ಪುಟ:ಭಾರತ ದರ್ಶನ.djvu/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಅಹಮದ್ ನಗರದ ಕೋಟೆ

ಹಿಡಿಯೋಣವೆಂದು ಭೂತಕಾಲದೊಳಕ್ಕೆ ಈ ಒಂದು ಅನಾವರಣ ಯಾತ್ರೆ ಮಾಡಿದೆ. ನಾನು ಯಾರು ಎಲ್ಲಿದ್ದೇನೆ ಎಂಬುದನ್ನೂ ಮರೆತು ಗತಕಾಲದ ದೂರದ ವ್ಯಕ್ತಿಗಳ ಮತ್ತು ವೈಭವದ ಸ್ಮರಣೆಯಲ್ಲಿ ಮಗ್ನನಾದರೂ ಪ್ರಸ್ತುತಕಾಲದ ಪ್ರಭಾವದಿಂದ ನಾನೆಂದೂ ದೂರನಾಗಲಿಲ್ಲ. ಅನೇಕ ವೇಳೆ ನಾನು ಗತಕಾಲದವನೆಂದು ನನಗೆ ಕಂಡು ಬಂದರೂ, ಗತಕಾಲದ ಸರ್ವಸ್ವವೂ ಪ್ರಸಕ್ತ ಕಾಲದಲ್ಲಿ ನನ್ನದು ಎಂಬ ಭಾವನೆಯೂ ನನಗಿದೆ. ಗತಕಾಲದ ಇತಿಹಾಸ ಇಂದಿನ ಇತಿಹಾಸದಲ್ಲಿ ಬೆರೆತಿದೆ ; ಸುಖ ದುಃಖಗಳ ಅನುಭವದ ಬಂಧನದಿಂದ ಸಜೀವವಾದ ಅಸ್ತಿತ್ವವಾಗಿದೆ.

ಹಿಂದಿನವಕ್ಕೆ ಇಂದಿನದಾಗುವ ಚೈತನ್ಯವಿದ್ದರೆ, ಇಂದಿನದೂ ಹಳತಾಗಿ ದೂರ ಹಿಂದೆ ಹೋಗಿ ಜಡವಿಗ್ರಹರೂಪ ತಾಳಬಹುದು. ಕಾರ್ಯಾಧಿಕ್ಯತೆಯ ಮಧ್ಯದಲ್ಲೇ ಅದು ಯಾವುದೋ ಒಂದು ಹಿಂದಿನ ಘಟನೆ ಎಂಬ ಭಾವನೆ ಏಕಾಏಕಿ ಉದ್ಭವಿಸಿ, ಪುನರ್ಸ್ಮರಣೆಯಲ್ಲಿ ಅದನ್ನು ಕಾಣುತ್ತಿರು ವಂತೆ ಭಾಸವಾಗುತ್ತಿತ್ತು.

ಪ್ರಸ್ತುತಕಾಲಕ್ಕೆ ಸಂಬಂಧಿಸಿದಂತೆ ಗತಕಾಲದ ಇತಿಹಾಸದ ಪುನರ್ದರ್ಶನಮಾಡುವ ಪ್ರಯತ್ನ ದಲ್ಲಿ ಹನ್ನೆರಡು ವರ್ಷಗಳ ಹಿಂದೆ ನಾನು “ ಪ್ರಪಂಚದ ಇತಿಹಾಸದ ಕಿರುನೋಟ ” ಎಂಬ ಗ್ರಂಥವನ್ನು ನನ್ನ ಮಗಳಿಗೆ ಪತ್ರ ರೂಪದಲ್ಲಿ ಬರೆದೆ. ಇಪ್ಪತ್ತು ವರ್ಷದೊಳಗಿನ ಹುಡುಗಿಗೆ ಬರೆದ ಕಾರಣ ಆದಷ್ಟು ಸುಲಭಶೈಲಿಯಲ್ಲಿ ಹೊರನೋಟವನ್ನು ಮಾತ್ರ ಕೊಟ್ಟೆ. ಆದರೂ ಆ ಬರವಣಿಗೆಯ ಹಿಂದೆ ಆವಿಷ್ಕರಣದ ಶೋಧನೆ ಮತ್ತು ಯಾತ್ರೆ ಇತ್ತು. ಒಂದು ಸಾಹಸ ಮನೋಭಾವ ನನ್ನನ್ನು ಆವರಿಸಿತ್ತು. ಬೇರೆ ಬೇರೆ ಯುಗಗಳ ಕಾಲಗಳ ಜೀವನವು ಒಂದಾಗುತ್ತಲೊಂದು ಅನುಭವಕ್ಕೆ ಬಂದಿತು. ಗತಕಾಲದ ಸ್ತ್ರೀ ಪುರುಷರು ನನ್ನ ಸ್ನೇಹಿತರಾದರು. ಸೆರೆಮನೆಯಲ್ಲಿ ಕಾಲಬಾಹುಳ್ಯ ವಿತ್ತು ; ಇಷ್ಟೇ ದಿನಗಳಲ್ಲಿ ಮುಗಿಸಬೇಕೆಂಬ ಆತುರವೂ ಇರಲಿಲ್ಲ. ಆದ್ದರಿಂದ ನನ್ನ ಮನಸ್ಸನ್ನು ಹರಿದು ಬಿಟ್ಟು, ಸ್ವಲ್ಪ ಬೇರಿಳಿಯುವಂತೆ ಮಾಡಿ, ನನ್ನ ಮನೋವೃತ್ತಿಗನುಗುಣವಾಗಿ ಮಗ್ನನಾಗಿ ಪರಿಣಾಮಹೊಂದಿ ಗತಕಾಲದ ಶುಷ್ಕ ಅಸ್ತಿಪಂಜರಕ್ಕೆ ರಕ್ತಮಾಂಸವನ್ನು ತುಂಬಿದೆ.

ಇತ್ತೀಚಿನ ಮತ್ತು ಇನ್ನೂ ಸವಿಾಪಕಾಲದ ಮತ್ತು ವ್ಯಕ್ತಿಗಳಿಗೆ ಮಾತ್ರ ಸಂಬಂಧಿಸಿದುದಾದರೂ ಆಮೇಲೆ ನನ್ನ ಆತ್ಮಕಥೆಯನ್ನು ಬರೆಯಲು ಪ್ರೇರೇಪಿಸಿದ್ದೂ ಅದೇ ತೆರನ ಶೋಧನಾಸಕ್ತಿ.

ಈ ಹನ್ನೆರಡು ವರ್ಷಗಳಲ್ಲಿ ನಾನು ಬಹಳ ಬದಲಾವಣೆಯಾಗಿರಬೇಕು. ತು೦ಬ ಯೋಚನಾ ಪರನಾಗಿದ್ದೇನೆ. ಪ್ರಾಯಶ : ಸಮತೂಕ, ಸಮಚಿತ್ತ ಹೆಚ್ಚಿದೆ, ಒಂದು ವಿಧವಾದ ನಿರ್ಲಿಪ್ತ ಮನೋಭಾವ, ಹೆಚ್ಚಿನ ಆತ್ಮಶಾಂತಿ ಬಂದಿದೆ. ಒಂದು ದುರಂತದಿಂದ ಅಥವಾ ಯಾವುದನ್ನು ನಾನು ಒಂದು ದುರಂತವೆಂದು ಭಾವಿಸಿದ್ದೆನೋ ಅದರಿಂದ ನಾನು ಈಗ ಅಷ್ಟು ಉದ್ರಿಕ್ತನಾಗುವುದಿಲ್ಲ, ಆ ಮನಸ್ಸಿನ ತಳಮಳ, ಕ್ಷೋಭೆ ಕಡಮೆಯಾಗಿದೆ; ಆ ದುರಂತಗಳು ಬಹಳ ದೊಡ ಪ್ರಮಾಣದಲ್ಲಿದ್ದರೂ ಆ ಮನೋವೈಕಲ್ಯವೂ ಬಹುಮಟ್ಟಿಗೆ ತಾತ್ಕಾಲಿಕ, ಇದೆಲ್ಲ ಅನಿವಾರ್ಯವೆಂಬ ಮನೋಭಾವನೆ ನನ್ನಲ್ಲಿ ಬೆಳೆಯುತ್ತಿದೆಯೆ? ಅಥವ ನಾನೇ ಕಠಿಣ ಮನಸ್ಕನಾಗುತ್ತಿದೇನೆಯೆ? ಎಂದು ಆಶ್ಚರ್ಯಪಟ್ಟಿದೇನೆ. ವಯೋಧರ್ಮವೆ ? ಬಲಹೀನತೆಯೆ? ಜೀವನದಲ್ಲಿ ಆಸಕ್ತಿಯ ಅಭಾವವೆ? ಅನೇಕ ವರ್ಷಗಳ ಸೆರೆಮನೆವಾಸದ ಫಲವೆ? ಕಂಡೂ ಕಾಣದಂತೆ ನಿಧಾನವಾಗಿ ಕಳೆದು ಹೋಗುತ್ತಿರುವ ಜೀವಮಾನದ ವ್ಯಯವೆ? ಅಥವ ಕ್ಷಣಕಾಲ ಮನಸ್ಸಿನಲ್ಲಿದ್ದು ಮರುಗಳಿಗೆಯಲ್ಲೇ ತೆರೆಗಳನ್ನು ಮಾತ್ರ ಹಿಂದೆ ಬಿಟ್ಟು ಮಾಯವಾಗುವ ಮನಸ್ಸನ್ನು ತುಂಬಿರುವ ಯೋಚನೆಗಳ ಫಲವೆ? ಸಂಕಟಕ್ಕೆ ಸಿಲುಕಿದ ಮನಸ್ಸು ಬಿಡುಗಡೆಗೆ ಒಂದು ಮಾರ್ಗವನ್ನು ಹುಡುಕುತ್ತದೆ. ಮೇಲಿಂದ ಮೇಲೆ ಆಘಾತಗಳೊದಗಿದರೆ ಇಂದ್ರಿಯಗಳೂ ಮದಡಾಗುತ್ತವೆ; ಮತ್ತು ಪ್ರಪಂಚವೆಲ್ಲ ಇಷ್ಟು ಕೇಡು ಮತ್ತು ಸಂಕಟದಿಂದ ತುಂಬಿರುವಾಗ ಇನ್ನೂ ಸ್ವಲ್ಪ ಹೆಚ್ಚು ಕಡಮೆಯಾದರೂ ಆಗುವುದೇನು ಎಂಬ ಭಾವನೆಯೂ ಬರುತ್ತದೆ. ಆಗ ನಮಗೆ ಉಳಿಯುವುದು ಒಂದುಮಾತ್ರ. ಅದನ್ನು ಮಾತ್ರ ಯಾರೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ: ಧೈರ್ಯದಿಂದ