ಪುಟ:ಭಾರತ ದರ್ಶನ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ದರ್ಶನ

ಹೊರಗಿನ ವಾಸ್ತವಿಕ ಕಾಲವು ಇಲ್ಲವಾಗಿದೆ, ಒಳಗಿನ ಕಾಲ್ಪನಿಕ ಭಾವನೆಯು ಮಾತ್ರ ಉಳಿದಿದೆ; ಅದೂ ತುಂಬ ತಳಮಟ್ಟದಲ್ಲಿ, ನಮ್ಮ ಆಲೋಚನೆಗಳು ಆ ಕಾಲ್ಪನಿಕ ಭಾವನೆಯನ್ನು ಪ್ರಸಕ್ತ ಕಾಲ ದಿಂದ ಹೊರಗೆಳೆದು ಗತಕಾಲದಲ್ಲೋ, ಭವಿಷ್ಯತ್ತಿನಲ್ಲೊ ಒಂದು ವಿಧವಾದ ವಾಸ್ತವಿಕತೆಯನ್ನೂ ಅನುಭವಿಸಿದಾಗ ಮಾತ್ರ. ಆಗಸ್ಟ್‌ ಕಾಂಟೆಯು ಹೇಳಿರುವಂತೆ ನಮ್ಮ ಗತಕಾಲದ ಗೋರಿಗಳಲ್ಲಿ ಸತ್ತ ಶವಗಳಂತೆ ಜೀವಿಸುತ್ತಿದ್ದೇವೆ. ಅದರಲ್ಲೂ ಗತಕಾಲ ಸ್ಮರಣೆಯಲ್ಲೋ ಭವಿಷ್ಯದ ಕಲ್ಪನಾ ಪ್ರಪಂಚದಲ್ಲೋ ನಮ್ಮ ಶೋಷಿತ ಬಂಧಿತ ಮನೋಭಾವನೆಗಳಿಗೆ ಪೋಷಣೆ ಪಡೆಯಲೆತ್ನಿ ಸುವ ಸೆರೆಮನೆಯಲ್ಲಿ.

ಹಿಂದಿನದರಲ್ಲಿ ಒಂದು ನಿತ್ಯತೆ ಮತ್ತು ಪ್ರಶಾಂತತೆ ಇದೆ. ವರ್ಣಚಿತ್ರದಂತೆ, ಕಂಚು ಅಥವ ಅಮೃತಶಿಲೆಯ ಪ್ರತಿಮೆಯಂತೆ ಶಾಶ್ವತತೆಯ ಸ್ಪರ್ಶವಿದೆ ; ಬದಲಾವಣೆ ಎಂಬುದು ಅದಕ್ಕಿಲ್ಲ. ಪ್ರಸ್ತುತ ಕಾಲದ ಸಂಕ್ಷೇಭವಿಪ್ಲವಗಳಿಂದ ಕದಲದೆ ತನ್ನ ಗಾಂಭೀರವನ್ನು ಪ್ರಶಾಂತ ಮುದ್ರೆಯನ್ನು ಕಾಯ್ದು ಕೊಂಡು ನೊಂದಜೀವಕ್ಕೆ, ತಳಮಳಗೊಂಡ ಮನಸ್ಸಿಗೆ ತನ್ನ ಸಮಾಧಿ ಗುಹೆಯಲ್ಲಿ ಆಶ್ರಯ ಪಡೆಯಲು ಪ್ರೇರೇಪಿಸುತ್ತದೆ. ಅಲ್ಲಿ ಒಂದು ವಿಧವಾದ ಶಾಂತಿ, ಭದ್ರತೆ ಇದೆ ಮತ್ತು ಒಂದು ಬಗೆಯ ಆಧ್ಯಾತ್ಮಿಕ ಸಮಾನತೆಯನ್ನೂ ಕಾಣಬಹುದು.

ಆದರೆ ಅದಕ್ಕೂ ತನ್ನದೇ ಆದ ಹೋರಾಟಗಳು ಸಮಸ್ಯೆಗಳಿಂದ ತುಂಬಿರುವ ಪ್ರಸ್ತುತಕಾಲಕ್ಕೂ ಒಂದು ಸಜೀವ ಸಂಬಂಧವಿಲ್ಲದಿದ್ದರೆ ಅದು ಜೀವನವೇ ಅಲ್ಲ. ಆದರೆ ಜೀವನ ಪೂರ್ಣತೆಗೆ ಅತ್ಯವಶ್ಯವಾದ ಒಂದು ಕ್ರಿಯಾಸಕ್ತಿ ಮತ್ತು ಛಲವಿಲ್ಲದ ಕಲೆಗಾಗಿ ಕಲೆ ಎಂಬಂತಾಗುತ್ತದೆ. ಆ ಆಸಕ್ತಿ ಛಲವಿಲ್ಲದಿದ್ದರೆ ಕ್ರಮೇಣ ನಮ್ಮ ಆಶೆಗಳೂ, ಶಕ್ತಿಯೂ ಬರಿದಾಗುತ್ತದೆ; ಜೀವನದ ತಳಮಟ್ಟವನ್ನು ಮುಟ್ಟ ಕ್ರಮೇಣ ಅಸ್ತಿತ್ವವೇ ಇಲ್ಲದಾಗುತ್ತದೆ. ನಾವೂ ಗತಕಾಲದ ಬಂದಿಗಳಾಗುತ್ತೇವೆ. ಅದರ ಜಡಸ್ವಭಾವ ನಮಗೂ ಸ್ವಲ್ಪ ಅ೦ಟಿಕೊಳ್ಳುತ್ತದೆ. ಸೆರೆಮನೆಯ ಶುಷ್ಕ ಜೀವನ ನಿಯಮಗಳಿಗೆ ದಾಸರಾಗಿ, ಕ್ರಿಯಾಸಕ್ತಿಯೇ ಇಲ್ಲದ ಸೆರೆಮನೆಯಲ್ಲಿ ಮನಸ್ಸು ಈ ರೀತಿ ಪರಿವರ್ತನಗೊಳ್ಳುವುದು ಅತಿಸುಲಭ.

ಆದರೂ ಗತಕಾಲಕ್ಕೆ ನಾವು ಅಂಟಿಕೊಂಡೇ ಇದ್ದೇವೆ. ನಮ್ಮ ನಿಲುವು ಇವುಗಳೆಲ್ಲ ಗತ ಕಾಲದಿಂದ, ನಾವು ಅದರ ಮಕ್ಕಳಾಗಿ ಅದರಲ್ಲಿ ಮುಳುಗಿದ್ದೇವೆ. ಅದನ್ನು ಅರ್ಥಮಾಡಿಕೊಳ್ಳದೆ, ಅದು ನಮ್ಮೊಳಗೆ ಇರುವ ಏನೋ ಒಂದು ವಸ್ತು ಎಂದು ಭಾವಿಸುವುದು ವರ್ತಮಾನ ಕಾಲವನ್ನೇ ಅರಿಯ ದಂತೆ ಅದನ್ನು ಪ್ರಸ್ತುತ ಕಾಲಕ್ಕೆ ಹೊಂದಿಸಿಕೊಂಡು, ಭವಿಷ್ಯತ್ತಿಗೆ ಬೆಳಸಿ, ಆ ರೀತಿ ಜೋಡಿಸಲಾಗದ ಭಾಗವನ್ನು ಕಿತ್ತೊಗೆದು, ಎಲ್ಲವನ್ನೂ ನಮ್ಮ ಭಾವನೆಗೆ, ಕ್ರಿಯೆಗೆ ಸ್ಪಂದನ ಮತ್ತು ಕಂಪನ ಶಕ್ತಿ ಯನ್ನು ಕೊಡುವ ಸಜೀವವಸ್ತುವನ್ನಾಗಿ ಮಾಡುವುದೇ ಜೀವನ.

ಈ ಎಲ್ಲ ಅವಶ್ಯ ಕ್ರಿಯೆಯೂ ನಮ್ಮ ಅಂತರಾಳದಿಂದ ಉದ್ಭವಿಸುತ್ತದೆ. ಗತಕಾಲದ ವೈಯಕ್ತಿಕ ಅನುಭವ ಮಾತ್ರ ಏಕೆ, ಜನಾಂಗದ ಅನುಭವ ಸಹ ನಮ್ಮನ್ನು ಸಕಾಲದ ಕ್ರಿಯೆಯ ಮನೋ ನಿಶ್ಚಯಕ್ಕೆ ಅಣಿ ಮಾಡುತ್ತದೆ. ಜನಾಂಗದ ಎಲ್ಲ ಸ್ಮರಣ ಶಕ್ತಿ, ಆನುವಂಶಿಕ ಪ್ರಭಾವ, ಸನ್ನಿವೇಶ, ಶಿಕ್ಷಣ, ಸುಷುಪ್ತ ಪ್ರೇರಣೆಗಳು, ಶೈಶವ ಮತ್ತು ಬಾಲ್ಯಾವಸ್ಥೆಯಿಂದ ಮೊದಲುಗೊಂಡು ನಮ್ಮ ಭಾವನೆಗಳು, ಕನಸುಗಳು, ಕ್ರಿಯೆಗಳು ಇವೆಲ್ಲದರ ಅಗಾಧವಾದ ವಿಚಿತ್ರ ಸಮ್ಮಿಶ್ರಶಕ್ತಿ ನಮ್ಮನ್ನು ಆ ಹೊಸಕ್ರಿಯೆಗೆ ನಿರುಪಾಯವಾಗಿ ಮುಂದೂಡುತ್ತದೆ ; ಆ ಕ್ರಿಯೆಯೇ ಪುನಃ ನಮ್ಮ ಭವಿಷ್ಯ ವನ್ನು ರೂಪಿಸುವ ಇನ್ನೊಂದು ಕಾರಣಭೂತವೂ ಆಗುತ್ತದೆ. ಭವಿಷ್ಯವನ್ನು ಮಾರ್ಪಡಿಸಿ, ಸ್ವಲ್ಪ ಮಟ್ಟಗೆ, ಪ್ರಾಯಶಃ ಬಹುಮಟ್ಟಿಗೆ ನಿರ್ದಿಷ್ಟ ಗೊಳಿಸುತ್ತದೆ. ಆದರೂ ನಿಶ್ಚಯವಾಗಿ ಅದೇ ಎಲ್ಲ ಕೊನೆಯಲ್ಲ.

ಅರವಿಂದರು ಎಲ್ಲೋ ಒಂದು ಕಡೆ ವರ್ತಮಾನವು “ ಶುದ್ಧ ಅಕ್ಷತ ಕಾಲ ” ಎಂದಿದ್ದಾರೆ: ಭೂತಕಾಲದಿಂದ ಭವಿಷ್ಯತ್ತನ್ನು ಬೇರ್ಪಡಿಸುವ ಕತ್ತಿಯ ಅಲಗಿನಂತಿರುವ ಕಾಲ ಮತ್ತು ಸ್ಥಿತಿ: