದ್ದು ನನಗೆ ಜ್ಞಾಪಕವಿದೆ, ಇಟಲಿ ಯುದ್ಧಕ್ಕೆ ಸೇರಿದ ಒಡನೆ ಫ್ಯಾಸಿಸ್ಟ್ ಡೂಚೆಯನ್ನು ಬೈಯಲು ಆರಂಭಿಸಿದ ಅನೇಕ ಪ್ರಮುಖ ರಾಜನೀತಿಜ್ಞರು ಆಗ ಆತನನ್ನು ಬಹು ಮಮತೆಯಿಂದ ಮನಮೆಚ್ಚಿ ಹೊಗಳುತ್ತಿದ್ದರು ; ಆತನ ರಾಜ್ಯಭಾರ ಮತ್ತು ಕಾರ್ಯ ವಿಧಾನ ವನ್ನು ಕೊಂಡಾಡುತ್ತಿದ್ದರು.

ಎರಡು ವರ್ಷಗಳನಂತರ ಮೂನಿಚ್‍ಗೆ ಮು೦ಚಿನ ಬೇಸಗೆಯಲ್ಲಿ, ಜರ್ಮನಿಗೆ ಬರಬೇಕೆಂದು ನಾಜಿ ಸರಕಾರದಿಂದ ನನಗೆ ಆಹ್ವಾನ ಬಂದಿತು. ಅದೇ ಆಹ್ವಾನದಲ್ಲಿ ನಾಜಿ ತತ್ವಗಳಿಗೆ ನನ್ನ ವಿರೋಧ ಮನೋಭಾವ ತಮಗೆ ತಿಳಿದಿದೆ ಎಂದೂ, ಆದರೂ ನಾನು ಸ್ವತಃ ಜರ್ಮನಿಯನ್ನು ನೋಡಬೇಕೆಂದೂ ಸೂಚಿಸಲಾಗಿತ್ತು. ಸರಕಾರದ ಅತಿಥಿಯಾಗಿ ಅಥವ ಖಾಸಗಿಯಾಗಿ, ನನ್ನ ಹೆಸರಿನಲ್ಲಿ ಅಥವ ಗುಪ್ತ ಹೆಸರಿನಲ್ಲಿ ನನಗೆ ಇಷ್ಟ ಬಂದಂತೆ ಎಲ್ಲಿ ಬೇಕಾದರೂ ಹೋಗಬಹುದೆಂದೂ ತಿಳಿಸಲಾಗಿತ್ತು. ವಂದನೆಗಳೊಡನೆ ಆಗಲೂ ನಿರಾಕರಿಸಿದೆ. ಅದಕ್ಕೆ ಬದಲು ಇಂಗ್ಲೆಂಡ್‍ನ ಆಗಿನ ಮುಖ್ಯಮಂತ್ರಿಗೆ ಏನೂ ತಿಳಿಯದ ಆ ದೂರದೇಶವಾದ ಜೆಕೊಸ್ಕೊವೇಕಿಯಾಕ್ಕೆ ಹೋದೆ.

ಮೂನಿಚ್ ಗೆ ಮುಂಚೆ ಇಂಗ್ಲೆಂಡ್‍ನ ಮಂತ್ರಿಮಂಡಲದ ಸದಸ್ಯರನ್ನು ಮತ್ತು ಪ್ರಮುಖ ರಾಜ ಕಾರಣಿಗಳನ್ನು ಕಂಡು ನನ್ನ ನಾಜಿ, ಫ್ಯಾಸಿಸ್ಟ್ ವಿರೋಧಭಾವನೆಗಳನ್ನು ವ್ಯಕ್ತಗೊಳಿಸಿದೆ. ನನ್ನ ಅಭಿ ಪ್ರಾಯಗಳು ಅವರಿಗೆ ರುಚಿಸಲಿಲ್ಲ. ಗಮನಿಸಬೇಕಾದ ಅಂಶಗಳು ಇನ್ನೂ ಅನೇಕವಿವೆ ಎಂಬ ಉತ್ತರ ದೊರೆಯಿತು.

ಜೆಕೊಸ್ಕೊವೇಕಿಯಾದ ವಿಷಮ ಸ್ಥಿತಿಯಲ್ಲಿ ಪ್ರೇಗ್, ಸೂಡೆಟನ್ಲ್ಯಾಂಡ್, ಲಂಡನ್, ಪ್ಯಾರಿಸ್ ಮತ್ತು ರಾಷ್ಟ್ರ ಸಂಘದ ಸಭೆ ನಡೆಯುತ್ತಿದ್ದ ಜಿನೀವದಲ್ಲಿ ನಾನು ಕಂಡ ಫ್ರಾಂಕೊ ಬ್ರಿಟಿಷ್ ರಾಜನೀತಿ ಯನ್ನು ನೋಡಿ ಆಶ್ಚರ್ಯವಾಯಿತು, ಬೇಸರವಾಯಿತು. ಅದನ್ನು ಶಮನ ನೀತಿ ಎಂದರೆ ಬಹಳ ಮೃದುಮಾತು. ಅದರ ಹಿಂದೆ ಹಿಟ್ಲರನ ಭಯವೂ ಇತ್ತು, ಕಳ್ಳತನದ ಮೆಚ್ಚುಗೆಯೂ ಇತ್ತು.